
ಸುಂಟಿಕೊಪ್ಪ ಫೆ.11 NEWS DESK : ಅಪ್ರಾಪ್ತ ಮಕ್ಕಳು ಬೇಡಿಕೆ ಇಡುತ್ತಾರೆಂದು ಪೋಷಕರು ವಾಹನಗಳನ್ನು ತೆಗೆದುಕೊಡುವುದು ಮತ್ತು ಚಾಲನೆಗೆ ನೀಡುವುದು, ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಅಧಿಕ ಮಂದಿ ಸವಾರಿ ಮಾಡುವುದು, ವಾಹನ ಚಾಲನಾ ಪರವನಾಗಿಯನ್ನು ಹೊಂದದೆ ವಾಹನ ಚಾಲನೆ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಮುಖ್ಯ ಪೇದೆ ಆಶಾ ಹೇಳಿದರು. ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾಹನ ಚಾಲನೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ವಾಹನ ಚಾಲಕರಿಗೆ ಪೊಲೀಸ್ ಇಲಾಖೆ ವತಿಯಿಂದ ನಡೆದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಾಹನಗಳನ್ನು ಚಲಾಯಿಸುವಾಗ ದ್ವಿಚಕ್ರ ಸವಾರರು ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ಹೊಂದಿರಬೇಕು. ಅದೇ ರೀತಿಯಲ್ಲಿ ವಾಹನ ಚಾಲನಾ ಪರವನಾಗಿ ಹಾಗೂ ಜೀವವಮೆಯನ್ನು ಪಾವತಿಸಿರಬೇಕು, ವಾಹನಕ್ಕೆ ಸಂಬಂಧಿಸಿದ ದಾಖಲಾತಿ ಪತ್ರಗಳನ್ನು ವಾಹನದಲ್ಲಿರಿಸಿಕೊಳ್ಳಬೇಕು. ವಾಹನದ ಮಿತಿಗಿಂತ ಅಧಿಕ ಮಂದಿಯನ್ನು ಕುಳ್ಳಿರಿಸಿಕೊಂಡು ಚಾಲನೆ ಮಾಡುವುದು ಅಪರಾಧ. ಅನಾಹುತಗಳು ಸಂಭವಿಸಿದಾಗ ನಿಮಗೆ ಅದರಿಂದ ವಿಮೆಗಳು ದೊರಕವುದು ಕಷ್ಟಸಾಧ್ಯ. ಆದುದ್ದರಿಂದ ಕಾನೂನು ರೀತಿಯಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ರಸ್ತೆಯಲ್ಲಿ ಸಂಚರಿಸುವಾಗ ಬದಿಯಲ್ಲಿ ಸಂಚರಿಸಬೇಕು. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುವಾಗ ಏಕಾಏಕಿ ದಾಟದೆ 2 ಭಾಗದಲ್ಲಿ ವಾಹನಗಳ ಸಂಚಾರ ಇಲ್ಲದಿರುವಾಗ ದಾಟಬೇಕೆಂದರು. ಪೋಷಕರು ಅಪ್ರಾಪ್ತರಿಗೆ ವಾಹನಗಳನ್ನು ಚಾಲನೆ ಮಾಡಲು ಅವಕಾಶ ನೀಡಬೇಡಿ. ಅಪ್ರಾಪ್ತವಯಸ್ಸಿನ ವಾಹನ ಚಾಲನೆ ಮಾಡುವಾಗ ಪೊಲೀಸ್ ಮತ್ತು ಸಾರಿಗೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಲ್ಲಿ ಪೋಷಕರಿಗೆ ರೂ 25,000 ನ್ಯಾಯಾಲಯದಲ್ಲಿ ದಂಡ ಹಾಗೂ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಪೋಷಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಕಡ್ಡಾಯವಾಗಿ ವಾಹನ ಚಾಲನೆಗೆ ವಾಹನಗಳನ್ನು ನೀಡಬಾರದು ಎಂದು ಆಶಾ ಪೋಷಕರಿಗೆ ಕಿವಿಮಾತು ಹೇಳಿದರು. ಮಾಹಿತಿ ಕಾರ್ಯಗಾರದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಭವ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಒಕ್ಕೂಟದ ಅಧ್ಯಕ್ಷೆ ಲೀಲಾವತಿ, ಶಾಂತಗಿರಿ ಒಕ್ಕೂಟದ ಅಧ್ಯಕ್ಷೆ ಶುಭ, ಸೇವಾಪ್ರತಿನಿಧಿಗಳಾದ ಚಿತ್ರಾ, ನಂದಿನಿ ಹಾಗೂ ಪದಾಧಿಕಾರಿಗಳು ಇದ್ದರು.









