
ಮಡಿಕೇರಿ NEWS DESK ಫೆ.20 : ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲವೆಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಸ್ವಾಗತಾರ್ಹವಾಗಿದ್ದು, ಇದಕ್ಕೆ ಕಾರಣಕರ್ತರಾದ ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರಿಗೆ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸುವುದಾಗಿ ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ತಿಳಿಸಿದ್ದಾರೆ. ಪ್ಲಾಂಟೇಷನ್ ಬೆಳೆಗಳು ಮತ್ತು ಸಂಬಾರ ಪದಾರ್ಥಗಳನ್ನು ರೈತರು ಬೆಳೆದು ಮೂಲ ರೂಪದಲ್ಲಿ ಮಾರಾಟ ಮಾಡಿದರೆ ಅದು ಕಂದಾಯ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ನಿಯಮವಿದೆ. ಆದರೂ ಕೂಡ ಜಿಎಸ್‌ಟಿ ಪಟ್ಟಿಯಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲವೆಂಬ ಕಾರಣಕ್ಕೆ ಜಿಎಸ್‌ಟಿ ಕೌನ್ಸಿಲ್ ಕೆಲವು ಕರಿಮೆಣಸು ಬೆಳೆಗಾರರಿಗೆ ನೋಟೀಸ್ ನೀಡಿತ್ತು. ಇದರಿಂದ ಗೊಂದಲ ಏರ್ಪಟ್ಟು ಬೆಳೆಗಾರರ ವಿವಿಧ ಸಂಘಟನೆಗಳು ಸಂಸದ ಯದುವೀರ್ ಅವರ ಗಮನ ಸೆಳೆದಿದ್ದವು. ಬೆಳೆಗಾರರ ಮನವಿಗೆ ತಕ್ಷಣ ಸ್ಪಂದಿಸಿದ ಸಂಸದರು ಕೇಂದ್ರ ಹಣಕಾಸು ಸಚಿವರೊಂದಿಗೆ ಸಮಾಲೋಚನೆ ನಡೆಸಿ ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಅನ್ವಯವಾಗದಂತೆ ನೋಡಿಕೊಂಡಿದ್ದಾರೆ. ಇದು ಸಂಸದರಿಗೆ ಇರುವ ಜನಪರ ಕಾಳಜಿ ಮತ್ತು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ದೊಡ್ಡ ಗುಣಕ್ಕೆ ಸಾಕ್ಷಿಯಾಗಿದೆ ಎಂದು ರಾಕೇಶ್ ದೇವಯ್ಯ ಶ್ಲಾಘಿಸಿದ್ದಾರೆ.








