


ಮಡಿಕೇರಿ ಮಾ.7 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್, ರಾಜ್ಯದ ಸಮಸ್ತ ಕನ್ನಡಿಗರಿಗೆ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ಟೀಕಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಬಜೆಟ್‍ನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದೇಶಿ ಶಿಕ್ಷಣದ ನೆರವನ್ನು 20 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಿರುವುದಲ್ಲದೆ, ವಿವಿಧ ಸೌಲಭ್ಯಗಳನ್ನು ನೀಡಲಾಗಿದ್ದು, ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ರಾಜ್ಯದ ಕನ್ನಡಿಗರೆಲ್ಲರಿಗೂ ಅನ್ವಯವಾಗುವ ರೀತಿಯ ಯೋಜನೆಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು. ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ ಬಜೆಟ್‍ನಲ್ಲಿ ಮೀಸಲಿಟ್ಟ ಹಣವನ್ನು ನೂತನ ವಿವಿಗಳಿಗೆ ನೀಡಿದ್ದಲ್ಲಿ, ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ಬಂದಿಲ್ಲವೆಂದು ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಮತ್ತು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನ್ಯಾಯಯುತವಾಗಿ ನೀಡಬೇಕಾದ ಹಣವನ್ನು ನೀಡಿದೆ ಎಂದು ತಿಳಿಸಿದರು. ಕೊಡಗಿಗೆ ರೈಲ್ವೆ ಸಂಪರ್ಕಕ್ಕೆ ಅಗತ್ಯ ನೆರವನ್ನು ಕೇಂದ್ರ ನೀಡಿದೆ, ಆದರೆ ರಾಜ್ಯ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗಳಿಗೆ ಅಗತ್ಯವಾದ ಹಣವನ್ನು ಒದಗಿಸುವ ತನ್ನ ಜವಾಬ್ದಾರಿ ನಿರ್ವಹಿಸಿಲ್ಲವೆಂದು ಯದುವೀರ್ ಒಡೆಯರ್ ಆರೋಪಿಸಿದರು.