ನಾಪೋಕ್ಲು ಜ.13 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾನತೆಯನ್ನು ಸಾರುತ್ತಾ ಬಂದಿದ್ದು, ಸಮಾಜದಲ್ಲಿ ಎಲ್ಲರೂ ತಮ್ಮ ತಮ್ಮ ಧರ್ಮವನ್ನು ನಿರ್ಭೀತಿಯಿಂದ ಪಾಲನೆ ಮಾಡುವಂತಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕೂರ್ಗ್ ಜಂಇಯ್ಯುತುಲ್ ಉಲಾಮ 1973 ರಿಂದ ತನ್ನ ಯಶಸ್ವಿ ಐವತ್ತು ಸಂವತ್ಸರಗಳನ್ನು ಪೂರೈಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ “ಸತ್ಯವಂತರ ಸತ್ಯದಲ್ಲಿರಿ” ಎಂಬ ಘೋಷವಾಕ್ಯದೊಂದಿಗೆ ಹಜರತ್ ಸೂಫಿ ಶಾಹಿದ್ ಹಾಗೂ ಹಸನ್ ಸಖಾಫಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಚರಿತ್ರೆ ಪ್ರಸಿದ್ಧವಾದ ಎಮ್ಮೆ ಮಾಡಿನಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಜಾತ್ಯತೀತ ಧರ್ಮ ನಿರಪೇಕ್ಷತೆಯ ಸರ್ಕಾರ ಅಧಿಕಾರದಲ್ಲಿದೆ. ಎಲ್ಲಾ ಧರ್ಮದವರು ಸಮಾನತೆಯಿಂದ ಕಾಣುವ ಧೋರಣೆಯನ್ನು ಹೊಂದಿದೆ. ನೂರು ವರ್ಷಗಳ ಕಾಲ ಕೂರ್ಗ್ ಜಮಾತುಲ್ ಉಲಾಮ ಸಂಸ್ಥೆ ಶಕ್ತಿಶಾಲಿಯಾಗಿ ಬೆಳೆದು ಜನಸೇವೆ ಮಾಡುವಂತಾಗಲಿ. ಸಂಘ ಸಂಸ್ಥೆಗಳು ಮನುಕುಲದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅದು ನಮ್ಮೆಲ್ಲರ ಕರ್ತವ್ಯ ಎಂದರು.ಸರ್ಕಾರ ಬಡಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಚುನಾವಣಾ ಅವಧಿಯಲ್ಲಿ ಕೊಟ್ಟ ವಾಗ್ದಾನದಂತೆ ಗ್ಯಾರಂಟಿಗಳ ಅನುಷ್ಠಾನ ಆಗುತ್ತಿದೆ. ಈ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಇತರ ರಾಜ್ಯದಲ್ಲಿನ ಸರ್ಕಾರಗಳು ಘೋಷಿಸುವ ಅನಿವಾರ್ಯತೆಗೆ ಸಿಲುಕಿದೆ ಎಂದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಆಲಿರ ಎರ್ಮು ಹಾಜಿ, ವಕ್ಫ್ ಬೋರ್ಡ್ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರೆಹಮಾನ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ನಾಪೋಕ್ಲು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಕೆ.ಎ.ಮನ್ಸೂರ್ ಆಲಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅನಿಫ್ ಚೋಕಂಡಲಳ್ಳಿ, ಮತಿನ್, ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಸದಸ್ಯರಾದ ರಾಫಿ, ಗಪೂರ್ ,ಪಿ.ಎ.ಹನೀಫ್, ಮತಿನ್, ಕರ್ನಾಟಕ ಮುಸ್ಲಿಂ ಜಮಾಯತ್ ಪ್ರಧಾನ ಕಾರ್ಯದರ್ಶಿ ಮಹಮದ್ ಹಾಜಿ ಕುಂಜಿಲ, ಎಮ್ಮೆಮಾಡು ಮುಸ್ಲಿಂ ಜಮಾಯತ್ ಅಧ್ಯಕ್ಷ ಅಬೂಬಕರ್ ಸಖಾಫಿ, ಎಮ್ಮೆಮಾಡು ಕೂರ್ಗ್ ಜoಇಯ್ಯಯತುಲ್ ಉಲಾಮ ಕೋಶಾಧಿಕಾರಿ ಹುಸೈನ್ ಸಖಾಫಿ ಎಮ್ಮೆಮಾಡು, ಎಮ್ಮೆಮಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಚಂಬರಂಡ ಮಾಹಿನೆ, ಯೂಸುಫ್, ಇಸ್ಮಾಯಿಲ್, ಹನೀಫ್ ಹಾಗೂ ಸಿ.ಎಂ.ಅಜೀದ್ ನಾಪೋಕ್ಲು , ಲತೀಫ್ ಸುಂಟಿಕೊಪ್ಪ, ಯೂಸುಫ್ ಕೊಂಡಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮುಂಜಾನೆ ಸೈಯದ್ ಹಸನ್ ಸಖಾಫ್ ದರ್ಗಾ ಸನ್ನಿಧಿಯಲ್ಲಿ ಝಿಯಾರತ್ ಜರುಗಿತು. ಬಳಿಕ ಕೂರ್ಗ್ ಜಂಇಯ್ಯುತುಲ್ ಉಲಾಮ ಅಧ್ಯಕ್ಷ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದರುಸಿ ಸಖಾಫಿ ಎಮ್ಮೆಮಾಡು ಧ್ವಜಾರೋಹಣ ನೆರವೇರಿಸಿದರು. ಉಲಾಮ ಸಂಗಮವನ್ನು ಜಂಇಯ್ಯಯತುಲ್ ಉಲಾಮ ಕರ್ನಾಟಕ ಇದರ ಅಧ್ಯಕ್ಷ ಝೈನಲ್ ಉಲಾಮ ಅಬ್ದುಲ್ ಹಮೀದ್ ಮುಸ್ಲಿಯರ್ ಮಾಣಿ ಉದ್ಘಾಟಿಸಿದರು. ಖ್ಯಾತ ವಿದ್ವಾಂಸ ಅಬ್ದುಲ್ ಜಲೀಲ್ ಸಖಾಫಿ ತರಗತಿ, ಸಂಘಟನಾ ಚತುರ ಸುಲೇಮಾನ್ ಸಖಾಫಿ ಮಾಳಿಯೇಕಲ್ ನೇತೃತ್ವದಲ್ಲಿ ಸಂಗೀತ ಶಿಬಿರ, ಸೇರಿದಂತೆ ವಿವಿಧ ಧಾರ್ಮಿಕ ತರಬೇತಿ, ಮಾರ್ಗದರ್ಶನ, ಧಾರ್ಮಿಕ ಮುಖಂಡರು ಹಾಗೂ ಧರ್ಮ ಗುರುಗಳಿಂದ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಸುನ್ನಿ ಸಂಘ ಕುಟುಂಬದ ಕಾರ್ಯಕರ್ತರು ಇದರ ಸದುಪಯೋಗವನ್ನು ಪಡೆದುಕೊಂಡರು
ವರದಿ : ದುಗ್ಗಳ ಸದಾನಂದ.