


ಮಡಿಕೇರಿ ಫೆ.13 NEWS DESK : ಫೆಬ್ರವರಿ 12 ರನ್ನು ಇನ್ನು ಮುಂದೆ ಜಾಗತಿಕ ‘ಕೊಡವ ಹೆಣ್ಣುಮಕ್ಕಳ ದಿನ’ವನ್ನಾಗಿ ಆಚರಿಸಲಾಗುವುದು ಎಂದು ಯುನೈಟೆಡ್ ಕೊಡವ ಆರ್ಗನೈಜೇಷನ್ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಘೋಷಿಸಿದ್ದಾರೆ. ಯುಕೊ ಸಂಘಟನೆಯ 6ನೇ ವರ್ಷದ ‘ಬೇದ ಚಂಗ್ರಾಂದಿ’ ಪ್ರಯುಕ್ತ ಸಾಂಪ್ರದಾಯಿಕವಾಗಿ ನಡೆದ ‘ನಡುಬೇದ’ ಆಚರಣೆಯ ನಂತರ ನಡೆದ ಸಭೆಯಲ್ಲಿ ಮಾತನಾಡುತ್ತಾ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಕೊಡವರ ಸಾಂಪ್ರದಾಯಿಕವಾದ ಬೇದ ಚಂಗ್ರಾಂದಿ ಆಚರಣೆಯಲ್ಲಿ ‘ನಡುಬೇದ’ವನ್ನು ಭೂಮಿಗೆ ಮುಟ್ಟಾದ ದಿನವೆಂಬ ನಂಬಿಕೆಯೊಂದಿಗೆ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮೊದಲಿಗೆ, ಯುಕೊ ಸಂಘಟನೆಯ ನೇತೃತ್ವದಲ್ಲಿ, ಕೊಡವ ಮಹಿಳೆಯರೆಲ್ಲಾ ಸೇರಿ ಕಿರುಗೂರಿನ ಚೆಪ್ಪುಡಿರ ಸುಜು ಕರುಂಬಯ್ಯನವರ ಭತ್ತದ ಗದ್ದೆಗೆ ತೆರಳಿ, ಸಂಪ್ರದಾಯದಂತೆ ಭೂಮಿಗೆ ‘ತೋರ ತೊಪ್ಪು’ ಎಂದು ಕರೆಯಲ್ಪಡುವ ವಿಶೇಷ ಎಲೆಯಲ್ಲಿ ಅಕ್ಕಿಯನ್ನು ಇಟ್ಟು, ಭೂಮಿಗೆ ಕೈ ಎಣ್ಣೆ ಸುರಿದು, ಪಕ್ಕದಲ್ಲಿ ಮಿಳ್ಳಿಯಲ್ಲಿ ನೀರು, ಮರದ ಬಾಚಣಿಕೆಯನ್ನಿಟ್ಟು “ಭೂಮಿತಾಯಿ, ನೀಡ ಉಟ್ಟಿ ಮಂಡೆ ಕಾಂಜದ್ ತಂಪಾಡ್, ಕುಂಬ್ಯಾತ್ ಮಳೆಯಾಯಿತ್, ಕುಂದ್’ಲೂ ಕೂಳಾಡ್” ಎಂದು ಸೂರ್ಯದೇವನಿಗೆ ಅಕ್ಕಿಯನ್ನು ಪ್ರೋಕ್ಷಣೆಮಾಡಿ, ಭೂಮಿತಾಯಿಗೆ ಪಾದ ಮುಟ್ಟಿ ನಮಸ್ಕರಿಸಿ ಪ್ರಾರ್ಥಿಸಲಾಯಿತು. ಆ ನಂತರ ಪೊನ್ನಂಪೇಟೆಯ ಸುಜು ಕರುಂಬಯ್ಯನವರ ಮನೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಬೇದ ಚಂಗ್ರಾಂದಿ ಆಚರಣೆಯಲ್ಲಿ ಹೆಣ್ಣುಮಕ್ಕಳೇ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಆಚರಣೆಯು ಕೊಡವ ಜನಾಂಗ ಮತ್ತು ಪ್ರಕೃತಿ ನಡುವಿನ ಭಾವನಾತ್ಮಕ ಸಂಬಂಧವನ್ನು ದೃಡಪಡಿಸುತ್ತದೆ. ಭೂಮಿತಾಯಿಯನ್ನು ಸಾಕ್ಷಾತ್ ಒಬ್ಬ ಹೆಣ್ಣಿನಂತೆ ಭಾವಿಸಿ, ಆಕೆಗೆ ಮುಟ್ಟಿಗೆ ಸಂಬಂದಿಸಿದ ಆರೈಕೆ ಮಾಡುವುದೇ ನಡುಬೇದ ಆಚರಣೆಯ ಪ್ರಾಮುಖ್ಯತೆ. ಮಹಿಳೆಯರೇ ಸಾಂಪ್ರದಾಯಿಕವಾಗಿ ಈ ಆಚರಣೆಯಲ್ಲಿ ನೇರವಾಗಿ ಪಾಲ್ಗೊಳ್ಳುವುದು ಈ ಆಚರಣೆಯ ವಿಶೇಷ, ಹಾಗೆಯೇ ಈ ಆಚರಣೆಯು ಕೊಡವ ಮಹಿಳೆಯರ ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿರುವುದರಿಂದ ‘ನಡುಬೇದ ಚಂಗ್ರಾಂದಿ’ ಆಚರಿಸುವ ಫೆಬ್ರವರಿ 12ನೇಯ ತಾರಿಕನ್ನು ಇನ್ನು ಮುಂದೆ ಜಾಗತಿಕವಾಗಿ ‘ಕೊಡವ ಹೆಣ್ಣುಮಕ್ಕಳ ದಿನ’ವಾಗಿ ಆಚರಿಸಲಾಗುತ್ತದೆ ಎಂದು ಅವರು ವಿವರಿಸಿದರು. ಕೊಡವ ಜನಾಂಗದ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಹಾಗು ರಾಜಕೀಯ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಪ್ರಕ್ರೀಯೆಯ ಭಾಗವಾಗಿ ಕಳೆದ 6 ವರ್ಷಗಳಿಂದ ಯುಕೊ ಸಂಘಟನೆಯ ವತಿಯಿಂದ ಈ ಬೇದ ಚಂಗ್ರಾಂದಿ ಯನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇದರಿಂದಾಗಿ ಜನಾಂಗದ ಮಾನಸಿಕ ಶಕ್ತಿ ವೃದ್ಧಿಸಿ ಆಧ್ಯಾತ್ಮಿಕ ಶಕ್ತಿಯೂ ವೃದ್ಧಿಸುವೂದರೊಂದಿಗೆ ಒಂದು ಪರಂಪರೆಯನ್ನು ಅನಾಯಾಸವಾಗಿ ಮುಂದಿನ ಪೀಳಿಗೆಗೆ ಪರಿಚಯಿಸಲು ಸಾದ್ಯವಾಗಿದೆ ಎಂದು ಹೇಳಿದರು. ಯುಕೊ ಸಂಘಟನೆಯ ವಿವಿದ ಕಾರ್ಯಕ್ರಮಗಳಿಂದ ಪ್ರೇರಿತರಾಗಿ, ಇಂದು ಯುವಜನತೆ ಕೊಡವಾಮೆಯನ್ನು ಪೋಷಿಸುವ ನಿಟ್ಟಿನಲ್ಲಿ ಆಸಕ್ತಿ ತೋರುವಂತಾಗಿದೆ ಎಂದು ತಿಳಿಸಿದರು. ನಮ್ಮ ಹಿರಿಯರು ನಮ್ಮ ಬದುಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಲು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸುವುದರ ಮೂಲಕ ನಾವು ನಮ್ಮ ಬದುಕಿನ ಹಾದಿಯನ್ನು ಸುಗಮವಾಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ನಮ್ಮ ಪರಂಪರೆಯನ್ನು ಗೌರವಿಸಿ, ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮಮೇಲಿದೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ, ಕಿರುಗೂರು ಗ್ರಾಪಂ ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಚಿರಿಯಪಂಡ ರಾಜಾ ನಂಜಪ್ಪ, ವಿರಾಜಪೇಟೆ ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತಿಷ್, ಮತ್ತು ಸದಸ್ಯರು, ಟಿ.ಶೆಟ್ಟಿಗೆರಿ,ಹಾಗು ಮೂರ್ನಾಡುವಿನ ಪೊಮ್ಮಕ್ಕಡ ಕೂಟದ ಸದಸ್ಯರು, ಪೊನ್ನಂಪೇಟೆ ಕೊಡವಸಮಾಜದ ನಿರ್ದೇಶಕ ಆಲೆಮಾಡ ಸುಧೀರ್, ಹಿರಿಯರಾದ ಕಳ್ಳೇಂಗಡ ಶಂಬು, ಪೊನ್ನಂಪೇಟೆಯ ಇಗ್ಗುತ್ತಪ್ಪ ಕೊಡವ ಕೂಟದ ದೇಯಂಡ ಗಣೇಶ್, ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.