


ಮಡಿಕೇರಿ NEWS DESK ಮಾ.11 : ಮಡಿಕೇರಿ ನಗರಸಭೆ 2025-26ನೇ ಸಾಲಿನಲ್ಲಿ ಒಟ್ಟು 1.33 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದೆ. ನಗರಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜ ಅಧ್ಯಕ್ಷತೆಯಲ್ಲಿ ನಡೆಸಲಾದ ಸಭೆಯಲ್ಲಿ ಪೌರಾಯುಕ್ತ ರಮೇಶ್ ಅವರು ಬಜೆಟ್ ಮಂಡಿಸಿದರು. ಆಸ್ತಿ ತೆರಿಗೆ, ನಗರ ಸಭಾ ಅಂಗಡಿ ಮಳಿಗೆಗಳ ಬಾಡಿಗೆ, ಮಾರುಕಟ್ಟೆ ಹರಾಜು, ಸರಕಾರದ ವಿವಿಧ ನಿಧಿಗಳ ನೆರವು ಸೇರಿದಂತೆ ವಿವಿಧ ಆದಾಯ ಮೂಲಗಳನ್ನು ಉಲ್ಲೇಖಿಸಿ 1 ಕೋಟಿ 33 ಲಕ್ಷದ 88 ಸಾವಿರದ 282 ರೂ.ಗಳ ಬಜೆಟ್ ಅನ್ನು ಇಂದು ಮಂಡಿಸಲಾಯಿತು. *ಚರ್ಚೆಗೆ ಅವಕಾಶ* ಬಜೆಟ್ ಕುರಿತು ಪ್ರತಿಕ್ರಿಯಿಸಿದ ಹಿರಿಯ ಸದಸ್ಯ ಕೆ.ಎಸ್.ರಮೇಶ್ ನಗರ ಸಭೆಯಿಂದ ಉಳಿತಾಯದ ಬಜೆಟ್ ಮಂಡಿಸಿರುವುದನ್ನು ಸ್ವಾಗತಿಸುವುದಾಗಿ ಹೇಳಿದರಲ್ಲದೇ, ಬಜೆಟ್ ಮೇಲಿನ ಚರ್ಚೆ ನಡೆಸಲು ಕನಿಷ್ಟ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ರಮೇಶ್ ಇದೇ ಸಂದರ್ಭ ಆಡಳಿತಾಧಿಕಾರಿಗಳ ಬಳಿ ಮನವಿ ಮಾಡಿದರು. ಇದಕ್ಕೆ ಇತರ ಸದಸ್ಯರು ಕೂಡ ಧ್ವನಿಗೂಡಿಸಿದರು. ಮಾರ್ಚ್ 29ರ ಒಳಗೆ ಬಜೆಟ್ ಕುರಿತು ಚರ್ಚಿಸಲು ಸಭೆಯ ದಿನಾಂಕ ನಿಗಧಿ ಮಾಡಲಾಗುತ್ತದೆ. ಈ ವೇಳೆ ಯಾವುದೇ ರೀತಿಯ ಮಾಹಿತಿಗಳ ಬೇಕಿದ್ದಲ್ಲಿ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜ ಸಭೆಗೆ ತಿಳಿಸಿದರು. ಸದಸ್ಯ ಮನ್ಸೂರ್ ಮಾತನಾಡಿ ಬಜೆಟ್ ಉಪಯೋಗ ಆದು ನೋಡಬೇಕಿದೆ. ಮಡಿಕೇರಿ ಗುಡ್ಡ ಗಾಡು ಪ್ರದೇಶವಾದ ಕಾರಣ ತಡೆಗೋಡೆ, ಚರಂಡಿಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಹೇಳಿದರು. ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ನಗರದ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚಿನ ಅನುದಾನ ಇಡಬೇಕು ಎಂದು ಹೇಳಿದರು. *ಹೊರೆಯಾಗದಂತೆ ತೆರಿಗೆ ವಿಧಿಸಿ* ಆಸ್ತಿ ತೆರಿಗೆ ಹೆಚ್ಚಳ ಮಾಡುವ ಕುರಿತು ಸರಕಾರ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಪ್ರಕಾರ ಕನಿಷ್ಟ ಶೇ.3ರಿಂದ ಗರಿಷ್ಟ ಶೇ.5 ರಷ್ಟು ತೆರಿಗೆ ವಿಧಿಸಲು ಅವಕಾಶವಿದೆ ಎಂದು ನಗರಸಭಾ ಅಧಿಕಾರಿ ತಾಹೀರ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಅರುಣ್ ಶೆಟ್ಟಿ ಮತ್ತು ಇತರರು, ಈಗಾಗಲೇ ಆಸ್ತಿ ತೆರಿಗೆ ಹೆಚ್ಚಳವಾಗಿದ್ದು, ಅಗತ್ಯ ವಸ್ತುಗಳ ಬೆಲೆಗಳು ಕೂಡ ಏರಿಕೆಯಾಘಿದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ಹೊರೆಯಾಗದಂತೆ ಕನಿಷ್ಟ ಶೇ.3ರಷ್ಟು ತೆರಿಗೆ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಕನಿಷ್ಟ ತೆರಿಗೆ ವಿಧಿಸಲು ಸಭೆಯಲ್ಲಿ ಸರ್ವ ಮತದ ಅನುಮೋದನೆ ಪಡೆಯಲಾಯಿತು. *ಹಂತ ಹಂತವಾಗಿ ಜಾರಿ ಮಾಡಿ* ಮಡಿಕೇರಿ ನಗರದಲ್ಲಿ 1 ಲೀಟರ್ ನೀರಿನ ಪ್ಲಾಸ್ಟಿಕ್ ಬಾಟಲಿ ನಿಷೇಧದ ಕುರಿತು ಮಾತನಾಡಿದ ಸದಸ್ಯರ ಕೆ.