ಮಡಿಕೇರಿ NEWS DESK ಫೆ.2 : ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳ ಸಂಸ್ಕೃತಿಯ ಭದ್ರತೆಗಾಗಿ ಮತ್ತು ಹಕ್ಕುಗಳಿಗಾಗಿ ಒತ್ತಾಯಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಟ್ಟದಿಂದ ಮಡಿಕೇರಿಯವರೆಗೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕೊಡವರ ಶಾಂತಿಯುತ ಪಾದಯಾತ್ರೆ ಆರಂಭಗೊಂಡಿತು. ಎಲ್ಲಾ ಕೊಡವ ಸಮಾಜ, ಕೊಡವ ಸಂಘಟನೆಗಳು, ಕೊಡವ ಭಾಷಿಕ ಸಮುದಾಯಗಳ ಸಂಘಟನೆಗಳು, ಎಲ್ಲಾ ಕೊಡವ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕುಟ್ಟದಿಂದ ಇಂದು ಪಾದಯಾತ್ರೆ ಆರಂಭಿಸಿದರು. ಎಲ್ಲಾ ದೇಶತಕ್ಕರು, ಕೊಡವ ಸಮಾಜ, ಭಾಷಿಕ ಸಮುದಾಯಗಳ ಸಮಾಜದ ಮುಖ್ಯಸ್ಥರ ಸಮ್ಮುಖದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕುಟ್ಟ, ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು ಮೂಲಕ ನಡೆಯುವ ಈ ಬೃಹತ್ ಪಾದಯಾತ್ರೆ ಅಂತಿಮವಾಗಿ ಫೆ.7ರಂದು ಮೇಕೇರಿಯಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ತಲುಪಲಿದೆ.