ಕುಶಾಲನಗರ ಜ.15 NEWS DESK : ಚಿಕ್ಕತ್ತೂರು ಹಾಗೂ ದೊಡ್ಡತ್ತೂರು ಪ್ರೆಂಡ್ಸ್ ಬಳಗದ ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಎರಡನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು ಚಿಕ್ಕತ್ತೂರಿನ ಆನೆಕೆರೆ ಕ್ರೀಡಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಿತು. ಪಂದ್ಯಾವಳಿಯಲ್ಲಿ ಕೂಡಿಗೆ ಸುತ್ತಮುತ್ತಲಿನ ವಿವಿಧೆಡೆಗಳಿಂದ ಆಗಮಿಸಿದ್ದ ಹತ್ತು ಕ್ರೀಡಾ ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಸುಂದರನಗರದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಎರಡನೇ ಸ್ಥಾನಕ್ಕೆ ಚಿಕ್ಕತ್ತೂರಿನ ಆರ್.ಸಿ.ಬಿ ತಂಡ, ಮೂರನೇ ಸ್ಥಾನಕ್ಕೆ ಎಸ್.ವಿ.ಕೆ ತಂಡ, ನಾಲ್ಕನೇ ಬಹುಮಾನವನ್ನು ವೀರಭದ್ರ ಕ್ರಿಕೆಟರ್ಸ್ ತಂಡ ಗಳಿಸಿತು. ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟವನ್ನು ಚಿಕ್ಕತ್ತೂರು ಹಾಗೂ ದೊಡ್ಡತ್ತೂರು ಅವಳಿ ಗ್ರಾಮಗಳ ಸಮಾನ ಮನಸ್ಕರಾದ ಸಂತೋಷ್ ಗೌಡ, ಸುನಿಲ್ ಗೌಡ, ಕೃಷ್ಣೇಗೌಡ, ಪ್ರವೀಣ್, ಚೇತನ್ ಕುಮಾರ್, ಪುಟ್ಟೇಗೌಡ ಆಯೋಜಿಸಿದ್ದರು. ಪಂದ್ಯಾವಳಿಯ ತೀರ್ಪುಗಾರರಾಗಿ ಗುಮ್ಮನಕೊಲ್ಲಿ ಗ್ರಾಮದ ಮಣಿ, ವಸಂತ ಹಾಗೂ ಖಾದರ್ ಕಾರ್ಯನಿರ್ವಹಿಸಿದರು. ಪಂದ್ಯ ವಿಜೇತರಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಗಳನ್ನು ವಿತರಿಸಿ ಮಾತನಾಡಿದ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವಿ.ಪಿ.ಶಶಿಧರ್ ಗ್ರಾಮೀಣ ಪ್ರದೇಶಗಳ ಯುವ ಮನಸ್ಕರ ಮನರಂಜನೆಗೆ, ಪರಸ್ಪರ ಸ್ನೇಹ ಸೌಹಾರ್ದ ಬೆಸೆಯಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ. ಹಳ್ಳಿಗಾಡು ಪ್ರದೇಶಗಳ ಯುವಕರು ದುಷ್ಚಟ ಹಾಗೂ ದುರಭ್ಯಾಸಗಳನ್ನು ದೂರವಿಟ್ಟು ಜಾಗೃತ ಸಮಾಜ ಕಟ್ಟಬೇಕೆಂದು ಕರೆ ನೀಡಿದರು. ಕೂಡಿಗೆ ಗ್ರಾಪಂ ಸದಸ್ಯ ಅನಂತು, ಕುಶಾಲನಗರ ಪುರಸಭೆ ಸದಸ್ಯ ನವೀನ್, ಉದ್ಯಮಿ ವಾಸು, ವಿಜಯ್, ರವಿ ಗುಮ್ಮನಕೊಲ್ಲಿ, ಜಿಬಿ ರತ್ನಾಕರ್, ಸಣ್ಣಸ್ವಾಮಿ, ಚೇತನ್ ಬೋಪಯ್ಯ, ಇಬ್ರಾಹಿಂ, ಮಧುಚಂದ್ರ ಇದ್ದರು. ಚೇತನ್ ಸ್ವಾಗತಿಸಿ, ಸುನಿಲ್ ವಂದಿಸಿದರು.