
ಮಡಿಕೇರಿ ಫೆ.11 NEWS DESK : ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸೇವಾಭಾರತಿ ಸಂಸ್ಥೆಯ ವತಿಯಿಂದ ಫೆ.13 ರಿಂದ 15ರ ವರೆಗೆ ಮಡಿಕೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಮತ್ತು ಗಾಲಿಕುರ್ಚಿ ಜಾಥಾ ನಡೆಯಲಿದೆ ಎಂದು ಸೇವಾ ಭಾರತಿ ಖಜಾಂಚಿ ಹಾಗೂ ಸೇವಾ ಧಾಮ ಸಂಸ್ಥೆಯ ಸ್ಥಾಪಕ ಕೆ.ವಿನಾಯಕ ರಾವ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯ ವಿಕಾಸ್ ಜನ ಸೇವಾ ಟ್ರಸ್ಟ್ ಆಶ್ರಮ, ಸ್ವಾಮಿ ವಿವೇಕಾನಂದ ಯೂತ್ ಮೂಮ್ ಮೆಂಟ್ ಕೊಡಗು ಶಾಖೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋದಕ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಶಿಬಿರವನ್ನು ಆಯೋಜಿಸಲಾಗಿದೆ ಎಂದರು. ಶಿಬಿರದಲ್ಲಿ ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ತಪಾಸಣೆಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅವರಿಗೆ ಯೋಗ, ಪ್ರಾಣಾಯಾಮ, ಒತ್ತಡ ಗಾಯ ನಿರ್ವಹಣೆ, ಆಪ್ತ ಸಮಾಲೋಚನೆ, ಮನೋರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಅರ್ಹ ಫಲಾನುಭವಿಗಳಿಗೆ ಸೆಲ್ಪ್ ಕೇರ್ ಕಿಟ್, ಮೆಡಿಕಲ್ ಕಿಟ್‍ಗಳು ಹಾಗೂ ನೀರಿನ ಹಾಸಿಗೆಗಳನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಉದ್ಘಾಟಿಸಲಿದ್ದು, ಸೇವಾಭಾರತಿ ಖಜಾಂಚಿ ಮತ್ತು ಸೇವಾಧಾಮ ಸಂಸ್ಥಾಪಕ ಕೆ.ವಿನಾಯಕ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳನ್ನು ಒಳಗೊಂಡ ದಿವ್ಯಾಂಗರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆನ್ನುವ ದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋದಕ ಆಸ್ಪತ್ರೆ ಉಚಿತವಾಗಿ ದಿವ್ಯಾಂಗರಿಗೆ ಸ್ಕ್ಯಾನಿಂಗ್ ಮಾಡಲು ಅನುವುಮಾಡಿಕೊಟ್ಟಿದ್ದಾರೆ. ಅಲ್ಲದೇ ಅಶ್ವಿನಿ ಅಸ್ಪತ್ರೆ ಈಗಾಗಲೇ ಒಂದು ಬಾರಿ ಉಚಿತವಾಗಿ ಶಿಬಿರವನ್ನು ನಡೆಸಲು ಸಂಪೂರ್ಣ ಸಹಕಾರ ನೀಡಿದ್ದು, ಈ ಬಾರಿಯೂ ಆಸ್ಪತ್ರೆಯಲ್ಲಿ ಉಚಿತವಾಗಿ ಶಿಬಿರವನ್ನು ನಡೆಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ವಿನಾಯಕ್ ರಾವ್ ತಿಳಿಸಿದರು. ಈಗಾಗಲೇ ಕೊಡಗು ಜಿಲ್ಲೆಯಲ್ಲಿ 25 ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸಮುದಾಯಧಾರಿತ ಸೇವೆಯನ್ನು ಒದಗಿಸುತ್ತಾ ಬಂದಿದ್ದು. ಸಮುದಾಯದಿಂದ ದೂರ ಉಳಿದು ಮಾನಸಿಕ ಖನ್ನತೆಗೆ ಹಾಗೂ ಹಲವಾರು ‘ದ್ವಿತೀಯಾಂತರ ಸಮಸ್ಯೆಗಳಿಗೆ ಒಳಗಾದಂತಹ ದಿವ್ಯಾಂಗರನ್ನು ಒಗ್ಗೂಡಿಸಿ ಅವರಿಗೆ ಉಚಿತ ವೈದ್ಯಕೀಯ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವುದರ ಮೂಲಕ ಅವರ ಜೀವನ ಶೈಲಿಯನ್ನು ಸುಲಭಗೊಳಿಸುವ ಪ್ರಯತ್ನ ನಮ್ಮ ಸಂಸ್ಥೆಯಿಂದ ನಡೆಯುತ್ತಿದೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಒಟ್ಟು 28 ಶಿಬಿರಗಳನ್ನು ಇಲ್ಲಿವರೆಗೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಮೋಹನ್ ದಾಸ್, ವಿಕಸ್ ಜನಸೇವಾ ಟ್ರಸ್ಟ್ ಸದಸ್ಯರಾದ ಕೋಚನ ಎಂ.ಚೇತನ್, ಬಿ.ಕೆ.ನವೀನ್, ಪದ್ಮಶ್ರೀ ರಾಣಿ ಮಾಚಯ್ಯ, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸ್ಥಾಯಿ ಸಮಿತಿ ಸದಸ್ಯ ಅಜಯ್ ಸೂದ್ ಉಪಸ್ಥಿತರಿದ್ದರು.










