


ಮಡಿಕೇರಿ ಫೆ.12 : ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ–2025 ರ ಅಂಗವಾಗಿ ಬುಧವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಮಡಿಕೇರಿ ನಗರದ ಗಾಂಧಿ ಮೈದಾನದಿಂದ ಮುಖ್ಯ ರಸ್ತೆಯಲ್ಲಿ ಜಾಥಾ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾವರು ಜಾಥಾಗೆ ಚಾಲನೆ ನೀಡಿದರು. ಜಾಥವು ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ಚಾಲನಾ ತರಬೇತಿ ಶಾಲೆಗಳು, ಆಟೋರಿಕ್ಷಾ/ ಟ್ಯಾಕ್ಸಿ/ ಚಾಲಕ ಮಾಲೀಕರ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜರುಗಿತು. ರಾಜು ಕಲಾವಿದರ ತಂಡದ ವತಿಯಿಂದ ರಸ್ತೆ ನಾಟಕಗಳ ಮುಖೇನ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪ್ರಮುಖ ಪಟ್ಟಣಗಳಲ್ಲಿ ಕರಪತ್ರ ಹಂಚಿಕೆ, ಬ್ಯಾನರ್ ಮತ್ತು ಫ್ಲೆಕ್ಸ್ ಅಳವಡಿಕೆ ಕಾರ್ಯಕ್ರಮಗಳು, ಶಾಲಾ-ಕಾಲೇಜುಗಳಲ್ಲಿ ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳನ್ನು ಜರುಗಿಸಿದ್ದು, ಮಕ್ಕಳಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಜಾಥಗೆ ಚಾಲನೆ ನೀಡಿದ ಮಾತನಾಡಿದ ಜಿಲ್ಲಾಧಿಕಾರಿ ಅವರು ಸಾರ್ವಜನಿಕರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ ರಸ್ತೆ ಅಪಘಾತಗಳನ್ನು ತಡೆಯುವುದರಲ್ಲಿ ಯಶಸ್ವಿಯಾಗುವಂತೆ ಹಾಗೂ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವಂತೆ, ಹೆಲ್ಮೆಟ್, ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸುವಂತೆ ತಿಳಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ನಾಗರಾಜಾಚಾರ್, ಮೋಟಾರು ವಾಹನ ನಿರೀಕ್ಷಕರಾದ ಶಿವಕುಮಾರ್, ಪ್ರದೀಪ್ ಕುಮಾರ್, ಅಧೀಕ್ಷಕರುಗಳಾದ ಕೆ.ಎ.ಸಲೀಮಾ, ಎನ್.ಮೋಹನ ಕುಮಾರ್, ಡಿ.ಕೆ.ರೀಟಾ ಇತರರು ಇದ್ದರು.
