




































ಮಡಿಕೇರಿ NEWS DESK ಮಾ.31 : ಕೊಡವ ಬಲ್ಯ ನಮ್ಮೆ ಸಂಪನ್ನ ಹತ್ತು ಹಲವು ವಿಭಿನ್ನ-ವಿಶೇಷ ಕಾರ್ಯಕ್ರಮಗಳಿಂದ ಸಾವಿರಾರು ಜನರನ್ನು ಆಕರ್ಷಿಸುವಲ್ಲಿ ಎರಡು ದಿನಗಳ ಕೊಡವ ಬಲ್ಯನಮ್ಮೆ ಯಶಸ್ವಿ ಕಂಡಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ ಜರುಗಿನ ಅಕಾಡೆಮಿಯ ಪ್ರಥಮ ಆರ್ಥಿಕ ವರ್ಷದ ಕೊನೆಯ ಕಾರ್ಯಕ್ರಮವಾಗಿ ‘ಕೊಡವ ಬಲ್ಯ ನಮ್ಮೆ’ಯ ಎರಡನೇ ದಿನ ವಿಚಾರಗೋಷ್ಠಿ, ಅಕಾಡೆಮಿ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿ, ದುಡಿ-ತಾಳ ನೀಡುವ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಥಿತಿಗಳ ಭಾಷಣಗಳಿಂದ ನೆರೆದಿದ್ದ ಸಾವಿರಾರು ಜನರ ತನು-ಮನ ತಣಿಸಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಿಶೇಷವಾಗಿ ದೇವರಿಗೆ ದೀಪ ಬೆಳಗಿ, ಸ್ತುತಿಸಿ, ಸಾಹಿತ್ಯ ಮಾನ್ಯರ ಭಾವಚಿತ್ರಕ್ಕೆ ಹೂವು-ಅಕ್ಕಿ ಹಾಕಿ ನಮಿಸಿದ ನಂತರ ಸವಿವರವಾಗಿ ಸರ್ವರನ್ನು ಸ್ವಾಗತಿಸಿ ಸರ್ವರ ಸಹಕಾರಕ್ಕೆ ಕೃತಜ್ಞತೆಗಳನ್ನು ಸಮರ್ಪಿಸಿದರು. ಕೊಡವ ಉಡುಪುರ ಭೀರ್ಯ’ ವಿಷಯವಾಗಿ ಕವಯಿತ್ರಿ ಮೂವೆರ ರೇಖ ಪ್ರಕಾಶ್ ವಿಷಯ ಮಂಡಿಸಿ ಕೊಡವ ಪುರುಷರ ಹಾಗೂ ಸ್ತ್ರೀಯರ ಉಡುಗೆ-ತೊಡುಗೆಗಳ ವಿಶೇಷತೆ, ವಿನ್ಯಾಸ, ಹಿರಿಮೆಗಳ ಮೇಲೆ ಬೆಳಕು ಚೆಲ್ಲಿದರು. ಇಂದಿನ ಬಾಲಕರು ದಾಡಿ ಬಿಡುತ್ತಿರುವ ಶೈಲಿಗೆ ವಿಷಾದ ವ್ಯಕ್ತಿಪಡಿಸಿದ ಅವರು ಕೊಡವರ ಪದ್ಧತಿಯಂತೆ ದಾಡಿ ಬಿಡುವುದರ ಬಗ್ಗೆ ತಿಳಿ ಹೇಳಿದರು. ಬಾಲಕಿಯರು, ಸ್ತ್ರೀಯರು ಕೊಡವ ಸೀರೆಯ ಉಡುಗೆಗೆ ಆದ್ಯತೆ ಕೊಡುವಂತೆ ಹೇಳಿದರು. ‘ಕೃಷಿ ಬದ್‌ಕ್‌ಲ್ ಕೊಡವಾಮೆ’ ವಿಷಯವಾಗಿ ರಾಷ್ಟ್ರದ ಕೃಷಿ ಸಮ್ಮಾನ್ ಪುರಸ್ಕೃತರಾದ ಸೋಮೇಂಗಡ ಗಣೇಶ್ ತಿಮ್ಮಯ್ಯ ತಮ್ಮ ಅನುಭವಗಳನ್ನು ಹಂಚಿಕೊಂಡರಲ್ಲದೆ, ಚಿಕ್ಕಂದಿನಿಂದಲೇ ಕೃಷಿಯ ಮೇಲಿನ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸುವಂತೆ ಪೋಷರಲ್ಲಿ ಮನವಿ ಮಾಡಿಕೊಂಡರು. ಸಾವಯವ ಕೃಷಿ, ಆಧುನಿಕ ಕೃಷಿಯ ಬಗ್ಗೆ ನುಡಿದರು. ವಿಚಾರ ಮಂಡನೆಯನ್ನು ಸಾಹಿತಿ-ಸಂಶೋದಕ ಮೂಕೊಂಡ ನಿತಿನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಸಾಹಿತಿ ಬಾಚಮಡ ಡಿ. ಗಣಪತಿ ಜ್ಞಾಪಕಾರ್ಥ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮಂಡೇಪಂಡ ಸುಗುಣ ಮುತ್ತಣ್ಣ, ಮಾದಾಪುರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪಂಡ ಮನು ಮೇದಪ್ಪ ಆಗಮಿಸಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತರುವಾಯ ನಡೆದ ನಡಿಕೇರಿಯಂಡ ಚಿಣ್ಣಪ್ಪ ೧೫೦ನೇ ವರ್ಷದ ಮುಖ್ಯ ವೇದಿಕೆಯನ್ನು ಕುಟ್ಟಂಡ ರೀಟ ಚಿಣ್ಣಪ್ಪ ಪ್ರಾರ್ಥಿಸುವುದರ ಮೂಲಕ ಆರಂಭಿಸಲಾಯಿತು. ಗೌರವ ಪ್ರಶಸ್ತಿ ಪ್ರದಾನ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಮುಖ್ಯ ವೇದಿಕೆಯಲ್ಲಿ ಒಟ್ಟು ಆರು ಜನರಿಗೆ ಗೌರವ ಪ್ರಶಸ್ತಿ ಹಾಗೂ ನಾಲ್ಕು ಜನರಿಗೆ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊಡವ ಬಲ್ಯ ನಮ್ಮೆಯ ಭವ್ಯ ವೇದಿಕೆಯಲ್ಲಿ ಸಾಧಕರುಗಳಾದ, ಕೊಡವ ಸಂಸ್ಕೃತಿ, ಪಾಟ್-ಪಡಿಪು ಕ್ಷೇತ್ರದ ಸಾಧಕರಾದ ಕೋಡಿಮಣಿಯಂಡ ತಮ್ಮಣಿ ಬೋಪಯ್ಯ, ಕೊಡವ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದ ಸಾಧಕರಾದ ಕಾಟಿಮಡ ಜಿಮ್ಮಿ ಅಣ್ಣಯ್ಯ, ಕೊಡವ ಜಾನಪದ ಕ್ಷೇತ್ರದಲ್ಲಿ ಚೇನಂಡ ರಘು ಉತ್ತಪ್ಪ, ದಾನ-ಧರ್ಮ ಹಾಗೂ ಸಮಾಜ ಸೇವೆಯಲ್ಲಿ ಕೈಬುಲಿರ ಪಾರ್ವತಿ ಬೋಪಯ್ಯ, ಕೊಡವ ಆಟ್-ಪಾಟ್ ಸಂಸ್ಕೃತಿ ಕ್ಷೇತ್ರದಲ್ಲಿ ಚೀಯಕಪೂವಂಡ ಬಿ. ದೇವಯ್ಯ, ಕೊರೋನ ಹಾಗೂ ಭೂಕುಸಿತದಂತಹ ಕಷ್ಟದ ಕಾಲದಲ್ಲಿ ಜನಸೇವೆಗೈದು ಬದುಕು ಕಟ್ಟಿದ ಕೊಡವ ಪರಿಶಿಷ್ಟ ವರ್ಗದ ಹೀರಕುಟ್ಟಡ ಟಸ್ಸಿ ಸದನ್ ಇವರುಗಳಿಗೆ ತಲಾ ರೂ. 