





ಮಡಿಕೇರಿ ಏ.5 NEWS DESK : ಮಕ್ಕಳ ಪೋಷಣೆ ಮತ್ತು ರಕ್ಷಣೆ(ಬಾಲ ನ್ಯಾಯ ಕಾಯ್ದೆ) ಸಂಬಂಧಿಸಿದಂತೆ ಮಾಹಿತಿ ಶಿಕ್ಷಣ, ಮಾರ್ಗದರ್ಶನದ ಮೂಲಕ ಹೆಚ್ಚಿನ ಜಾಗೃತಿ ಮೂಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಹಾಡಿಗಳಲ್ಲಿ, ಲೈನ್ ಮನೆಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಹೆಚ್ಚಿನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೂಚಿಸಿದರು. ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಎಲ್ಲೆಡೆ ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ಸಲಹೆ ಮಾಡಿದರು. ಬಾಲನ್ಯಾಯ ಕಾಯ್ದೆಯ ವಿಶೇಷ ಪಾಲನೆಯಡಿ 18 ವರ್ಷದೊಳಗಿನ ಮಕ್ಕಳ ವಿಶೇಷ ಪಾಲನೆ ಯೋಜನೆ ಜಾರಿಗೆ ಬಂದಿದ್ದು, ತಂದೆ ತಾಯಂದಿರು ಎಚ್‍ಐವಿ ರೋಗಕ್ಕೆ ತುತ್ತಾಗಿ ಮರಣ ಹೊಂದಿದ್ದಲ್ಲಿ ಅಥವಾ ಮಕ್ಕಳನ್ನು ನೋಡಿಕೊಳ್ಳಲು ಅಸಕ್ತರಾಗಿದ್ದರೆ ಅಂತಹ ಮಕ್ಕಳ ಪಾಲನೆ ಮತ್ತು ಪೋಷಣೆ ಸಂಬಂಧ ಅಗತ್ಯ ಗಮನಹರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಈರಸ್ವಾಮಿ ಅವರು ವಿಶೇಷ ಪಾಲನೆ ಯೋಜನೆಯಡಿ ಕಳೆದ ಮೂರು ತಿಂಗಳಲ್ಲಿ 137 ಮಕ್ಕಳ ಪೋಷಕರಿಗೆ 8.16 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಪ್ರಾಯೋಜಕತ್ವ ಕಾರ್ಯಕ್ರಮದಲ್ಲಿ ವರ್ಷದೊಳಗೆ ಅನಾಥ ಹಾಗೂ ಏಕಪೋಷಕ ಮಕ್ಕಳಿಗೆ ಹಾಗೂ ಸಜಾ ಖೈದಿಗಳ ಮಕ್ಕಳಿಗೆ ಮಾಸಿಕ 4 ಸಾವಿರ ರೂ.ನಂತೆ ಫಲಾನುಭವಿಯ ಖಾತೆಗೆ ಅನುದಾನವನ್ನು ಡಿಬಿಟಿ ಮೂಲಕ ಜಮೆ ಮಾಡಲಾಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ 204 ಫಲಾನುಭವಿಗಳಿಗೆ 24.44 ಲಕ್ಷ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಈರಸ್ವಾಮಿ ಅವರು ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಾಯೋಜಕತ್ವ ಯೋಜನೆಯಡಿ 2024-25ನೇ ಸಾಲಿನಲ್ಲಿ ಒಟ್ಟು 144 ಫಲಾನುಭವಿ ಮಕ್ಕಳಿಗೆ ಮಾಹೆಯಾನ 4000 ರೂ.ಗಳಂತೆ ಒಟ್ಟು 33,08,000 ರೂ.ಗಳನ್ನು ಡಿಬಿಟಿ ಮೂಲಕ ಬಿಡುಗಡೆಗೊಳಿಸಲಾಗಿದೆ ಎಂದರು. ದತ್ತು ಕಾರ್ಯಕ್ರಮದಡಿ ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ 6 ಮಕ್ಕಳು ದಾಖಲಾಗಿದ್ದಾರೆ ಎಂದು ತಿಳಿಸಿದರು. ಉಪಕಾರ್ ಯೋಜನೆಯಡಿ ಬಾಲನ್ಯಾಯ ಕಾಯ್ದೆಯಡಿ ನೋಂದಣಿಗೊಂಡಿರುವ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಮಕ್ಕಳ ಕಲ್ಯಾಣ ಸಮಿತಿ ಮೂಲಕ ದಾಖಲಾಗಿರುವ ಮಕ್ಕಳು ಉಪಕಾರ್ ಯೋಜನೆಗೆ ಒಳಪಡಲಿದ್ದು, 18 ವರ್ಷ ಕಳೆದು ಮುಂದಿನ ಶಿಕ್ಷಣ ತರಬೇತಿಯ ಉದ್ದೇಶದಿಂದ ಸಂಸ್ಥೆಯಿಂದ ಬಿಡುಗಡೆಯಾಗುವ ಮಕ್ಕಳು ಈ ಯೋಜನೆಗೆ ಅರ್ಹರಿದ್ದು, ಕನಿಷ್ಠ ಮೂರು ವರ್ಷ ಮಕ್ಕಳು ಸಂಸ್ಥೆಯಲ್ಲಿ ಪೋಷಣೆ ಹಾಗೂ ರಕ್ಷಣೆ ಪಡೆದಿರಬೇಕು. ಆ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಲ್ಲಿ ಒಬ್ಬರಿಗೆ 15 ಸಾವಿರ ರೂ. ಭರಿಸಲಾಗಿದೆ ಎಂದು ಈರಸ್ವಾಮಿ ತಿಳಿಸಿದರು. ಮುಖ್ಯಮಂತ್ರಿ ಅವರ ಬಾಲಸೇವಾ ಯೋಜನೆಯಡಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪೋಷಕರಿಬ್ಬರನ್ನು ಕಳೆದುಕೊಂಡು ವಿಸ್ತøತ ಕುಟುಂಬದ ಸದಸ್ಯರ ಆರೈಕೆಯಲ್ಲಿರುವ 18 ವರ್ಷದೊಳಗಿನ ಮಕ್ಕಳಿಗೆ ರಕ್ಷಣೆ ನೀಡಿ ಆರೈಕೆ ಒದಗಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಸೌಕರ್ಯ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ತಿಳಿಸಿದರು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರ ಬಾಲಸೇವಾ ಯೋಜನೆಯಡಿ 18 ವರ್ಷದೊಳಗಿನ 18 ಮಕ್ಕಳಿಗೆ ಪ್ರತೀ ತಿಂಗಳು 3500 ರೂ. ಆರ್ಥಿಕ ಧನ ಸಹಾಯವನ್ನು ಮಗು ಅಥವಾ ಮಗುವಿನ ಕಾನೂನು ಬದ್ಧ ಪೋಷಕರ ಜಂಟಿ ಖಾತೆಗೆ ನೇರವಾಗಿ ಧನ ಸಹಾಯ ಮಂಜೂರು ಮಾಡಲಾಗುತ್ತಿದೆ ಎಂದು ಈರಸ್ವಾಮಿ ಅವರು ಮಾಹಿತಿ ನೀಡಿದರು. ಎಸ್‍ಎಸ್‍ಎಲ್‍ಸಿ ಪೂರೈಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗಾಗಿ ಲ್ಯಾಪ್‍ಟಾಪ್/ ಟ್ಯಾಬ್ ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಹೆಣ್ಣು ಮಕ್ಕಳಿಗೆ 21 ವರ್ಷದ ನಂತರ ವಿವಾಹ ಹಾಗೂ ಉನ್ನತ ಶಿಕ್ಷಣ, ಸ್ವಯಂ ಉದ್ಯೊಗ ಉದ್ದೇಶಕ್ಕೆ ತಲಾ 1 ಲಕ್ಷ ರೂ. ಆರ್ಥಿಕ ಸಹಾಯ ನೀಡುವ ಯೋಜನೆಯಿದ್ದು, ಈ ಯೋಜನೆಯಡಿ ಅರ್ಹರಾದ ಮಕ್ಕಳಿಗೆ ಆದ್ಯತೆ ಮೇಲೆ ಶೈಕ್ಷಣಿಕ, ಆರೋಗ್ಯ, ಮತ್ತಿತರ ಸೌಲಭ್ಯ ಒದಗಿಸಲಾಗುತ್ತದೆ. ಈ ಯೋಜನೆಯಡಿ ಇಬ್ಬರು ಮಕ್ಕಳಿಗೆ ಸೌಲಭ್ಯ ದೊರೆಯುತ್ತಿದೆ ಎಂದು ಈರಸ್ವಾಮಿ ತಿಳಿಸಿದರು. ಬಾಲ್ಯ ವಿವಾಹ ಸಂಬಂಧಿಸಿದಂತೆ ಮಾಹಿತಿ ನೀಡಿದ ಈರಸ್ವಾಮಿ ಅವರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಬಾಲ್ಯವಿವಾಹ ಸಂಬಂಧ 7 ದೂರುಗಳು ಸಲ್ಲಿಕೆಯಾಗಿದ್ದು, ಮೂರು ಬಾಲ್ಯವಿವಾಹವನ್ನು ತಡೆಯಲಾಗಿದೆ. 4 ಬಾಲ್ಯ ವಿವಾಹಗಳು ನಡೆದಿದ್ದು, ಈ 4 ಪ್ರಕರಣಗಳ ಸಂಬಂಧ ಕಾನೂನು ಉಲ್ಲಂಘಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಾಲಕಿಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ಈರಸ್ವಾಮಿ ತಿಳಿಸಿದರು. ಕಳೆದ ಮೂರು ತಿಂಗಳಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ 75 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 65 ಪ್ರಕರಣಗಳು ಇತ್ಯರ್ಥಗೊಂಡಿದ್ದು, 10 ಪ್ರಕರಣಗಳು ಬಾಕಿ ಇವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಿವರಿಸಿದರು. ಮಕ್ಕಳ ಸಹಾಯವಾಣಿಯಲ್ಲಿ ದಾಖಲಾದ ಪ್ರಕರಣಗಳ ವರ್ಗವಾರು ಗಮನಿಸಿದಾಗ ಒಟ್ಟು 65 ಪ್ರಕರಣಗಳಲ್ಲಿ ಬಾಲ್ಯ ವಿವಾಹ 5, ಪೋಕ್ಸೋ 3, ಮನೆ ಬಿಟ್ಟು ಹೋದ ಬಗ್ಗೆ 1, ರಕ್ಷಣೆ ಮತ್ತು ಪಾಲನೆಯಡಿ 7, ಬಾಲ ಕಾರ್ಮಿಕ ಪದ್ಧತಿಯಡಿ 7, ಮಾದಕ ವ್ಯಸನಕ್ಕೆ ಒಳಗಾದ ಮಕ್ಕಳು 4 ಎಂದು ಗುರುತಿಸಲಾಗಿದೆ ಎಂದರು ಮಕ್ಕಳ ಸಹಾಯವಾಣಿಯಲ್ಲಿ ದಾಖಲಾದ ಪ್ರಕರಣಗಳ ವರ್ಗಾವಾರು ವಿವರವನ್ನು ಗಮನಿಸಿದಾಗ ಶಾಲೆಗೆ ಗೈರು ಆದ ಮಕ್ಕಳ ಸಂಖ್ಯೆ 13, ಮಾನಸಿಕ ಹಿಂಸೆಗೆ ತುತ್ತಾದವರು 6, ದೈಹಿಕ ಹಿಂಸೆಗೆ ತುತ್ತಾದವರು 5, ಕೌಟುಂಬಿಕ ಕಲಹದ ಸಮಸ್ಯೆಗೆ ಒಳಗಾದ ಮಕ್ಕಳು 4, ಆಪ್ತ ಸಮಾಲೋಚನೆಗೆ ಬಂದವರು 3, ಆಶ್ರಯಕೋರಿ ಬಂದವರು 1, ಶಾಲಾ ಸಂಬಂಧಿ ಪ್ರಕರಣ 6 ಇದೆ ಎಂದು ಅವರು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿಯಲ್ಲಿ 45 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 35 ಪ್ರಕರಣ ಇತ್ಯರ್ಥಗೊಂಡಿದ್ದು, 7 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಕಳೆದ ಮೂರು ತಿಂಗಳಲ್ಲಿ 38 ಪ್ರಕರಣಗಳು ದಾಖಲಾಗಿದ್ದು, 5 ಪೋಕ್ಸೋ, 7 ಮನೆ ಬಿಟ್ಟು ಹೋದ ಪ್ರಕರಣ, 4 ನಿರ್ಲಕ್ಷ್ಯತೆ, 2 ರಕ್ಷಣೆ ಮತ್ತು ಪೋಷಣೆ, 2 ಮಕ್ಕಳು ಒಪ್ಪಿಸಲ್ಪಟ್ಟ ಮಕ್ಕಳು, ಪರಿತ್ಯಕ್ತ ಮಗು 1 ಎಂದು ವಿವರಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾದ ವರ್ಗಾವಾರು ಪ್ರಕರಣಗಳನ್ನು ಗಮನಿಸಿದಾಗ 4 ಮಕ್ಕಳು ಶಾಲೆಗೆ ಗೈರು ಆಗಿರುವುದು, 3 ಮಕ್ಕಳು ಮಾನಸಿಕ ಹಿಂಸೆಗೆ ತುತ್ತಾಗಿರುವುದು, 3 ಮಂದಿ ದೈಹಿಕ ಹಿಂಸೆಗೆ ತುತ್ತಾಗಿರುವುದು, 2 ಕುಟುಂಬ ಕಲಹ, 3 ಆಪ್ತ ಸಮಾಲೋಚನೆ, 2 ಬಾಲ್ಯ ವಿವಾಹ, ಕಳೆದ ಮೂರು ತಿಂಗಳಲ್ಲಿ ಬಾಲನ್ಯಾಯ ಮಂಡಳಿಯಲ್ಲಿ 42 ಪ್ರಕರಣಗಳು ದಾಖಲಾಗಿದ್ದು, 17 ಪ್ರಕರಣಗಳು ಇತ್ಯರ್ಥಗೊಂಡು 15 ಪ್ರಕರಣಗಳು ಬಾಕಿ ಇವೆ ಎಂದು ತಿಳಿಸಿದರು. ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ್ ಅವರು ಮಾತನಾಡಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಡಿ ವಿಶೇಷ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆ ಸೇರಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜು ಅವರು ಮಾತನಾಡಿದರು. ಜಿ.ಪಂ. ಉಪ ಕಾರ್ಯದರ್ಶಿ ಅಬ್ದುಲ್ ನಬಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಪಿ.ಕವಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿ.ಟಿ.ವಿಷ್ಮಯಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ, ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಶಿರಾಜ್ ಇತರರು ಇದ್ದರು.