ಮಡಿಕೇರಿ ಫೆ.1 NEWS DESK : ಕೇಂದ್ರ ಸರಕಾರ ಇಂದು ಮಂಡಿಸಿರುವ ಬಜೆಟ್ ದೆಹಲಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಜೆಟ್ ಆಗಿದ್ದು, ಕೇವಲ ಬ್ರ್ಯಾಂಡ್ ಗಳಿಗಷ್ಟೇ ಸೀಮಿತವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಟೀಕಿಸಿದ್ದಾರೆ. ಆತ್ಮ ನಿರ್ಭರ್, ವಿಕಾಸ್ ಭಾರತ್ ಎಂದೆಲ್ಲಾ ಪ್ರಸ್ತಾಪಿಸಲಾಗಿದೆ, ಆದರೆ ಕಳೆದ ಹಲವು ವರ್ಷಗಳಿಂದ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆಗಳಿಗೆ ಇನ್ನೂ ಕೂಡ ಸ್ಪಂದಿಸಿಲ್ಲ. ಬಡತನ ನಿರ್ಮೂಲನೆ ಮಾಡುವುದಾಗಿ ಕೇಂದ್ರ ಹೇಳಿಕೊಂಡಿದೆ, ಆದರೆ ದೇಶದ ಹಸಿವಿನ ಸೂಚ್ಯಂಕ 106 ನೇ ಸ್ಥಾನದಲ್ಲಿದೆ. ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಿಲ್ಲ, ಕೋವಿಡ್ ಸಂದರ್ಭದಲ್ಲಿ ಶೇ.80 ರಷ್ಟು ಸಣ್ಣ ಕೈಗಾಗಿಕೆಗಳು ಮುಚ್ಚಿ ಹೋದವು, ಇವುಗಳ ಪುನರ್ ಸ್ಥಾಪನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತೆರಿಗೆ ವಿನಾಯಿತಿ ರೂ.12 ಲಕ್ಷಕ್ಕೆ ಏರಿಕೆ ಮಾಡಿದ್ದರೂ ಸ್ಲ್ಯಾಬ್ ಗಳು ರೂ.4 ಲಕ್ಷದಿಂದಲೇ ಆರಂಭಗೊಳ್ಳುತ್ತದೆ. ಒಟ್ಟಿನಲ್ಲಿ ಮೂರನೇ ಅವಧಿಯ ಬಜೆಟ್ ಮಂಡನೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎನ್‍ಡಿಎ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.











