
ಮಡಿಕೇರಿ ಫೆ.17 NEWS DESK : ಕೊಡಗು ಜಿಲ್ಲಾ ಬ್ಯುಟಿಶಿಯನ್ ಅಸೋಸಿಯೇಷನ್‍ನ ವಾರ್ಷಿಕ ಮಹಾಸಭೆಯ ಅಂಗವಾಗಿ ಫೆ.18(ಇಂದು) ರಂದು ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯ ಮೈದಾನದಲ್ಲಿ ತಾಲ್ಲೂಕು ಸಂಘಟನೆಗಳ ಸದಸ್ಯರನ್ನು ಒಳಗೊಂಡಂತೆ ಕ್ರೀಡಾಕೂಟ ನಡೆಯಲಿದೆ ಎಂದು ಸಂಘಟನೆಯ ಗೌರವ ಅಧ್ಯಕ್ಷರಾದ ವನಿತಾ ಚಂದ್ರಮೋಹನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕ್ರೀಡಾಕೂಟ ಬೆಳಗ್ಗೆ 10.30 ಕ್ಕೆ ಆರಂಭಗೊಳ್ಳಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಕೂಡಿಗೆ ಕ್ರೀಡಾಶಾಲೆಯ ನಿವೃತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ, ನಗರಸಭಾ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸವಿತಾ ರಾಕೇಶ್, ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಎನ್.ಚಂದ್ರಮೋಹನ್ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದಲ್ಲಿ ಥ್ರೋಬಾಲ್, ಶಾಟ್ ಪುಟ್ ಸೇರಿದಂತೆ ಮನರಂಜನಾ ಸ್ಪರ್ಧೆಗಳು ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಸಂಘಟನೆಯ ಜಿಲ್ಲಾಧ್ಯಕ್ಷರಾದ ರತ್ನ ಯತೀಶ್ ಮಾತನಾಡಿ, ಕೊಡಗು ಜಿಲ್ಲಾ ಬ್ಯುಟಿಶಿಯನ್ ಅಸೋಸಿಯೇಶನ್‍ನ ವಾರ್ಷಿಕ ಮಹಾಸಭೆ ಫೆ.25 ರಂದು ನಗರದ ಸಮುದ್ರ ಹೋಟೆಲ್ ಸಭಾಂಗಣದಲ್ಲಿ ಬೆಳಗ್ಗೆ 10.30 ಗಮಟೆಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಜಾನಪದ ಕಲಾವಿದರಾದ ಪದ್ಮಶ್ರೀ ರಾಣಿ ಮಾಚಯ್ಯ, ಮಾನವ ಹಕ್ಕುಗಳ ಜನಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರಾದ ಜಯಮಾಲ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್.ಸವಿತಾ ರೈ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಮಿನಾಜ್ ಪ್ರವೀಣ್ ಮಾತನಾಡಿ, ಜಿಲ್ಲೆಯ ವಿವಿಧೆಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 150 ಕ್ಕೂ ಹೆಚ್ಚಿನ ಬ್ಯೂಟಿ ಪಾರ್ಲರ್‍ಗಳು ಸಂಘನೆಯೊಂದಿಗೆ ನೋಂದಣಿಯಾಗಿದೆಯೆಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪವಿತ್ರ, ಕಾರ್ಯದರ್ಶಿ ಚೇತನ ಹಾಗೂ ಖಜಾಂಚಿ ವೈಭವಿ ಉಪಸ್ಥಿತರಿದ್ದರು.









