


ಮಡಿಕೇರಿ ಮಾ.7 NEWS DESK : ಕೊಡಗು ಜಿಲ್ಲೆಯ ಶಾಸಕದ್ವಯರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಬಿಜೆಪಿ ಮಂದಿ ಜಿಲ್ಲೆಯ ಜನರ ಹಾದಿ ತಪ್ಪಿಸುವುದಕ್ಕಾಗಿ ರಾಜಕೀಯ ಪ್ರೇರಿತವಾದ ಧರಣಿ ಸತ್ಯಾಗ್ರಹ ನಡೆಸಿದ್ದಾರೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಜಿ.ಮೋಹನ್ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನಿಂದ ಹತಾಶೆಗೊಂಡಿರುವ ಬಿಜೆಪಿ ನಾಯಕರು ಇಬ್ಬರು ಕಾಂಗ್ರೆಸ್ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ನಿತ್ಯ ಪ್ರತಿಭಟನೆಯ ಪ್ರಹಸನ ಮಾಡುತ್ತಿದ್ದಾರೆ. ತಮ್ಮ ಸುದೀರ್ಘ ಕಾಲದ ಅಧಿಕಾರವಧಿಯಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಸೂಚಿಸದವರು ಇಂದು ಅದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಆರೋಪಿಸಿದ್ದಾರೆ. ಸಿ ಮತ್ತು ಡಿ ಭೂಮಿಯ ಗೊಂದಲ, ವನ್ಯಜೀವಿಗಳ ಹಾವಳಿ, ಬೆಳೆಗಾರರ ಕಡೆಗಣನೆ, ಪರಿಶಿಷ್ಟರ ಸಂಕಷ್ಟ ಇವುಗಳೆಲ್ಲವು ಇಂದು ಸೃಷ್ಟಿಯಾದ ಸಮಸ್ಯೆಗಳಲ್ಲ. ಕಳೆದ ಎರಡು ದಶಕಗಳಿಂದಲೂ ಈ ಸಮಸ್ಯೆ ಶಾಶ್ವತವಾಗಿಯೇ ಉಳಿದುಕೊಂಡಿವೆ. ಕಳೆದ 20 ವರ್ಷಗಳಿಂದ ಅಭಿವೃದ್ಧಿ ಕಾಣದ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದ ರಸ್ತೆಗಳೆಲ್ಲವೂ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರ ಕಾಳಜಿಯಿಂದ ಅಭಿವೃದ್ಧಿಯನ್ನು ಕಾಣುತ್ತಿವೆ. ಇವರುಗಳ ವಿಶೇಷ ಆಸಕ್ತಿಯಿಂದಲೇ ಮುಖ್ಯಮಂತ್ರಿಗಳು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಆಸ್ಪತ್ರೆಗಳು ಮತ್ತು ರಸ್ತೆಗಳ ಅಭಿವೃದ್ಧಿಗೆ ಜಿಲ್ಲೆಗೆ ಅನುದಾನ ಮೀಸಲಿಡಲಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ದಾಖಲೆ ರೂಪದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವನ್ನು ಪಡೆದುಕೊಂಡಿದ್ದು, ಇನ್ನು ಮುಂದೆಯೂ ಉತ್ತಮ ಅಭಿವೃದ್ಧಿ ಯೋಜನೆಗಳನ್ನು ನಿರೀಕ್ಷಿಸಬಹುದಾಗಿದೆ. ಮುಖ್ಯಮಂತ್ರಿಗಳಿಗೆ ಕೊಡಗಿನ ಬಗ್ಗೆ ವಿಶೇಷ ಕಾಳಜಿ ಇರುವುದರಿಂದಲೇ ಅವರು ಮೂರು ಬಾರಿ ಇಲ್ಲಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಕೊಡಗು ವಿವಿ ಮುಚ್ಚದಂತೆ ತಡೆಯಲು ಜಿಲ್ಲೆಯ ಇಬ್ಬರು ಶಾಸಕರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದರೂ ವಿನಾಕಾರಣ ರಾಜಕೀಯ ಲಾಭಕ್ಕಾಗಿ ಬಿಜೆಪಿ ಧರಣಿ ನಡೆಸುತ್ತಿದೆ ಎಂದು ವಿ.ಜಿ.ಮೋಹನ್ ಆರೋಪಿಸಿದ್ದಾರೆ. ಬಿಜೆಪಿ ನಾಯಕರು ಅಭಿವೃದ್ಧಿಪರ ಚಿಂತನೆಯ ಜಿಲ್ಲೆಯ ಇಬ್ಬರು ಶಾಸಕರು ಹಾಗೂ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಕೊಡಗು ಜಿಲ್ಲೆಗೆ ಬರಬೇಕಾದ ಯೋಜನೆ ಮತ್ತು ಅನುದಾನಗಳ ಬಗ್ಗೆ ಚಿಂತಿಸಲಿ. ಈ ಕ್ಷೇತ್ರದ ಸಂಸದರು ವಿಶೇಷ ಕಾಳಜಿ ತೋರಿ ಕೇಂದ್ರ ಸರ್ಕಾರದಿಂದ ಅನುದಾನ ತಂದು ಕೊಡಗು ವಿವಿ ಉಳಿಸಲು ನೈಜ ಕಾಳಜಿ ತೋರಲಿ ಎಂದು ಒತ್ತಾಯಿಸಿರುವ ಅವರು, ಬಿಜೆಪಿಯ ನಾಟಕೀಯ ರೂಪದ ಪ್ರತಿಭಟನೆಗಳನ್ನು ಜಿಲ್ಲೆಯ ಜನ ಇನ್ನು ಮುಂದೆ ನಂಬುವುದಿಲ್ಲವೆಂದು ತಿಳಿಸಿದ್ದಾರೆ.