50 ಸಾವಿರ, ಶಾಲು, ಹಾರ, ಪ್ರಶಸ್ತಿ ಫಲಕ, ಹೂಗುಚ್ಚ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪುಸ್ತಕ ಪ್ರಶಸ್ತಿ ಪ್ರದಾನ: ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರು ಸಾಹಿತಿಗಳಾದ ಮೂಪಾಜೆ ನಿಗಂಟು ಕರ್ತೃ ಮಚ್ಚಮಡ ಲಾಲ ಕುಟ್ಟಪ್ಪ, ಕೊಡವ ಸಂಸ್ಕೃತಿರ ಅಧ್ಯಯನ ನಡೆಸಿ ಬರೆದ ಪುಸ್ತಕ ಕತೃ ಐಚಂಡ ರಶ್ಮಿ ಮೇದಪ್ಪ, ನಾಡ ಕೊಡಗ್ ಕಾದಂಬರಿ ಕೊಟ್ಟ್ಕತ್ತಿರ ಪ್ರಕಾಶ್ ಕಾರ್ಯಪ್ಪ, ಅಗ್ಗೇನ ಕತೆಗೆ ಚೊಟ್ಟೆಯಂಡಮಡ ಲಲಿತ ಕಾರ್ಯಪ್ಪ ಇವರುಗಳಿಗೆ ಈ ಸಂದರ್ಭದಲ್ಲಿ ತಲಾ ರೂ. ೨೫ ಸಾವಿರ, ಶಾಲು, ಹಾರ, ಪ್ರಶಸ್ತಿ ಫಲಕ, ಹೂಗುಚ್ಚ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ತದನಂತರ ಮಾತನ್ನಾಡಿದ ಕೊಡಗು ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಕೊಡವ ಭಾಷೆಯ ಬೆಳವಣಿಗೆಯೊಂದಿಗೆ ಸಂಸ್ಕೃತಿಯ ಬೆಳವಣಿಗೆಯ ನಿಟ್ಟಿನಲ್ಲಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ಸಾರಥ್ಯದ ಕೊಡವ ಸಾಹಿತ್ಯ ಅಕಾಡೆಮಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂತೆಯೇ ಗೌರವ ಪ್ರಶಸ್ತಿಗೆ ಸಾಧಕರುಗಳನ್ನು ಆಯ್ಕೆ ಮಾಡಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದರು. ಕೊಡವ ಭಾಷೆ, ಸಂಸ್ಕೃತಿಯ ಬೆಳವಣಿಗೆಯ ನಿಟ್ಟಿನಲ್ಲಿ ಸ್ಥಾಪಿಸಿರುವ ಕೊಡವ ಅಕಾಡೆಮಿಯು ಎಲ್ಲಾ ೨೧ ಜನಾಂಗವನ್ನು ಒಳಗೊಂಡಂತೆ ಕಾರ್ಯಕ್ರಮ ರೂಪಿಸಿಕೊಂಡು ಉದ್ದೇಶಿತ ಕಾರ್ಯವನ್ನು ನಿರ್ವಹಿಸಿಕೊಂಡು ನಡೆದರೆ ಸಾರ್ಥಕವಾಗುವುದು. ಕೊಡವ ಅಕಾಡೆಮಿಯ ಕೆಲಸ-ಕಾರ್ಯಗಳ ವಿಚಾರವಾಗಿ ರಾಜಕೀಯ ಬೆರೆಸದೆ ಸರ್ಕಾರದ ವತಿಯಿಂದ ಸಿಗುವ ಆರ್ಥಿಕ ಸವಲತ್ತುಗಳನ್ನು ಸದುಪಯೋಗಪಡಿಕೊಂಡು ಹೋಗುವಂತಾಗಬೇಕು. ರಾಜ್ಯ ಸರ್ಕಾರವು ಕೊಡಗಿನ ಹಾಗೂ ಕೊಡವ ಭಾಷೆ, ಸಂಸ್ಕೃತಿಯ ಬೆಳವಣಿಗೆಯ ದಿಸೆಯಲ್ಲಿ ಹೆಚ್ಚಿನ ಅನುದಾನ ನೀಡುತ್ತಿರುವುದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣನವರ ವಿಶೇಷ ಕಾರ್ಯಕ್ಷಮತೆಯ ಫಲವಾಗಿದ್ದು ಜಿಲ್ಲೆಯ ಶಾಸಕರುಗಳು ಹಾಗೂ ಸರ್ಕಾರದ ಖ್ಯಾತಿಯನ್ನು ಹೆಚ್ಚಿಸುವಲ್ಲಿ ಅಕಾಡೆಮಿ ಸಾಹಿತ್ಯಪರ ಕೆಲಸ ಮಾಡುವಂತಾಗಬೇಕು ಎಂದರು. ರಾಜ್ಯದಲ್ಲಿರುವ ಹಲವು ಬಹುಸಂಖ್ಯಾತ ಹಾಗೂ ಬಲಾಡ್ಯ ಜನಾಂಗದೊಳು ಕೊಡವರು ಅತೀ ಸಣ್ಣ ಸಂಖ್ಯೆಯ ಜನಾಂಗವಾಗಿದ್ದರು ಕೊಡವರ ಬುದ್ದಿವಂತಿಕೆ, ಶಿಸ್ತು, ಪ್ರಾಮಾಣಿಕತೆ, ದಕ್ಷತೆ ಹಾಗೂ ಚಾಕಚಕ್ಯತೆಗೆ ಎಲ್ಲಲ್ಲಿಯೂ ಪ್ರಾಶಸ್ತ್ಯ ವಿದ್ದು ಜನಾಂಗಭಾಂದವರು ನಮ್ಮ ಹಿರಿಯರು ತೋರಿಸಿಕೊಟ್ಟಿರುವ ಸನ್ಮಾರ್ಗದಲ್ಲಿ ಸದಾ ನಡೆಯುವಂತಾಗಬೇಕು ಎಂದರು. ಜನಾಂಗದೊಳಗೆ ಇಲ್ಲಸಲ್ಲತ ವಿಚಾರಕ್ಕೆ ಹಗೆತನ, ಜಗಳ, ಮನಸ್ತಾಪಗಳನ್ನು ಕಳಚಿ ಸುಸ್ಥಿರ ಸಮಾಜವನ್ನು ಕಟ್ಟಿ ಬೆಳೆಸಬೇಕಿದೆ ಎಂದರು. ಕೊಡಗು ಜಿಲ್ಲಾ ಅಸಿಸ್ಟೆಂಟ್ ಕನ್‌ಸರ್ವೇಟರ್ ಆಫ್ ಫಾರೆಸ್ಟ್ ಐರಿರ ಎ. ಗೋಪಾಲ್ ತಮ್ಮ ಮಾತಿನಲ್ಲಿ, ಕೊಡವ ಸಾಹಿತ್ಯ ಅಕಾಡೆಮಿಯು ಉತ್ತಮ ಕಾರ್ಯಕ್ರಮಳನ್ನು ಮಾಡುತ್ತಾ ಬರುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತುಷ್ಟು ಉತ್ತಮ ಕಾರ್ಯಕ್ರಮಗಳು ನಾಡಿನೆಲ್ಲೆಡೆ ನಡೆಯುವಂತಾಗಲಿ. ಕೊಡವ ಬಾಷೆ, ಸಂಸ್ಕೃತಿಗೆ ಹೊಂದಿಕೊಂಡಿರುವ ಎಲ್ಲಾ ಸಮುದಾಯಗಳು ಸಾಮರಸ್ಯವನ್ನು ಬೆಳೆಸಿಕೊಂಡು ಒಟ್ಟಾಗಿ ಸಾಗುವುದರ ಮೂಲಕ ಕೊಡವ ಬಾಷೆ-ಸಾಹಿತ್ಯದ ಹಿರಿಮೆಯನ್ನು ಎತ್ತಿಹಿಡಿಯುವಂತಾಗಲಿ ಎಂದರು. ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಕರವಟ್ಟಿರ ಟಿ. ಪೆಮ್ಮಯ್ಯ, ಮೈಸೂರು ಕೊಡವ ಸಮಾಜದ ಅಧ್ಯಕ್ಷರಾದ ಪೊಂಜಂಡ ಗಪ್ಪು ಗಣಪತಿ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಕೆ. ಬೋಪಣ್ಣ, ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಎನ್. ಪೃಥ್ಯು, ಅರಮನೆಪಾಲೆ ಸಮಾಜದ ಅರಮನೆಪಾಲೆರ ಕೆ.