ಮಡಿಕೇರಿ NEWS DESK ಫೆ.2 : ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳ ಸಂಸ್ಕೃತಿಯ ಭದ್ರತೆಗಾಗಿ ಮತ್ತು ಹಕ್ಕುಗಳಿಗಾಗಿ ಒತ್ತಾಯಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಟ್ಟದಿಂದ ಮಡಿಕೇರಿಯವರೆಗೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕೊಡವರ ಶಾಂತಿಯುತ ಪಾದಯಾತ್ರೆ ಆರಂಭಗೊಂಡಿತು. ಎಲ್ಲಾ ಕೊಡವ ಸಮಾಜ, ಕೊಡವ ಸಂಘಟನೆಗಳು, ಕೊಡವ ಭಾಷಿಕ ಸಮುದಾಯಗಳ ಸಂಘಟನೆಗಳು, ಎಲ್ಲಾ ಕೊಡವ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕುಟ್ಟದಿಂದ ಇಂದು ಪಾದಯಾತ್ರೆ ಆರಂಭಿಸಿದರು. ಎಲ್ಲಾ ದೇಶತಕ್ಕರು, ಕೊಡವ ಸಮಾಜ, ಭಾಷಿಕ ಸಮುದಾಯಗಳ ಸಮಾಜದ ಮುಖ್ಯಸ್ಥರ ಸಮ್ಮುಖದಲ್ಲಿ ಕುಟ್ಟ ಬಸ್ ನಿಲ್ದಾಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕುಟ್ಟದಿಂದ ಟಿ.ಶೆಟ್ಟಿಗೇರಿ ವರೆಗೆ 15 ಕಿ.ಮೀ ದೂರ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಯಾವುದೇ ಘೋಷಣೆಗಳನ್ನು ಕೂಗದೆ ಸಾಗಿದರು. ಸುಮಾರು 4 ರಿಂದ 5 ಕಿ.ಮೀ ದೂರದ ವರೆಗೆ ಸಾವಿರಾರು ಸಂಖ್ಯೆಯ ಕೊಡವರ ಸಾಲು ಕಂಡು ಬಂತು. ಪಾದಯಾತ್ರೆಯಲ್ಲಿ ಸಾಗುವವರಿಗೆ ಅಲ್ಲಲ್ಲಿ ಆಹಾರ ಮತ್ತು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಆಂಬ್ಯುಲೆನ್ಸ್ ಜೊತೆಯಲ್ಲೇ ಸಾಗಿತು, ಪೊಲೀಸರು ಕೂಡ ಇದ್ದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸದಸ್ಯ ಅರುಣ್ ಮಾಚಯ್ಯ, ವಿವಿಧ ಸಂಘಟನೆಗಳ ಪ್ರಮುಖರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ರಾಜೀವ್ ಬೋಪಯ್ಯ, ಮಾಳೇಟಿರ ಶ್ರೀನಿವಾಸ್, ಚಾಮೆರ ದಿನೇಶ್ ಬೆಳ್ಯಪ್ಪ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. *85 ಕಿ.ಮೀ ಪಾದಯಾತ್ರೆ* ಕುಟ್ಟ, ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು ಮೂಲಕ ನಡೆಯುವ ಈ ಬೃಹತ್ ಪಾದಯಾತ್ರೆ ಅಂತಿಮವಾಗಿ ಫೆ.7ರಂದು ಮೇಕೇರಿಯಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ತಲುಪಲಿದೆ. ಈ ಪಾದಯಾತ್ರೆ ಸುಮಾರು 85 ಕಿ.ಮೀ ದೂರವನ್ನು ಕ್ರಮಿಸಲಿದೆ. ಅಂತಿಮವಾಗಿ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿ ಇರುವ ಕೊಡವ ಸಮಾಜ ಮಂದ್’ನಲ್ಲಿ ಸಮಾವೇಶಗೊಳ್ಳಲಿದೆ. ಮಂದ್‌ನಲ್ಲಿ ಸರಕಾರದ ಪ್ರತಿನಿಧಿಗೆ ನಮ್ಮ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸುತ್ತೇವೆ. ಸಂವಿಧಾನ ಬದ್ಧವಾಗಿರುವ ನಮ್ಮ ಹಕ್ಕನ್ನು ಪ್ರತಿಪಾದಿಸುವ ಮೂಲಕ ಬೇಡಿಗಳ ಈಡೇರಿಕೆಗೆ ಒತ್ತಾಯಿಸಲಾಗುತ್ತದೆ ಎಂದು ಪರದಂಡ ಸುಬ್ರಮಣಿ ಕಾವೇರಪ್ಪ ತಿಳಿಸಿದ್ದಾರೆ. ಕೊಡವ ಮತ್ತು ಭಾಷಿಕ ಸಮುದಾಯಗಳ ಸಂಸ್ಕೃತಿ, ಭದ್ರತೆ, ಸಂವಿಧಾನಬದ್ದ ಹಕ್ಕಿಗಾಗಿ ಎಲ್ಲೆಲ್ಲೂ ವ್ಯಾಪಕ ಅಗ್ರಹ ಕೇಳಿ ಬರುತ್ತಿದೆ. ಸುಮಾರು 12 ರಿಂದ 15 ಸಾವಿರ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಪೂರಕ ಎಂಬಂತೆ ಪ್ರತೀ ನಾಡ್, ಊರ್, ಒಕ್ಕಗಳಲ್ಲಿ ಸ್ವಯಂಪ್ರೇರಿತ ತಯಾರಿಯಲ್ಲಿ ಜನರೇ ತೊಡಗಿದ್ದು, ನಮ್ಮ ಹಕ್ಕಿಗಾಗಿ ಹೋರಾಡಲು ಸದಾ ಸಿದ್ಧ ಎಂಬ ಸಂದೇಶವನ್ನು ಸಾರುತ್ತಿರುವುರದು ವಿಶೇಷವೆನಿಸಿದೆ ಎಂದು ಅವರು ಹೇಳಿದ್ದಾರೆ.