ಕುಶಾಲನಗರ ಜ.13 NEWS DESK : ಹನ್ನೆರಡನೇ ಶತಮಾನದ ಶರಣರು ಸತ್ಯ ಶುದ್ಧವಾದ ಕಾಯಕಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದರು. ನುಡಿದಂತೆ ನಡೆದು ಪ್ರಾತಃಸ್ಮರಣೀಯವಾಗುಳಿದರು. ಶರಣರ ಈ ನಡೆ ಮನುಕುಲಕ್ಕೆ ಎಲ್ಲಾ ಕಾಲಕ್ಕೂ ನಿತ್ಯನೂತನ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಚಿಕ್ಕಹೊಸೂರಿನ ಕೃಷಿಕರಾದ ಜಗದೀಶ್ ಹಾಗೂ ಶೈಲಜಾ ಶರಣ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಯಾವ ಕಾಯಕವೇ ಆಗಲೀ ಸತ್ಯವಾಗಿರಬೇಕು ಹಾಗೂ ಶುದ್ಧವಾಗಿರಬೇಕು. ಕಾರ್ಮಿಕರ ಅಲಭ್ಯದ ಇಂದಿನ ದಿನಗಳಲ್ಲಿ ಶರಣ ದಂಪತಿಗಳಾದ ಜಗದೀಶ್ ಹಾಗೂ ಶೈಲಾ ದಂಪತಿಗಳ ಕೃಷಿ ಸೇವೆಯನ್ನು ಶಿವಪ್ಪ ಶ್ಲಾಘಿಸಿದರು. ಸತತ ಅಧ್ಯಯನ ಹಾಗೂ ನಿರಂತರ ಕಲಿಕೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ತೋರುವ ಮೂಲಕ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡ ಶರಣ ದಂಪತಿಗಳ ಪುತ್ರ ಡಾ.ತೇಜಸ್ವಿ ಕುಮಾರ್ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಡಾ.ತೇಜಸ್ವಿ ಕುಮಾರ್, ವಿದ್ಯೆ ಯಾರೊಬ್ಬರ ಸ್ವತ್ತಲ್ಲ. ಏಕಾಗ್ರತೆ, ನಿರಂತರ ಅಧ್ಯಯನದ ಮೂಲಕ ಡಾಕ್ಟರೇಟ್ ಗಳಿಸಿ ಅತ್ಯುತ್ತಮ ದರ್ಜೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಗಳಿಸಿದ್ದರ ಫಲವಾಗಿ ಸರ್ಕಾರ ಪರಿಗಣಿಸಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಿಸಿತು. ಇಂದಿನ ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೇ ಒಳಿತಿಗಷ್ಟೇ ಬಳಸಿ ಜ್ಞಾನವಂತರಾಗಬೇಕು. ಹೆತ್ತವರ ಸಾಹಸ, ಶ್ರಮ ಹಾಗೂ ತ್ಯಾಗವನ್ನು ಮನಗಂಡು ಪ್ರಾಮಾಣಿಕವಾಗಿ ತೊಡಗಿಸಿಕೊಂಡಲ್ಲಿ ಯಾವ ಸಾಧನೆಯೂ ದೊಡ್ಡದಲ್ಲ. ವಿದ್ಯಾರ್ಥಿ ಹಂತದಿಂದಲೇ ಸನ್ನಡತೆ, ಸಂಸ್ಕಾರ, ಸದಾಚಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಡಾ.ತೇಜಸ್ವಿ ಕುಮಾರ್ ಕರೆಕೊಟ್ಟರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೊಡಗು ಜಿಲ್ಲಾ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ದೀಪಾಕರುಣ್, ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ, ಕೊಡಗು ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಂದೀಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗಣೇಶ್, ಬೆಟ್ಟದಪುರ ಹೋಬಳಿ ಶಸಾಪ ಅಧ್ಯಕ್ಷ ಕೂರ್ಗಲ್ಲು ಶಿವಕುಮಾರಸ್ವಾಮಿ, ಚನ್ನಪಟ್ಟಣನಗರಸಭೆ ಸಹಾಯಕ ಅಭಿಯಂತರ ಕಾರ್ತಿಕ್, ಪ್ರಗತಿಪರ ಕೃಷಿಕ ಸುರಗಳ್ಳಿ ವಿದ್ಯಾಶಂಕರ್, ಮಂಜುನಾಥ್, ಬೆಟ್ಟದಪುರ ರುದ್ರೇಶ್, ಕೊಪ್ಪಾ ಗ್ರಾಪಂ ಸದಸ್ಯ ಸಿ.ಎಸ್. ರೇಣುಕಾ, ಶಿಕ್ಷಕ ಶಿವಲಿಂಗ, ವಿರೂಪಾಕ್ಷ, ಮಹದೇವಪ್ಪ ಹಾಗೂ ಅಜಿತ್ ಇದ್ದರು.