
ಮಡಿಕೇರಿ ಫೆ.12 NEWS DESK : ಅಧಿಕಾರಿಗಳ ತಂಡದ ಸಮೇತ ಗ್ರಾಮಸ್ಥರ ಅಳಲನ್ನು ಸ್ವತಃ ಆಲಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ನಡೆಗೆ ಗಾಳಿಬೀಡು ಪಂಚಾಯತ್ ವ್ಯಾಪ್ತಿಯ ಕಾಲೂರು ಗ್ರಾಮದ ನಿವಾಸಿಗಳು ಮೆಚ್ಚಗೆ ವ್ಯಕ್ತಪಡಿಸಿದರು. ಗ್ರಾಮಕ್ಕೆ ಭೇಟಿ ನೀಡಿ ತಮ್ಮ ಅಹವಾಲುಗಳನ್ನು ಆಲಿಸಬೇಕು ಎಂದು ಕಾಲೂರು ಗ್ರಾಮಸ್ಥರು ಸಲ್ಲಿಸಿದ ಮೇರೆಗೆ ಡಾ.ಮಂತರ್ ಗೌಡ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಕುಡಿಯುವ ನೀರಿನ ಇಲಾಖೆ, ಚೆಸ್ಕಾಂ , ತಾಲ್ಲೂಕು ಪಂಚಾಯತ್ ಇ.ಒ, ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳ ದಂಡಿನೊಂದಿಗೆ ತೆರಳಿ ಸುಮಾರು ಎರಡು ಗಂಟೆಗಳ ಕಾಲ ಜನ ಸ್ಪಂದನ ಸಭೆ ನಡೆಸಿ ವಸ್ತುಸ್ಥಿತಿಯ ವಿವರ ಪಡೆದರು. ಆಡಳಿತ ವ್ಯವಸ್ಥೆಯೇ ಶಾಸಕರೊಂದಿಗೆ ತಮ್ಮ ಬಳಿ ಬಂದಿದ್ದನ್ನು ಕಂಡು ಗ್ರಾಮದ ಜನತೆ ತಮ್ಮ ಬಹುಕಾಲದ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಹದಿನೈದು ವರ್ಷಗಳಿಂದ ಕಾಮಗಾರಿ ಆರಂಭಗೊಂಡು ಪೂರ್ಣಗೊಳ್ಳದ ಸೇತುವೆ ಕಾಮಗಾರಿ, ದಶಕಗಳ ಕಾಲದಿಂದ ಹದಗೆಟ್ಟಿರುವ ರಸ್ತೆಗಳು, ವಿಪುಲವಾಗಿ ಜಲಮೂಲ ಇದ್ದರೂ ಕುಡಿಯುವ ನೀರಿಗೆ ಪರದಾಟ, ರಸ್ತೆ ಬದಿಯಲ್ಲಿ ಬಾಗಿ ನಿಂತ ವಿದ್ಯುತ್ ಕಂಬಗಳು, ಪ್ರತಿನಿತ್ಯ ವೋಲ್ಟೇಜ್ ಸಮಸ್ಯೆಗಳು,
ಭಾನುವಾರ ಮತ್ತು ರಜಾ ದಿನಗಳಲ್ಲಿ ಬಸ್ಸು ಬಾರದೆ ಇರುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಶಾಸಕ ಗಮನಕ್ಕೆ ತಂದರು. ಎಲ್ಲವನ್ನೂ ಸಾವಧಾನದಿಂದ ಆಲಿಸಿದ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಂಡರು.
ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಕರೆ ಮಾಡಿ ಭಾನವಾರದಿಂದಲೇ ಬಸ್ ಸಂಚಾರಕ್ಕೆ ನಿರ್ದೇಶನ ನೀಡಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರಿಗೆ ಹದಿನೈದು ದಿನಗಳಲ್ಲಿ ನೀರಿನ ವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿದರು. ಕೂಟುಹೊಳೆಯಿಂದ ಗಾಳಿಬೀಡು ರಸ್ತೆ ಮರು ನಿರ್ಮಾಣಕ್ಕೆ ಮೂರು ಕೋಟಿ ಹಣ ನೀಡಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ವಿವರಿಸಿದರು. ದೇವಸ್ತೂರು ಕಾಲೂರು ಬಾರಿಬೆಳ್ಳಚ್ಚು ಮೂಲ ಮಾಂದಲಪಟ್ಟಿಗೆ ಹೋಗುವ ಪಿ.ಡಬ್ಲ್ಯೂ. ಡಿ ರಸ್ತೆಯ ಅಂದಾಜು ಪಟ್ಟಿ ಸಲ್ಲಿಕೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೂರು ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್ ನ್ನು ಗ್ರಾಮದ ವಿವಿಧ ಭಾಗಗಳಲ್ಲಿ ಅಳವಡಿಸಲು ಚೆಸ್ಕಾಂ ಇಲಾಖೆಗೆ ಆದೇಶ ನೀಡಿದರು. ಕಾಲೂರು ಶಾಲೆಯಿಂದ ಅಯ್ಯಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಪಂಚಾಯತ್ ರಾಜ್ ಎಂಜಿನಿಯರ್ ಗೆ ಸೂಚನೆ ನೀಡಿದರು. ನಂತರ ಮಾತನಾಡಿದ ಶಾಸಕರು, ತಮ್ಮ ಕ್ಷೇತ್ರದ ಎಲ್ಲಾ ಗ್ರಾಮಗಳು ಕುಗ್ರಾಮ ಎಂಬ ಹಣೆಪಟ್ಟಿ ಕಳಚಿ ಸುಗ್ರಾಮಗಳಾಗಿ ಬದಲಾಗಬೇಕು ಎಂಬುದು ತಮ್ಮ ಹೆಬ್ಬಯಕೆಯಾಗಿದ್ದು, ಅದನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಪ್ರಮುಖರಾದ ಹೆಚ್.ಎ.ಹಂಸ, ತೆನ್ನಿರ ಮೈನಾ, ಅಯಿಲಪಂಡ ಪುಷ್ಪ ಪೂಣಚ್ಚ, ಕೋಚನ ಹರಿಪ್ರಸಾದ್, ವಿ.ಜಿ.ಮೋಹನ್, ರೋಶನ್ ಗಣಪತಿ, ಪೊನ್ನಪ್ಪ, ತಿಮ್ಮಯ್ಯ, ಪವನ್, ಸಾಗರ್, ಕವನ್, ಶರಣ್ ಸೇರಿದಂತೆ ಗ್ರಾಮಸ್ಥರು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.









