ಮಡಿಕೇರಿ ಜ.20 NEWS DESK : ಕೊಡಗು ಜಿಲ್ಲೆಯ ಅರೆಭಾಷಿಕ ಗೌಡ ಜನಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ಸುಳ್ಳು ಇತಿಹಾಸ ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಅರೆಭಾಷಿಕ ಗೌಡ ಸಂಘಟನೆಗಳು ಮಡಿಕೇರಿಯಲ್ಲಿ ಬೃಹತ್ “ಗೌಡ ಸಮುದಾಯದ ಸ್ವಾಭಿಮಾನದ ನಡೆ” ಮೌನ ಪ್ರತಿಭಟನೆ ನಡೆಯಿತು. ಮಡಿಕೇರಿಯ ಕೊಡಗು ಗೌಡ ಯುವ ವೇದಿಕೆ, ಕೊಡಗು ಗೌಡ ಮಹಿಳಾ ಒಕ್ಕೂಟ, ಕುಶಾಲನಗರದ ಗೌಡ ಯುವಕ ಸಂಘ ಸೇರಿದಂತೆ ವಿವಿಧ ಗೌಡ ಸಂಘಟನೆಗಳ ನೇತೃತ್ವದಲ್ಲಿ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಗಾಂಧಿ ಮೈದಾನದವರೆಗೆ ಸಾವಿರಾರು ಗೌಡರು ಯಾವುದೇ ಘೋಷಣೆಗಳನ್ನು ಕೂಗದೆ ಶಿಸ್ತುಬದ್ಧವಾಗಿ ಬೃಹತ್ ಮೆರವಣಿಗೆ ನಡೆಸಿದರು.
::: ಸೇನಾನಿಗಳಿಗೆ ಗೌರವ ::: ಇಂದು ಬೆಳಿಗ್ಗೆ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಹಾಗೂ ಫೀಲ್ಟ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆಗೆ ಗೌರವ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಮೆರವಣಿಗೆ ಸಾಗಿ ಬರುವಾಗ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆ ಹಾಗೂ ರಾಷ್ಟ್ರ ಕವಿ ಕುವೆಂಪು ಅವರ ಪುತ್ಥಳಿಗೆ ಗೌಡ ಸಮಾಜಗಳ ಪ್ರಮುಖರು ಪುಷ್ಪ ನಮನದೊಂದಿಗೆ ಗೌರವ ಅರ್ಪಿಸಿದರು. ಸಾಂಪ್ರದಾಯಿಕ ಉಡುಪು ತೊಟ್ಟ ಅರೆಭಾಷಾ ಪುರುಷರು ಹಾಗೂ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿದರು. ಅವರನ್ನು ಹಿಂಬಾಲಿಸಿ ಸಹಸ್ರಾರು ಗೌಡ ಜನಾಂಗ ಬಾಂಧವರು ಹೆಜ್ಜೆ ಹಾಕಿ ಜಿಲ್ಲಾಡಳಿತದ ಗಮನ ಸೆಳೆದರು. ಮೌನ ಮೆರವಣಿಗೆಯಲ್ಲಿ ಜಿಲ್ಲೆಯ ಬಹುತೇಕ ಗೌಡ ಸಮಾಜಗಳ ಪ್ರತಿನಿಧಿಗಳು ಸದಸ್ಯರು ಸೇರಿದಂತೆ, ಬೆಂಗಳೂರು, ಮೈಸೂರು, ಪಿರಿಯಾಪಟ್ಟಣ, ಹುಣಸೂರು, ಸುಳ್ಯ ಗೌಡ ಸಮಾಜದ ಪ್ರತಿನಿಧಿಗಳು, ಜಿಲ್ಲೆಯ ಗಡಿ ಭಾಗವಾದ ಸಂಪಾಜೆ, ಚೆಂಬು ವ್ಯಾಪ್ತಿಯಲ್ಲಿನ ಅರೆಭಾಷಿಕ ಗೌಡರು ಪಾಲ್ಗೊಂಡರು. ಸರದಿಯ ಸಾಲಿನಲ್ಲಿ ಸಾಗಿದ ಮೆರವಣಿಗೆ ಸರಿ ಸುಮಾರು ಒಂದೂವರೆ ಕಿ.ಮೀ ನಷ್ಟು ದೂರದ ವರೆಗೆ ವ್ಯಾಪಿಸಿತ್ತು. ಘೋಷಣೆಗಳನ್ನು ಕೂಗದ ಪ್ರತಿಭಟನಾಕಾರರು ಭಿತ್ತ್ತಿಪತ್ರಗಳ ಮೂಲಕ ಮೌನ ಧ್ವನಿಯನ್ನು ಮೊಳಗಿಸಿದರು. “ಕೊಡಗು ಒಂದು ಸಮುದಾಯದ ಸ್ವತ್ತಲ್ಲ, ಸರ್ವ ಸಮುದಾಯದ ಅಮೂಲ್ಯ ಸಂಪತ್ತು”, “ಜನಾಂಗ ಕೃಷಿಗೂ ಸೈ ಪ್ರತ್ಯುತ್ತರಕ್ಕೂ ಸೈ”, “ನಮ್ಮ ಗತ್ತು ಕೇವಲ ಉಡುಪಿನಿಂದ ಬಂದದ್ದಲ್ಲ, ಅನುವಂಶೀಯತೆ ಮತ್ತು ಸುಸಂಸ್ಕೃತಿಯಿಂದ ಬಂದ ಗತ್ತು” ಸೇರಿದಂತೆ ವಿವಿಧ ಸಂದೇಶಗಳ ಮೂಲಕ ಗಮನ ಸೆಳೆದರು.
::: ಸಿಎನ್‍ಸಿ ನಿಷೇಧಕ್ಕೆ ಆಗ್ರಹ ::: ಗಾಂಧಿ ಮೈದಾನದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರ ಬಳಿ ಬಂದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಅರೆಭಾಷಿಕ ಗೌಡ ಸಂಘಟನೆಗಳ ಪ್ರಮುಖರು ಮನವಿ ಪತ್ರವನ್ನು ಸಲ್ಲಿಸಿ ಸಿಎನ್‍ಸಿ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಸಿಎನ್‍ಸಿಯ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಸಂಗಡಿಗರು ಅರೆಭಾಷಿಕ ಗೌಡ ಜನಾಂಗದವರು ವಲಸೆ ಬಂದವರೆಂದು ಅಪಪ್ರಚಾರ ಮಾಡಿ ನಿರಂತರವಾಗಿ ಪ್ರಚೋದನಾಕಾರಿ ಮತ್ತು ಆಕ್ಷೇಪಾರ್ಹ ನಿಂದನೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು, ನಾಚಪ್ಪ ಅವರನ್ನು ಬಂಧಿಸಬೇಕು ಮತ್ತು ಸಿಎನ್‍ಸಿ ಸಂಘಟನೆಯನ್ನು ನಿಷೇಧಿಸಬೇಕು. ಪೊನ್ನಂಪೇಟೆಯಲ್ಲಿ ಅರೆಭಾಷಾ ಗೌಡ ಜನಾಂಗವನ್ನು ನಿಂದಿಸಿ ಹೇಳಿಕೆಗಳನ್ನು ನೀಡಿರುವ ಸಿಎನ್‍ಸಿಯ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ತಾವು ಸಲ್ಲಿಸಿರುವ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕಾನೂನಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ, ಕಾನೂನು ಸಲಹೆಗಾರ ಕೊಂಬಾರನ ರೋಷನ್ ಗಣಪತಿ, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ, ಉಪಾಧ್ಯಕ್ಷೆ ಬೈತಡ್ಕ ಜಾನಕಿ ಬೆಳ್ಳಿಯಪ್ಪ ಸೇರಿದಂತೆ ಪದಾಧಿಕಾರಿಗಳು, ಜಿಲ್ಲೆ ಮತ್ತು ಹೊರ ಜಿಲ್ಲೆಯ ಗೌಡ ಸಮಾಜಗಳ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.