ವಿರಾಜಪೇಟೆ NEWS DESK ಜ.19 : ಕೇರಳ ರಾಜ್ಯದ ಒಂದಂಕಿ ಲಾಟರಿ ಫಲಿತಾಂಶವನ್ನು ಆಧಾರವಾಗಿಸಿಕೊಂಡು ಆನ್ ಲೈನ್ ಮೂಲಕ ಜೂಜಾಟ ನಡೆಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ವಿರಾಜಪೇಟೆ ಪಟ್ಟಣದ ಗಾಂಧಿನಗರದ ನಿವಾಸಿ ಕೆ.ಎಂ.ರಶೀದ್ (47) ಬಂಧಿತ ಆರೋಪಿ. ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧವಿದ್ದರೂ ಕೇರಳ ರಾಜ್ಯದ ಲಾಟರಿ ಟಿಕೆಟ್ ನ ಫಲಿತಾಂಶವನ್ನು ಬಳಸಿಕೊಂಡು ಆನ್ ಲೈನ್ ನಲ್ಲಿ ದಂಧೆ ನಡೆಸುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆ ಪೊಲೀಸರು ದಾಳಿ ನಡೆಸಿದರು. ಆರೋಪಿ ಬಳಿಯಿಂದ 6,150 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಿರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಅವರ ಅದೇಶದ ಮೇರೆಗೆ ವಿರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ನಗರ ಠಾಣೆಯ ಪಿ.ಎಸ್.ಐ ಪ್ರಮೋದ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. (ವರದಿ : ಕಿಶೋರ್ ಕುಮಾರ್ ಶೆಟ್ಟಿ)