
ವಿರಾಜಪೇಟೆ ಫೆ.19 NEWS DESK : ಸೇವೆಗೆ ಕೊನೆಯಿಲ್ಲ. ಸೇವೆ ಎಂಬುವುದು ಏನು ಎಂಬುದನ್ನು ಅರಿತಲ್ಲಿ ಮಾತ್ರ ಗಾಂಧಿಜೀ ಕಂಡ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಹೆಚ್.ಎನ್.ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಲೇಜು ಶಿಕ್ಷಣ ಇಲಾಖೆ, ಕೊಡಗು ವಿಶ್ವವಿದ್ಯಾನಿಲಯ, ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಸಹಯೋಗದಲ್ಲಿ ಬಿ.ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸೇವಾ ಮನೋಭಾವವು ವಿದ್ಯಾರ್ಥಿ ಜೀವನ ದಿಸೆಯಲ್ಲಿ ಆರಂಭವಾಗಬೇಕು ಎಂಬ ಪರಿಕಲ್ಪನೆಯಿಂದ ಗಾಂಧಿಜೀ ಅವರು ಕಾಲೇಜುಗಳಲ್ಲಿ ಸೇವಾ ಘಟಕವನ್ನು ಆರಂಭಿಸಿದರು. ನಾಯಕತ್ವ ಗುಣಗಳನ್ನು ವಿದ್ಯಾರ್ಥಿ ಜೀವನದಿಂದಲೇ ಆರಂಭವಾದಲ್ಲಿ ಮಾತ್ರ ಉತ್ತಮ ನಾಯಕನಾಗಬಹುದು. ಸಾಮಾಜಿಕ ಪ್ರಜ್ಞೆ ಸರ್ವರಲ್ಲಿ ಜಾಗೃತವಾಗಬೇಕು. ದೇಶದಲ್ಲಿ ಹಲವು ರೀತಿಯಲ್ಲಿ ಸಂಭವಿಸಿದ್ದ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಸೇವಾ ಸಂಸ್ಥೆಗಳು ನಡೆಸಿದ ಕಾರ್ಯಗಳು ದೇಶ ಮೆಚ್ಚಿದೆ. ಅದರಂತೆ ಶಿಬಿರದಲ್ಲಿ ಕಲಿಯುವ ಪ್ರತಿಯೊಂದು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸಂಸ್ಕೃತವಾದ ಸಮಾಜ ನಿರ್ಮಾಣ ಮಾಡಲು ಪಣ ತೊಡುವಂತೆ ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಚೇರಂಡ ಕಾವೇರಮ್ಮ ಮೋಟಯ್ಯ ಮಾತನಾಡಿ, ರಾಷ್ಟ್ರ ಧರ್ಮ, ದೇಶ ಭಕ್ತಿ, ಸಮಾಜ ಸೇವೆ ಇವುಗಳು ಜೀವನದಲ್ಲಿ ನೆಲೆಯಾಗುವ ವಿಷಯಗಳಾಗಿವೆ. ಸ್ವಚ್ಚತೆ ಎಂಬುದು ಬಾಲ್ಯದಿಂದಲೆ ಆರಂಭವಾಗಬೇಕು. ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಯಕನಾಗಲು ಪ್ರಯತ್ನಿಸಬೇಕು. ಶಿಬಿರದ ಆಯೋಜನೆಯಿಂದ ಗ್ರಾಮಗಳ ಅಭ್ಯುದಯವಾಗುತ್ತದೆ. ಏಳು ದಿನಗಳು ನಡೆಯುವ ಶಿಬಿರಕ್ಕೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಬೆನೆಡಿಕ್ಟ್ ಆರ್. ಸಲ್ದಾನಾ ಶಿಬಿರಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನಾ ಘಟಕವು ಸಮಾಜ ಮತ್ತು ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಸೃಷ್ಟಿ ಮಾಡಲು ಸಹಕಾರಿಯಾಗಿದೆ. ವ್ಯಕ್ತಿತ್ವ ನಿರ್ಮಾಣ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸ.ಹಿ.ಪ್ರಾ ಶಾಲೆ ಬಿ.ಶೆಟ್ಟಿಗೇರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವೈ.ಸಿ.ಕವಿತಾ, ಕಾಫಿ ಬೆಳೆಗಾರರು ಮತ್ತು ಗ್ರಾಮದ ಹಿರಿಯರಾದ ನಾಮೇರ ರಾಮು ನಂಜಪ್ಪ, ಸ.ಹಿ.ಪ್ರಾ. ಶಾಲೆ ಬಿ.ಶೆಟ್ಟಿಗೇರಿ ಸಹ ಶಿಕ್ಷಕ ಅಪ್ಪದೇರಂಡ ಸುಜ್ಯೋತಿ ಸುರೇಶ್ ಉಪಸ್ಥಿತರಿದ್ದರು. ಎನ್.ಎಸ್.ಎಸ್.ಯೋಜನಾಧಿಕಾರಿಗಳಾದ ಬಿ.ಬಿ.ಸುನೀಲ್ ಕುಮಾರ್ ಸರ್ವರನ್ನು ಸ್ವಾಗತಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಮುತ್ತಮ್ಮ ನಿರೂಪಿಸಿದರು. ಇತಿಹಾಸ ಉಪನ್ಯಾಸಕರು ಮತ್ತು ಸಹ ಯೋಜನಾಧಿಕಾರಿಗಳಾದ ಸಿ.ಪಿ.ಅನುಪಮ ಅವರು ಸರ್ವರನ್ನು ವಂದಿಸಿದರು. ಕಾವೇರಿ ಪದವಿ ಕಾಲೇಜು ವಿರಾಜಪೇಟೆ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಬಿರಾರ್ಥಿಗಳು, ಪದವಿ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಶೆಟ್ಟಿಗೇರಿಯ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.