ಮಂದಣ್ಣ, ಜಾನಪದ ಕಲಾವಿದ ಕುಡಿಯರ ಕೆ. ಪೊನ್ನಪ್ಪ, ಮೇದ ಜನಾಂಗದಿಂದ ಜಾನಪದ ಕಲಾವಿದ ಮೇದರ ಜಿ. ಚಂದ್ರ, ಕಾಪಾಳ ಜನಾಂಗದ ಜಾನಪದ ಕಲಾವಿದ ಕಾಪಾಳಡ ತಮ್ಮಯ್ಯ ಪೂಣಚ್ಚ, ಕೊಡವ ಸಾಹಿತ್ಯ ಅಕಾಡೆಮಿಯ ಸರ್ವ ಸದಸ್ಯರು, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಸರ್ವ ಸಮಿತಿ ಸದಸ್ಯರು, ಕೊಡವ ಬಲ್ಯನಮ್ಮೆಯ ಉಪ ಸಮಿತಿಯ ಅಧ್ಯಕ್ಷರು, ಅಕಾಡೆಮಿ ಸದಸ್ಯ-ಸಂಚಾಲಕರು, ಸಹ ಸದಸ್ಯರು, ಹಲವು ಸಮಾಜದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಮುಖ್ಯಸ್ಥರು, ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು. ವೇದಿಕೆಯಲ್ಲಿ ರಾಜ್ಯ ಜಾನಪದ ಪ್ರಶಸ್ತಿ ವಿಜೇತೆ ಕುಡಿಯರ ಶಾರದ ತಂಡದಿಂದ ಉರ್‌ಟಿಕೊಟ್ಟ್ ಆಟ್, ಮಂದತವ್ವ ಕೊಡವ ಸಾಂಸ್ಕೃತಿಕ ತಂಡದಿಂದ ಗೆಜ್ಜೆತಂಡ್ ಆಟ್ ಎಲ್ಲರ ಮನತಣಿಸಿತು. ತದನಂತರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಹುಮಾನಿರಾದ ಎಲ್ಲಾ ತಂಡದವರಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಇಡೀ ದಿನದ ಕಾರ್ಯಕ್ರಮವನ್ನು ಚೋಕಿರ ಅನಿತ ದೇವಯ್ಯ, ಅಜ್ಜಿಕುಟ್ಟಿರ ಸಿ. ಗಿರೀಶ್, ಕ್ಯಾ. ಬಿದ್ದಂಡ ನಾಣಿ ದೇವಯ್ಯ ಹಾಗೂ ಮಾಚಿಮಂಡ ಸುರೇಶ್ ಅಯ್ಯಪ್ಪ ಅತ್ಯುತ್ತಮವಾಗಿ ನಿರೂಪಿಸಿ ವೇದಿಕೆ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಅಕಾಡೆಮಿ ಸದಸ್ಯರುಗಳಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನ ಬೋಜಣ್ಣ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪೊನ್ನಿರ ಯು ಗಗನ್, ಕುಡಿಯರ ಎಂ. ಕಾವೇರಪ್ಪ, ನಾಯಂದಿರ ಆರ್. ಶಿವಾಜಿ, ಚೆಪ್ಪುಡಿರ ಎಸ್. ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಸಿ. ಗಣೇಶ, ರಿಜಿಸ್ಟ್ರಾರ್ ಚಿನ್ನಸ್ವಾಮಿ ಹಾಜರಿದ್ದರು.