ಮಡಿಕೇರಿ NEWS DESK ಫೆ.2 : ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟçಪತಿ ದ್ರೌಪದಿ ಮುರ್ಮು ಅವರ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ನೀಡಿರುವ “ಬಡಪಾಯಿ ಮಹಿಳೆ” ಎಂಬ ಹೇಳಿಕೆ ಖಂಡನೀಯ ಮತ್ತು ಇದು ಬುಡಕಟ್ಟು ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿಯ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪರಿಶಿಷ್ಟರ ಮತಬ್ಯಾಂಕ್ ನಿಂದ ಶ್ರೀಮಂತ ರಾಜಕಾರಣ ಮಾಡಿ ದೇಶದ ಎಲ್ಲಾ ಅಧಿಕಾರವನ್ನು ಅನುಭವಿಸಿದ ಕಾಂಗ್ರೆಸ್ಸಿಗರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಆರಂಭಗೊಂಡು ಇಲ್ಲಿಯವರೆಗೆ ಪರಿಶಿಷ್ಟ ಸಮುದಾಯವನ್ನು ಅಪಮಾನಿಸುತ್ತಲೇ ಬಂದಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷ ಪರಿಶಿಷ್ಟರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ರಾಷ್ಟ್ರಪತಿಗಳ ಕುರಿತು ಸೋನಿಯಾಗಾಂಧಿ ಅವರು ನೀಡಿರುವ ಕೀಳು ಅಭಿರುಚಿಯ ಹೇಳಿಕೆಯೇ ಸಾಕ್ಷಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ಸಿಗರ ಮತಬ್ಯಾಂಕ್ ರಾಜಕಾರಣದ ಬಣ್ಣ ಬಯಲಾಗುತ್ತಿದ್ದು, ಪರಿಶಿಷ್ಟರು ಜಾಗೃತರಾಗುತ್ತಿದ್ದಾರೆ. ದೇಶದ ಉನ್ನತ ಹುದ್ದೆಯನ್ನು ಶ್ರೀಮಂತರು ಹಾಗೂ ಮೇಲ್ವರ್ಗದವರು ಮಾತ್ರ ಅಲಂಕರಿಸಬೇಕೆ, ಪರಿಶಿಷ್ಟರು ಅಥವಾ ಬಡವರು ಅಧಿಕಾರದಲ್ಲಿ ಇರಬಾರದೇ ಎಂದು ಪ್ರಶ್ನಿಸಿದ್ದಾರೆ. ಸೋನಿಯಾಗಾಂಧಿ ಅವರ ಹೇಳಿಕೆಯನ್ನು ಇಡೀ ದೇಶವೇ ವಿರೋಧಿಸುತ್ತಿದೆ. ಕಾಂಗ್ರೆಸ್ ಪಕ್ಷ ತಕ್ಷಣ ಬುಡಕಟ್ಟು ಸಮುದಾಯ ಹಾಗೂ ದೇಶದ ಜನರ ಕ್ಷಮೆಯಾಚಿಸಬೇಕೆಂದು ಎಂ.ಎಂ.ಪರಮೇಶ್ವರ ಒತ್ತಾಯಿಸಿದ್ದಾರೆ. *ಖರ್ಗೆ ಹೇಳಿಕೆ ಖಂಡನೀಯ* ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡುವುದು ಹಿಂದೂ ಧಾರ್ಮಿಕ ನಂಬಿಕೆಯಾಗಿದೆ. ಆದರೆ ಈ ನಂಬಿಕೆಯನ್ನೇ ಅವಮಾನಿಸುವ ರೀತಿಯಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆಯಾಗುತ್ತದೆಯೇ, ಹಸಿದವರಿಗೆ ಆಹಾರ, ಯುವಕರಿಗೆ ಉದ್ಯೋಗ ಸಿಗುತ್ತದೆಯೇ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಇದು ಹಿಂದೂಗಳ ಭಾವನೆಗೆ ದಕ್ಕೆ ತಂದ ಹೇಳಿಕೆಯಾಗಿತ್ತು ಇದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡದ ಮಲ್ಲಿಕಾರ್ಜುನ ಖರ್ಗೆ ಅವರು ಸುದೀರ್ಘ ಕಾಲ ದೇಶದ ರಾಜಕಾರಣದಲ್ಲಿದ್ದು, ಬಡತನ ನಿರ್ಮೂಲನೆ ಮಾಡಿದ್ದಾರೆಯೇ, ಹಸಿದವರಿಗೆ ಅನ್ನ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದಾರೆಯೇ, 70 ವರ್ಷಗಳಿಗೂ ಅಧಿಕ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಯಾಕೆ ಬಡತನ ನಿರ್ಮೂಲನೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. *ಹಿಂದೂಗಳಿಗೆ ಒಂದೇ ದೇಶ* ಹಿಂದೂ ಸಮಾಜಕ್ಕೆ ಇರುವುದು ಒಂದೇ ದೇಶ, ಅದು ಭಾರತ. ಭಾರತವನ್ನು ಹಿಂದೂ ದೇಶ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಹಿಂದೂ ದೇಶ”ದ ಬೇಡಿಕೆಗೆ ಪ್ರತಿ ಬಾರಿ ಆಕ್ಷೇಪ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ಭಾಗಮಂಡಲದಲ್ಲಿ ಅವರು ನೀಡುತ್ತಿರುವ ಹೇಳಿಕೆ ಖಂಡನೀಯವೆಂದು ಎಂ.ಎಂ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. *ಉತ್ತಮ ಬಜೆಟ್* ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಉತ್ತಮವಾಗಿದ್ದು, ಜನಸಾಮಾನ್ಯರು, ಮಧ್ಯಮವರ್ಗ ಹಾಗೂ ರೈತಪರವಾಗಿದೆ. ತೆರಿಗೆ ವಿನಾಯಿತಿಯನ್ನು 12 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿದ್ದು, 100 ಕೃಷಿ ಜಿಲ್ಲೆಗಳನ್ನು ಆಯ್ಕೆ ಮಾಡಿ ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆ ಅತ್ಯುತ್ತಮವಾಗಿದೆ. ಔಷಧಿಗಳ ಬೆಲೆ ಕಡಿಮೆ ಮಾಡಲಾಗಿದೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಕೇಂದ್ರ ಸರಕಾರಕ್ಕಿರುವ ಜನಪರ ಕಾಳಜಿಯನ್ನು ತೋರುತ್ತದೆ. ಸ್ವದೇಶಿ ಬಟ್ಟೆಗಳು, ಟಿವಿ, ಮೊಬೈಲ್ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿ ಮಧ್ಯಮ ವರ್ಗಕ್ಕೆ ಸಹಾಯ ಮಾಡಲಾಗಿದೆ. ಕೇಂದ್ರ ಜನಪರ ಕಾಳಜಿಯಿಂದ ಉತ್ತಮ ಬಜೆಟ್ ನ್ನು ಮಂಡಿಸಿದ್ದರೂ ವಿರೋಧ ಪಕ್ಷಗಳು ಮೊಸರನ್ನದಲ್ಲಿ ಕಲ್ಲು ಹುಡುಕುತ್ತಿವೆ ಎಂದು ಟೀಕಿಸಿದ್ದಾರೆ.