


ಮಡಿಕೇರಿ ಮಾ.7 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ ನಲ್ಲಿ ಸಾಲದ ಪ್ರಮಾಣ ಭಾರೀ ಹೆಚ್ಚಳವಾಗಿದ್ದು, ಜನರನ್ನು ಸಾಲದಲ್ಲಿ ಮುಳುಗಿಸಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಕೂಡ ಕೊಡಗು ಜಿಲ್ಲೆಗೆ ನಿರಾಶೆಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷೆ ಮಾಡಿತ್ತು, ಆದರೆ ಅದೆಲ್ಲವೂ ಹುಸಿಯಾಗಿದೆ ಎಂದು ತಿಳಿಸಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿಗೆ ಸಮುದಾಯ ಆಸ್ಪತ್ರೆ, ವಿರಾಜಪೇಟೆಗೆ 400 ಹಾಸಿಗೆಗಳ ಆಸ್ಪತ್ರೆ, ಕುಶಾಲನಗರ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಘೋಷಣೆ ಸ್ವಾಗತಾರ್ಹ. ಆದರೆ ಬಜೆಟ್ ನಲ್ಲಿ ಕಾಯ್ದಿರಿಸಿದ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಒಂದು ವರ್ಷದ ಅಕಾಲಿಕ ಮಳೆಯಿಂದ ಜಿಲ್ಲೆಯ ರಸ್ತೆಗಳು ಗುಂಡಿ ಬಿದ್ದಿವೆ. ರಸ್ತೆ ಅಭಿವೃದ್ಧಿಗೆ ಕೇವಲ 20 ಕೋಟಿ ರೂ. ನೀಡಿದ್ದಾರೆ. ಜಿಲ್ಲೆಯ ಕೃಷಿಕರ ಬೆಳೆ ನಷ್ಟ ಪರಿಹಾರಕ್ಕೆ ಅನುದಾನ ನೀಡಿಲ್ಲ, ವನ್ಯಜೀವಿ ದಾಳಿ ತಡೆಗೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಕೈಗಾರಿಕೋದ್ಯಮ ಸ್ಥಾಪನೆಗೆ ಕಾಳಜಿ ತೋರಿಲ್ಲ. ರಾಜ್ಯ ಸರ್ಕಾರದಿಂದ ಮತ್ತೆ ಕೊಡಗು ಜಿಲ್ಲೆ ಕಡೆಗಣಿಸಲ್ಪಟ್ಟಿದೆ ಎಂದು ಆರೋಪಿಸಿದ್ದಾರೆ. ಕಳೆದ 20 ತಿಂಗಳ ಅಲ್ಪಾವಧಿಯಲ್ಲಿ ಸುಮಾರು ರೂ.3ಲಕ್ಷದ 5ಸಾವಿರ ಕೋಟಿಯಷ್ಟು ಹೊಸ ಸಾಲ ಆಗಿದೆ. ರಾಜ್ಯದ ಈಗಿನ ಒಟ್ಟು ಸಾಲ ರೂ.7 ಲಕ್ಷ ಕೋಟಿ 64 ಸಾವಿರ ದಾಟಲಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಹಣಕಾಸು ವ್ಯವಹಾರ ಶಿಸ್ತುಬದ್ಧವಾಗಿಲ್ಲ. ಈಗಾಗಲೇ ಜನ ಸಾಮಾನ್ಯರ ಮೇಲೆ ವಿವಿಧ ತೆರಿಗೆ ಹೇರಲಾಗಿದೆ, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಸಾಲದ ಹೊರೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಸಾಧ್ಯತೆಗಳಿದೆ ಎಂದು ಭೋಜಣ್ಣ ಸೋಮಯ್ಯ ಆರೋಪಿಸಿದ್ದಾರೆ.