ಮಡಿಕೇರಿ ಫೆ.1 NEWS DESK : ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ಶೈಕ್ಷಣಿಕ ಶಾಲಾ ಯೋಜನೆ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ(ಟ್ಯಾಕ್ಸಿ), ಸ್ವಯಂ ಉದ್ಯೋಗ ಸಾಲ ಯೋಜನೆ(ವಾಣಿಜ್ಯ ಬ್ಯಾಂಕ್‍ಗಳ ಸಹಯೋಗದಲ್ಲಿ), ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ ಹೀಗೆ ಹಲವು ಯೋಜನೆಗಳಿದ್ದು, ಇವುಗಳನ್ನು ಬಳಸಿಕೊಂಡು ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕು. ಮಡಿವಾಳ ಮಾಚಿದೇವರ ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಜಿ.ಪಂ.ಸಿಇಒ ತಿಳಿಸಿದರು. ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಮಾತನಾಡಿ ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿ ನಾಡಿನಲ್ಲಿ ತಮ್ಮದೇ ಆದ ಕ್ರಾಂತಿ ಉಂಟು ಮಾಡಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರ ಜೊತೆ ಮಡಿವಾಳ ಮಾಚಿದೇವರು ತಮ್ಮ ವೃತ್ತಿಯನ್ನು ಗೌರವಿಸಿ ಸಮಾಜದಲ್ಲಿ ಎಲ್ಲರೂ ಸಮಾನರೂ ಎಂಬ ಸಂದೇಶ ಸಾರಿದ್ದಾರೆ ಎಂದು ಹೇಳಿದರು. ಮಡಿವಾಳ ಮಾಚಿದೇವರ ವೈಚಾರಿಕತೆ, ವೈಜ್ಞಾನಿಕತೆ ಮೆಚ್ಚುವಂತದ್ದು, ಮಡಿವಾಳ ಮಾಚಿದೇವರ ವಚನಗಳು ಶ್ರೇಷ್ಠವಾಗಿದ್ದು, ಪ್ರತಿಯೊಂದು ವಚನಗಳು ಅರ್ಥಪೂರ್ಣವಾಗಿವೆ. ಮಡಿವಾಳ ಮಾಚಿದೇವರು 12 ನೇ ಶತಮಾನದಲ್ಲಿ ವಚನಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದಾರೆ ಎಂದು ನುಡಿದರು. ಮಡಿವಾಳ ಮಾಚಿದೇವರು ಬಟ್ಟೆ ಶುಚಿಗೊಳಿಸುವ ಮೂಲಕ ಶುದ್ಧವಾಗಿದ್ದರೆ ಜೀವನವೇ ಸಾರ್ಥಕ ಎಂಬುದನ್ನು ಸಾರಿದ್ದಾರೆ ಎಂದರು. 12ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪ್ರುಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ’ ಅತ್ಯಂತ ಪ್ರಕಾಶಮಾನವಾಗಿ ಕಂಡುಬರುವರು ಎಂದು ಬಿ.ಸಿ.ಶಂಕರಯ್ಯ ಪ್ರತಿಪಾದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ದೊಡ್ಡೇಗೌಡ ಮಾತನಾಡಿ ಮಡಿವಾಳ ಮಾಚಿದೇವರ ಜೀವನ ಮೌಲ್ಯವನ್ನು ತಿಳಿದುಕೊಳ್ಳಬೇಕು. ಕಾಯಕವೇ ಕೈಲಾಸವೆಂಬಂತೆ ವೃತ್ತಿಯಿಂದ ದೇವರನ್ನು ಕಾಣಬೇಕು ಎಂದು ಶರಣರು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಂದು ವೃತ್ತಿಯನ್ನು ಗೌರವಿಸಬೇಕು ಎಂದರು. 12ನೇ ಶತಮಾನದಲ್ಲಿ ಎಲ್ಲರನ್ನು ಒಳಗೊಂಡು ಒಟ್ಟುಗೂಡಿಸಿ ಸಮ ಸಮಾಜ ನಿರ್ಮಾಣಕ್ಕೆ ಶರಣರು ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಮಡಿವಾಳ ಮಾಚಿದೇವರು ಸಹ ವೃತ್ತಿಯಿಂದ ಕಾಯಕವನ್ನು ಕಂಡಿದ್ದಾರೆ ಎಂದರು. ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪಿ.ಜಿ.ಸುಕುಮಾರ್ ಅವರು ಮಾತನಾಡಿ ಸರ್ಕಾರದ ವತಿಯಿಂದ ಫೆ.1 ರಂದು ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಗುತ್ತದೆ. ಮಡಿವಾಳರ ಅಭಿವೃದ್ಧಿ ಸಂಘದಿಂದ ಇದೇ ಫೆಬ್ರವರಿ, 16 ರಂದು ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯರಾದ ಅನಸೂಯ ಮಾತನಾಡಿ, 12ನೇ ಶತಮಾನದಲ್ಲಿ ವಚನಗಳ ಮೂಲಕ ಶರಣರು ಜಾಗೃತಿ ಮೂಡಿಸಿದ್ದಾರೆ. ಆ ನಿಟ್ಟಿನಲ್ಲಿ ಮಡಿವಾಳ ಮಾಚಿದೇವರು ಬಸವಣ್ಣ ಅವರ ಜತೆಗೂಡಿ ಸಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಿ.ಪಿ.ಕವಿತ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಮಹಾದೇವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಶಿವಶಂಕರ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಇತರರು ಇದ್ದರು.