ಮಡಿಕೇರಿ ಜ.22 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಲಾಗಿದ್ದು, ಇದನ್ನು ಮಡಿಕೇರಿ ಕೊಡವ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಕೊಡವ ಸಮಾಜದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಎನ್.ಯು.ನಾಚಪ್ಪ ಅವರನ್ನು ಬಂಧಿಸಿದರೆ ಕೊಡವ ಸಮಾಜದ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಕಳೆದ ಅನೇಕ ವರ್ಷಗಳಿಂದ ಕೊಡಗಿನ ಮೂಲ ನಿವಾಸಿ ಕೊಡವ ಜನಾಂಗದ ಉಳಿವಿಗಾಗಿ ನಿರಂತರ ಪ್ರತಿಭಟನೆ ಮತ್ತು ಕಾನೂನು ಹೋರಾಟಗಳನ್ನು ನಡೆಸಿಕೊಂಡು ಬರುವ ಮೂಲಕ ಕೊಡವ ನಾಯಕರಾಗಿ ಗುರುತಿಸಿಕೊಂಡಿರುವ ಎನ್.ಯು.ನಾಚಪ್ಪ ಅವರ ವಿರುದ್ಧದ ಪ್ರಕರಣಗಳನ್ನು ತಕ್ಷಣ ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ. ಕಟ್ಟೆಮಾಡು ಗ್ರಾಮದ ಶ್ರೀಮಹಾ ಮೃತ್ಯುಂಜಯ ದೇವಾಲಯದ ಉತ್ಸವದಲ್ಲಿ ಕೊಡವ ಜನಾಂಗಕ್ಕೆ ಆದ ಅವಮಾನವನ್ನು ಎನ್.ಯು.ನಾಚಪ್ಪ ಅವರು ಖಂಡಿಸಿದ್ದಾರೆ. ಕೊಡವರ ಪರ ಧ್ವನಿಯಾಗಿರುವ ನಾಚಪ್ಪ ಅವರ ವಿರುದ್ದ ಕಾನೂನು ಕ್ರಮ ಕೈಗೊಂಡು, ಬಂಧಿಸಿ ಹೋರಾಟವನ್ನು ನಿಗ್ರಹಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದೆ. ಎನ್.ಯು.ನಾಚಪ್ಪ ಅವರ ಬಂಧನವಾದರೆ ಮಡಿಕೇರಿ ಕೊಡವ ಸಮಾಜದ ನೇತೃತ್ವದಲ್ಲಿ ಬೃಹತ್ ಹೋರಾಟವನ್ನು ರೂಪಿಸುವುದಾಗಿ ತಿಳಿಸಿದೆ.