ಕುಶಾಲನಗರ ಜ.13 NEWS DESK : ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಕರೆ ನೀಡಿದ್ದಾರೆ. ಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಡೆದ ಕೊಪ್ಪ ಭಾರತ ಮಾತಾ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಗಳ ಶಿಬಿರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವ ಪೀಳಿಗೆಯಲ್ಲಿ ಸೇವಾ ಮನೋಭಾವನೆ ಮೂಡಿಸಲು ಸಾಧ್ಯ ಎಂದ ಅವರು, ಶಿಬಿರಾರ್ಥಿಗಳು ಕಳೆದ ಒಂದು ವಾರಗಳ ಅವಧಿಯಲ್ಲಿ ಮಾಡಿದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಸಮಯ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಫಾ.ಎಬಿನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಒಂದು ವಾರಗಳ ಕಾಲ 50ಕ್ಕೂ ಅಧಿಕ ಶಿಬಿರಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿಶಿಷ್ಟ ಅನುಭವವನ್ನು ಪಡೆಯುವ ಅವಕಾಶ ಲಭಿಸಿದೆ. ಶ್ರಮದಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಉಪನ್ಯಾಸ ಕಾರ್ಯಕ್ರಮಗಳು ನಡುವೆ ಕುಶಾಲನಗರ ಮೈಸೂರು ರಸ್ತೆ ನಡುವೆ ಕಾವೇರಿ ನದಿಯ ಎರಡು ಸೇತುವೆಗಳ ಸ್ವಚ್ಛತೆ ಮತ್ತು ಅವುಗಳಿಗೆ ಬಣ್ಣ ಬಳಿಯುವ ಕಾರ್ಯಕ್ರಮ, ರಸ್ತೆ ಬದಿಯಲ್ಲಿ ಅಳವಡಿಸಲಾದ ಸೂಚನಾ ಫಲಕಗಳ ಸ್ವಚ್ಛತಾ ಕಾರ್ಯಕ್ರಮ, ಶಾಲಾ ಆವರಣ ಶುಚಿತ್ವ, ಸಾರ್ವಜನಿಕರಿಗೆ ಕಾನೂನು ಮತ್ತು ಪರಿಸರದ ಬಗ್ಗೆ ತಿಳುವಳಿಕೆ ಕಾರ್ಯಗಾರ , ಗ್ರಾಮೀಣ ಮಹಿಳೆಯರಿಗೆ ಮತ್ತು ಯುವಕರಿಗೆ ನಾಯಕತ್ವ ತರಬೇತಿ ಶಿಬಿರಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಯಿತು ಎಂದು ತಿಳಿಸಿದ ಅವರು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸುವ ಕಾರ್ಯವನ್ನು ರಾಷ್ಟ್ರೀಯ ಸೇವಾ ಯೋಜನೆ ತಿಳಿಸುತ್ತದೆ ಎಂದರು. ಶಿಬಿರದ ಅಧಿಕಾರಿ ಹೆಚ್.ಆರ್.ದಿನೇಶ್ ಅವರ ನೇತೃತ್ವದಲ್ಲಿ ಸಹ ಶಿಬಿರಾಧಿಕಾರಿಗಳಾದ ಕುಮಾರಿ ಬೃಂದಾ, ಕೀರ್ತನ್ ಕುಟ್ಟಪ್ಪ ಅವರ ನೇತೃತ್ವದಲ್ಲಿ ಏಳು ದಿನಗಳ ಕಾಲ ಯಶಸ್ವಿ ಶಿಬಿರ ನಡೆದಿರುವುದಾಗಿ ಫಾ.ಎಬಿನ್ ಹೇಳಿದರು. ಇದೇ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪರವಾಗಿ ಫಾ.ಎಬಿನ್ ಮತ್ತು ಶಿಬಿರ ಅಧಿಕಾರಿ ದಿನೇಶ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಸದಸ್ಯರಾದ ರೇಣುಕಾ ಸ್ವಾಮಿ, ಫಾ ಟಿಟೋ ಥಾಮಸ್, ಫಾ ಜೇಸನ್, ಸಹ ಶಿಬಿರಾಧಿಕಾರಿ ಕುಮಾರಿ ಬೃಂದಾ, ಕೀರ್ತನ್ ಕುಟ್ಟಪ್ಪ ಮತ್ತು ಉಪನ್ಯಾಸಕರು ಇದ್ದರು. ಶಿಬಿರ ಅಧಿಕಾರಿ ಹೆಚ್ ಆರ್ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.