ಇನ್ನಷ್ಟು ಮಾಹಿತಿ :: ರಸ್ತೆಯಲ್ಲಿರುವಾಗ ತಾವು ತಮ್ಮ ಜೀವ ಮತ್ತು ಕುಟುಂಬ ಮೊದಲು ಎಂಬುದನ್ನು ಅರಿತು ವಾಹನ ಚಲಾಯಿಸಬೇಕು. ಸಂಚಾರಿ ನಿಯಮವನ್ನು ಚಾಚು ತಪ್ಪದೆ ಪಾಲಿಸಬೇಕು. ಸಾರ್ವಜನಿಕ ರಸ್ತೆ ಹಾಗೂ ಪ್ರದೇಶಗಳಲ್ಲಿ ಜಾನುವಾರುಗಳನ್ನು ಅಡ್ದಾಡಲು ಬಿಡಬಾರದು. ಅವೈಜ್ಞಾನಿಕವಾಗಿ ಸ್ವಯಂ ಪ್ರೇರಿತವಾಗಿ ರಸ್ತೆಗಳಲ್ಲಿ ಹಂಪ್ಸ್‍ಗಳನ್ನು ನಿರ್ಮಿಸಬಾರದು. ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಧವಸ ಧಾನ್ಯದ ಸುಗ್ಗಿ ಕಣಜವನ್ನಾಗಿಸಬಾರದು. ಸರಕು ಸಾಗಾಣಿಕಾ ವಾಹನಗಳಲ್ಲಿ ಅಧಿಕ ಭಾರದ ಸರಕು ಸಾಗಿಸಬಾರದು. ಸುಸ್ಥಿತಿಯಲ್ಲಿಲ್ಲದ ವಾಹನವನ್ನು ಸಾರ್ವಜನಿಕ ಪ್ರದೇಶದಲ್ಲಿ ಉಪಯೋಗಿಸಬಾರದು. ಪ್ರಯಾಣಿಕ ವಾಹನಗಳಲ್ಲಿ ನಿಗದಿಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಬಾರದು. ಪುಟ್‍ಬೋರ್ಡ್ ಮೇಲೆ ನಿಲ್ಲಲು ಅವಕಾಶ ನೀಡಬಾರದು. ಪಾದಚಾರಿಗಳು ಪಾದಚಾರಿ ರಸ್ತೆಯನ್ನೇ ಬಳಸಿ, ರಸ್ತೆಯ ಮಧ್ಯದಲ್ಲಿ ಗುಂಪು ಗುಂಪಾಗಿ ಪಾದಾಚಾರಿಗಳು ಸಂಚರಿಸಬೇಡಿ. ರಾತ್ರಿ ವೇಳೆ ವಾಹನದ ಚಾಲನೆಯಲ್ಲಿ ವಾಹನದ ಹೆಡ್‍ಲೈಟ್ ಪ್ರಖರತೆಯನ್ನು ಎದುರಿಗೆ ವಾಹನ ಬರುವಾಗ ಕುಗ್ಗಿಸಿ, ಹೆಲ್ಮೆಟ್ ಮತ್ತು ಸೇಪ್ಟಿ ಬೆಲ್ಟ್‍ಗಳನ್ನು ಧರಿಸಿ ವಾಹನ ಚಲಾಯಿಸಿ, ಅಜಾಗರುಕತೆಯಿಂದ ಅತೀ ವೇಗದಲ್ಲಿ ವಾಹನ ಓಡಿಸಬಾರದು. ಮೋಜಿಗಾಗಿ ಇತರರನ್ನು ರಂಜಿಸಲು ವಾಹನ ಓಡಿಸಬಾರದು. ಸಂಗೀತ ಕೇಳುತ್ತಾ ವೀಡಿಯೋ ದೃಶ್ಯಾವಳಿಗಳನ್ನು ನೋಡುತ್ತಾ ವಾಹನ ಚಲಾಯಿಸಬಾರದು. ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು. ಮಧ್ಯದ ಅಮಲಿನಲ್ಲಿ ವಾಹನ ಓಡಿಸಬಾರದು. ಹಿಂದಿನ ವಾಹನ ಓವರ್‍ಟೇಕ್ ಮಾಡುತ್ತಿರುವಾಗ ವಾಹನದ ವೇಗ ಹೆಚ್ಚಿಸಬೇಡಿ. ಲೈಸನ್ಸ್ ಹೊಂದಿಕೊಳ್ಳದೆ ವಾಹನ ಚಲಾಯಿಸುವ ಪ್ರಯತ್ನ ಮಾಡಬೇಡಿ, ನಿದ್ರೆ ಗುಂಗಿನಲ್ಲಿರುವಾಗ ವಾಹನ ಚಲಾಯಿಸುವ ಪ್ರಯತ್ನ ಮಾಡಬೇಡಿ, ಚಾಲಕರಿಗೆ ಅಗತ್ಯ ವಿಶ್ರಾಂತಿ ನೀಡದೆ ವಾಹನ ಓಡಿಸಲು ಅವಕಾಶ ನೀಡಬಾರದು. ಸೈಕಲ್ ಸವಾರರು ಅವರಿಗೆ ಮೀಸಲಾದ ರಸ್ತೆಯಲ್ಲಿ ಸೈಕಲ್ ಓಡಿಸಬೇಕು. ದೊಡ್ಡ ವಾಹನ ಚಾಲಕರು ಸಣ್ಣ ವಾಹನ ಚಾಲಕರಿಗೆ ಮೊದಲ ಆದ್ಯತೆ ನೀಡಿ, ಶಾಲೆಗಳ ಸಮೀಪ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು.