
ಮಡಿಕೇರಿ ಫೆ.11 NEWS DESK : ಎರಡು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯದ ಕಟ್ಟುಪಾಡಿನ ಕುರಿತು ಮರಗೋಡು ಗ್ರಾಮದಲ್ಲಿ ನಡೆಸಿದ ಅಭಿಪ್ರಾಯ ಸಂಗ್ರಹದ ಸಭೆಯ ವರದಿಯನ್ನು ದೇವಾಲಯದ ಆಡಳಿತ ಮಂಡಳಿ ಇಂದು ಜಿಲ್ಲಾಡಳಿಕ್ಕೆ ಸಲ್ಲಿಸಿತು. ಜಿಲ್ಲಾಧಿಕಾರಿಗಳನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ಅವರು ಸಭೆಯಲ್ಲಿ ವ್ಯಕ್ತವಾದ ಪರ, ವಿರೋಧ ಅಭಿಪ್ರಾಯಗಳನ್ನು ಬೈಲಾದೊಂದಿಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿಗಳಿಗೆ ನೀಡಿರುವ ವರದಿಯಲ್ಲಿ ಮುಖ್ಯವಾಗಿ ಹಾಲಿ ಇರುವ ಬೈಲಾವನ್ನು ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಬೇಕು ಮತ್ತು ಯಾವುದೇ ಸೇರ್ಪಡೆಯಾಗದಿರಲಿ ಎಂದು ವಿವರಿಸಲಾಗಿದೆ. ಬೈಲಾದಲ್ಲಿ ಯಾವುದೇ ಜನಾಂಗದ ಸಂಪ್ರದಾಯ, ಪದ್ಧತಿಗೆ ಅವಕಾಶ ಇರುವುದಿಲ್ಲ ಎಂಬುವುದನ್ನು ಮಾತ್ರ ನಮೂದಿಸಲಾಗಿದೆ. ದೇವಾಲಯ ಸಮಿತಿ ಹಾಲಿ ಇರುವ ಬೈಲಾಕ್ಕೆ ಬದ್ಧವಾಗಿರಲು ನಿರ್ಧರಿಸಿದ್ದು, ಊರಿನವರ ಅಪೇಕ್ಷೆಯಂತೆ ಜಿಲ್ಲಾಡಳಿತ ಸೂಕ್ತ ಆದೇಶವನ್ನು ನೀಡಲಿದೆ ಎನ್ನುವ ವಿಶ್ವಾಸವಿದೆ. ಜಿಲ್ಲಾಧಿಕಾರಿಗಳು ಹೊರಡಿಸುವ ಆದೇಶಕ್ಕೆ ಸಮಿತಿ ಬದ್ಧವಾಗಿದೆ ಎಂದು ಶಶಿ ಜನಾರ್ಧನ ಸ್ಪಷ್ಟಪಡಿಸಿದರು.
::: ಜಿಲ್ಲಾಡಳಿತದ ಅಂಗಳದಲ್ಲಿ ಚೆಂಡು ::: ಕಳೆದ 45 ದಿನಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯ ವ್ಯಾಪ್ತಿಯಲ್ಲಿ ಮಾ.13 ರವರೆಗೆ ನಿರ್ಬಂಧಕಾಜ್ಞೆ ಜಾರಿಯಲ್ಲಿದೆ. ವಾರ್ಷಿಕ ಜಾತ್ರಾ ಮಹೋತ್ಸವದ ಡಿ.27 ರಂದು ವಸ್ತ್ರ ಸಂಹಿತೆ ಕುರಿತು ಉಂಟಾದ ಭಿನ್ನಾಭಿಪ್ರಾಯದ ನಂತರ ದೇವಾಲಯದಲ್ಲಿ ನಿತ್ಯ ಪೂಜೆ ಮಾತ್ರ ನಡೆಯುತ್ತಿದೆ. ನಿರ್ಬಂಧಕಾಜ್ಞೆ ಹಿನ್ನೆಲೆ ಐದಕ್ಕಿಂತ ಹೆಚ್ಚು ಮಂದಿ ಸೇರಲು ಸಾಧ್ಯವಾಗದ ಕಾರಣ ಯಾವುದೇ ವಿಶೇಷ ಆಚರಣೆಗಳಿಗೆ ಅವಕಾಶ ಇಲ್ಲದಾಗಿದೆ. ಭಿನ್ನಾಭಿಪ್ರಾಯ ಶಮನಗೊಳಿಸಲು ಸೂಕ್ತ ನಿರ್ಧಾರಕ್ಕೆ ಬರುವಂತೆ ಜಿಲ್ಲಾಡಳಿತ ದೇವಾಲಯ ಸಮಿತಿಗೆ ಎರಡು ಬಾರಿ ಕಾಲಾವಕಾಶ ನೀಡಿತ್ತು. ಮೊದಲ ಬಾರಿ ಕೇವಲ 7 ದಿನಗಳ ಅವಧಿಯಲ್ಲಿ ನಿರ್ಧಾರ ಪ್ರಕಟಿಸಲು ಸಾಧ್ಯವಿಲ್ಲ, ಮತ್ತಷ್ಟು ಕಾಲಾವಕಾಶ ಬೇಕು ಎಂದು ದೇವಾಲಯ ಸಮಿತಿ ಕೋರಿಕೊಂಡ ಹಿನ್ನೆಲೆ ಫೆ.10 ರವರೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತು. ಇದರ ಅನುಸಾರ ಇಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಸಮಿತಿಯ ಪ್ರಮುಖರು ಅಭಿಪ್ರಾಯ ಸಂಗ್ರಹದ ವರದಿಯನ್ನು ಸಲ್ಲಿಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅರೆಭಾಷಿಕ ಗೌಡರು ಹಾಗೂ ಕೊಡವರು ಜಾಥಾ ನಡೆಸಿ ಪರಸ್ಪರ ಸಂಖ್ಯಾ ಬಲದ ಶಕ್ತಿ ಪ್ರದರ್ಶನ ಮಾಡಿದ್ದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಂಡು ಗೊಂದಲಕ್ಕೆ ಶೀಘ್ರ ತೆರೆ ಎಳೆಯಬೇಕೆನ್ನುವ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಫೆ.10 ರವರೆಗೆ ಕಾದು ನೋಡೋಣವೆಂದು ಹೇಳುತ್ತಲೇ ಬಂದಿದ್ದರು. ಇದೀಗ ದೇವಾಲಯ ಸಮಿತಿ ನಿಗಧಿತ ದಿನದಂದು ತನ್ನ ವರದಿಯನ್ನು ಸಲ್ಲಿಸಿದ್ದು, ಚೆಂಡು ಜಿಲ್ಲಾಡಳಿತದ ಅಂಗಳದಲ್ಲಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಈ ಸಮಸ್ಯೆಯನ್ನು ಬಗೆಹರಿಸುವುದು ಕೊಡಗಿನ ಹಿತದೃಷ್ಟಿಯಿಂದ ಸೂಕ್ತವೆನಿಸಿದೆ.









