
ಮಡಿಕೇರಿ.ಫೆ.11 NEWS DESK : ದಿನ ನಿತ್ಯ ಬಳಸುವ ವಸ್ತುವಿನ ಪ್ರಮಾಣ ಎಷ್ಟಿದೆ ಎಂಬುದಕ್ಕಿಂತ ಅದರ ಗುಣಮಟ್ಟ ಹೇಗಿದೆ ಎಂಬುದು ಮುಖ್ಯ ಎಂದು ಭಾರತೀಯ ಮಾನಕ ಬ್ಯೂರೋ ಸಂಸ್ಥೆಯ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ. ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಭಾರತೀಯ ಮಾನಕ ಬ್ಯೂರೋ ಸಂಸ್ಥೆಯವರ ಜಾಗೃತಿ ಕಾರ್ಯಾಗಾರದ ಕುರಿತು ಮಾತನಾಡಿದರು. ಮುಖ್ಯವಾಗಿ ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಹಲವು ಅಭಿವೃದ್ದಿ ಕಾರ್ಯಗಳು ನಡೆಯುತ್ತವೆ. ಆ ಕಾಮಗಾರಿಗಳಿಗೆ ಬಳಸುವ ವಸ್ತುಗಳ ಗುಣಮಟ್ಟದ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ, ದೀರ್ಘಕಾಲ ಬಾಳಿಕೆ ಬರುವ ರಸ್ತೆ, ಚರಂಡಿ, ಕುಡಿಯುವ ನೀರಿನ ಸಾಮಗ್ರಿಗಳು ಬೇಗ ಹಾಳಗಬಹುದು ,ಕಾಮಗಾರಿಗಳಿಗೆ ಬಳಸುವ (ಸೀಮೆಂಟ್, ಕಬ್ಬಿಣ, ಪೈಪ್, ಎಲೆಕ್ಟ್ರಾನಿಕ ಉಪಕರಣಗಳು) ವಸ್ತುಗಳ ಗುಣಮಟ್ಟದ ಕುರಿತು ಜಾಗೃತರಾಗಬೇಕು ಈ ನಿಟ್ಟಿನಲ್ಲಿ ಭಾರತೀಯ ಮಾನಕ ಬ್ಯೂರೋ ಸಂಸ್ಥೆಯು (BIS)ವಸ್ತುಗಳ ಗುಣಮಟ್ಟವನ್ನು ತಿಳಿಯಲು ISI ಮಾರ್ಕ್ ನಂತಹ ಚಿಹ್ನೆಗಳಿರುವ ವಸ್ತುಗಳನ್ನು ಬಳಸಿ ಹಾಗೂ ವಸ್ತುಗಳ ಗುಣಮಟ್ಟವನ್ನು ತಿಳಿಯಲು ಬೇಸಿಕ್ ಕೇರ್ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಚಿನ್ನ ಖರೀದಿಸುವಾಗ ಬಹಳ ಜಾಗೃತೆಯಿಂದ ಹಾಲ್ ಮಾರ್ಕ್ ಚಿಹ್ನೆ ಹಾಗೂ ಅದರ ಗುಣಮಟ್ಟದ(916) ಬಗ್ಗೆ ತಿಳಿದುಕೊಂಡು ಚಿನ್ನವನ್ನು ಖರೀದಿಸಿ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.ಎಲೆಕ್ಟ್ರಾನಿಕ್ ಉಪಕರಣಗಳು , ಗೃಹೋಪಯೋಗಿ ಉಪಕರಣಗಳ ಖರೀದಿಸುವಾಗ ಅವುಗಳ ಗುಣಮಟ್ಟವನ್ನು ಪರೀಕ್ಷಿಸಿ ಖರೀದಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು. ಕಾರ್ಯಾಗಾರದಲ್ಲಿ ತಾಲ್ಲೂಕು ಯೋಜನಾಧಿಕಾರಿಗಳಾದ ಮೋಹನ್, ಸಂಪನ್ಮೂಲ ವ್ಯಕ್ತಿಗಳಾದ ನೇತ್ರಾವತಿ, ಸಹಾಯ ಲೆಕ್ಕಾಧಿಕಾರಿ ಗಣೇಶ್ , ವಿ.ಪೇಟೆ/ಪೊನ್ನಂಪೇಟೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.









