
ಮಡಿಕೇರಿ NEWS DESK ಫೆ.15 : ಕಾರ್ಮಿಕ ಮಹಿಳೆ ಚನ್ನಂಗೊಲ್ಲಿ ಗ್ರಾಮದ ಪೈಸಾರಿ ನಿವಾಸಿ ಜಾನಕಿ ಎಂಬುವವರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಗೋಣಿಕೊಪ್ಪಲು–ಮೈಸೂರು ರಸ್ತೆ ಸಮೀಪದ ಕಾಫಿ ತೋಟವೊಂದರಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಜಾನಕಿ ಅವರ ಮೇಲೆ ಕಾಡಾನೆ ದಾಳಿ ಮಾಡಿ ಸಾವಿಗೆ ಕಾರಣವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಮಾತನಾಡಿ, ಪುಂಡಾನೆಯನ್ನು ಸೆರೆ ಹಿಡಿಯಲು ಅವಕಾಶ ಕೋರಿದರು. ಈ ಹಿನ್ನೆಲೆ ಶನಿವಾರ ಬೆಳಗ್ಗೆಯಿಂದಲೇ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಿತು. ಹಾರಂಗಿ, ದುಬಾರೆ ಮತ್ತು ಮತ್ತಿಗೋಡು ಸಾಕಾನೆ ಶಿಬಿರಗಳಿಂದ 6 ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಸ್ಥಳೀಯ ಮುಖಂಡರು, ಅರಣ್ಯಾಧಿಕಾರಿಗಳಾದ ಜಗನ್ನಾಥ್, ಭಾಸ್ಕರ್, ಸೀಮಾ, ಗೋಪಾಲ್ ಮತ್ತು ಸಿಬ್ಬಂದಿಗಳು ಅರವಳಿಕೆ ತಜ್ಞರೊಂದಿಗೆ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಿದರು. ಕಾಫಿ ತೋಟದಲ್ಲಿ ಕಂಡ ಪುಂಡಾನೆಯನ್ನು ಅರವಳಿಕೆ ಪ್ರಯೋಗಿಸಿ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಯಿತು. ಬಳಿಕ ಉಪಚರಿಸಿ ಸೆರೆ ಹಿಡಿದ ಕಾಡಾನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.








