
ಮಡಿಕೇರಿ ಫೆ.21 NEWS DESK : ಕರ್ನಾಟಕ ಜಾನಪದ ಅಕಾಡೆಮಿ ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ಫೆ.24 ರಂದು ಕಾಲೇಜು ಸಭಾಂಗಣದಲ್ಲಿ ‘ಕೊಡಗು ಜಾನಪದ ಬೆಡಗು-ಜಾನಪದ ನಡೆ ವಿದ್ಯಾರ್ಥಿಗಳ ಕಡೆ’ ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಕಾವೇರಿ ಪ್ರಕಾಶ್, ಜಾನಪದ ಎನ್ನುವುದು ಸಾಹಿತ್ಯದ ಮೂಲಬೇರು. ಇಂತಹ ಅಮೂಲ್ಯ ಜಾನಪದ ಸಂಸ್ಕೃತಿ ಪರಂಪರೆಗಳು ತಲೆತಲಾಂತರಗಳಿಂದ ಹರಿದು ಬಂದಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಅಂದು ಬೆಳಗ್ಗೆ 10.30 ಗಂಟೆಗೆ ‘ಕೊಡಗು ಜಾನಪದ ಬೆಡಗು’ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವ ಪ್ರಸಾದ್ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೆಂಕಟೇಶ ಪ್ರಸನ್ನ ಪಿ.ಕೆ. ವಹಿಸಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಸಹ ಸಂಚಾಲಕರು ಹಾಗೂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಮೋಹನ್ ಕುಮಾರ್ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ‘ಕೊಡಗಿನ ಸಾಂಪ್ರದಾಯಿಕ ಊಟೋಪಚಾರಗಳು’ ವಿಷಯದ ಕುರಿತು ಡಾ.ಕಾವೇರಿ ಪ್ರಕಾಶ್ ಮತ್ತು ‘ಬುಡಕಟ್ಟು ಸಂಸ್ಕೃತಿಯಲ್ಲಿ ಕುಡಿಯರು’ ವಿಷಯದ ಕುರಿತು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಅವರು ವಿಷಯ ಮಂಡನೆ ಮಾಡಲಿದ್ದಾರೆ ಎಂದರು. ಅತಿಥಿಗಳಾಗಿ ಐಕ್ಯೂಎಸಿ ಸಂಚಾಲಕರಾದ ಡಾ.ನಿರ್ಮಲ ಕೆ.ಡಿ., ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಅಂಬೇಕಲ್ ನವೀನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸ ಡಾ.ಮೋಹನ್ ಕುಮಾರ್, ಜಾನಪದ ಅಕಾಡೆಮಿಯ ಸದಸ್ಯ ಸಂಚಾಲಕ ಡಾ.ಮೈಸೂರು ಉಮೇಶ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಕಡ್ಲೇರ ತುಳಸಿ ಮೋಹನ್ ತಂಡದಿಂದ ಸುಗ್ಗಿ ಕುಣಿತ, ವಿಷ್ಣು ಪ್ರಿಯ ಮತ್ತು ತಂಡದಿಂದ ಕೊಡವ ಜಾನಪದ ನೃತ್ಯ, ಕುಡಿಯರ ಮುತ್ತಪ್ಪ ತಂಡದಿಂದ ದುಡಿಕೊಟ್ಟ್ ಪಾಟ್ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಚೈತ್ರ ಎಸ್.ಜಿ., ಕಾಲೇಜು ವಿದ್ಯಾರ್ಥಿ ಸಂಘದ ವಿಷ್ಣು ಪ್ರಿಯ, ಯೋಗೇಶ್ ಹಾಗೂ ಸುಫಾನ ಉಪಸ್ಥಿತರಿದ್ದರು.