ಎಸ್.ರಮೇಶ್, ನೀರಿನ ಬಾಟಲಿ ನಿಷೇಧ ಕ್ರಮ ಸ್ವಾಗತಾರ್ಹ. ಆದರೆ ನೀರಿನ ಬಾಟಲಿಗಳ ಜೊತೆಯಲ್ಲೇ ಜ್ಯೂಸ್ ಬಾಟಲಿಗಳು ಕೂಡ ತುಂಬಿ ಹೋಗಿವೆ. ಅವುಗಳ ಮೇಲೂ ನಿಷೇಧ ಹೇರಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕುರಿತು ಮೊದಲು ಜನ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ಪ್ಲಾಸ್ಟಿಕ್ ಬಾಟಲಿಗಳ ಜೊತೆಯಲ್ಲಿಯೇ ಜ್ಯೂಸ್, ಪ್ಲಾಸ್ಟಿಕ್ ಪ್ಯಾಕೇಟ್‌ಗಳ ಚಿಪ್ಸ್ಗಳು ಕೂಡ ಮಾರುಕಟ್ಟೆಯಲ್ಲಿವೇ. ಇವುಗಳನ್ನು ಹಂತ ಹಂತವಾಗಿ ನಿಷೇಧಿಸಲು ಕೂಡ ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಂಗ್ರಹ ಮಾಡಿರುವ ನೀರಿನ ಬಾಟಲಿಗಳ ಮಾರಾಟಕ್ಕೆ ಅವಕಾಶ ನೀಡಬೇಕು. ನಿಷೇಧಕ್ಕೆ ಒಂದು ಕಾಲಮಿತಿಯನ್ನೂ ಅಳವಡಿಸುವಂತಾಗಬೇಕು ಎಂದು ಸಲಹೆ ನೀಡಿದರು. *ಪ್ರತಿಮೆ ನಿರ್ಮಾಣಕ್ಕೆ ಅನುಮೋದನೆ*
ನಗರದ ಸುದರ್ಶನ ವೃತ್ತದ ಬಳಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಲು ಸ್ಥಳಾವಕಾಶವಿದೆ. ಅಲ್ಲಿಯೇ ಪ್ರತಿಮೆ ನಿರ್ಮಾಣಕ್ಕೆ ನಗರ ಸಭೆ ಅನುಮತಿ ನೀಡುವಂತೆ ಸದಸ್ಯ ಸತೀಶ್ ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಬಷೀರ್, ಸುದರ್ಶನ ವೃತ್ತ ಬಳಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ. ಭವಿಷ್ಯದ ದಿನಗಳಲ್ಲಿ ಈ ರಸ್ತೆಗಳು ವಿಸ್ತರಣೆಯಾಗುತ್ತದೆ. ಆ ಸಂದರ್ಭ ಪ್ರತಿಮೆಯನ್ನು ತೆರವು ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಿರುವ ನೂತನ ಖಾಸಗಿ ಬಸ್ ನಿಲ್ದಾಣದ ಪಾರ್ಕ್ ಸ್ಥಳ ಅಥವಾ ಹಳೇ ಖಾಸಗಿ ಬಸ್ ನಿಲ್ದಾಣದ ಮೇಲ್ಭಾಗ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸುವುದು ಸೂಕ್ತ ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಯಿತು. ಈ ಸಂದರ್ಭ ಮಧ್ಯ ಪ್ರವೇಶಿಸಿದ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜ ಅವರು, ಸದಸ್ಯರ ಒಪ್ಪಿಗೆಯನ್ನು ಬಹುಮತಕ್ಕೆ ಒಳಪಡಿಸಿದರು. ಬಹುತೇಕ ಎಲ್ಲ ಸದಸ್ಯರು ಕೈ ಎತ್ತುವ ಮೂಲಕ ಸುದರ್ಶನ ವೃತ್ತ ಬಳಿ ಇರುವ ನಗರಸಭೆ ಪಾರ್ಕ್ನಲ್ಲಿಯೇ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಲು ಒಪ್ಪಿಗೆ ಸೂಚಿಸಿದರು. ಇನ್ನುಳಿದಂತೆ ಕುರಿಯುವ ನೀರಿನ ಸಮಸ್ಯೆ, ಬೀದಿ ನಾಯಿಗಳ ಹಾವಳಿ, ಕೆರೆಗಳು ಮತ್ತು ನಗರದ ಪಾರ್ಕ್ಗಳ ಅಭಿವೃದ್ದಿ, ಕಸ ಸಹಿತ ಘನ ತ್ಯಾಜ್ಯ ವಿಲೇವಾರಿ, ಗಾಂಧಿ ಮೈದಾನದಲ್ಲಿ ನೂತನ ರಂಗ ಮಂದಿರ ನಿರ್ಮಾಣ, ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಮತ್ತಿತ್ತರ ವಿಚಾರಗಳ ಕುರಿತು ಚರ್ಚೆ ನಡೆಯಿತು.