ಮಡಿಕೇರಿ ಏ.25 NEWS DESK : ಅಖಿಲ ಭಾರತ ಸೈನಿಕ ಶಾಲೆಗಳ ಫುಟ್ಬಾಲ್ ಕ್ರೀಡಾಕೂಟದಲ್ಲಿ ಕೊಡಗು ಸೈನಿಕ ಶಾಲೆಯ ತಂಡ ಮೂರು ವಿಭಾಗಗಳಲ್ಲೂ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಕೊಡಗು ಸೈನಿಕ ಶಾಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಅಖಿಲ ಭಾರತ ಸೈನಿಕ ಶಾಲೆಗಳ ಪುಟ್ಬಾಲ್ ಕ್ರೀಡಾಕೂಟದಲ್ಲಿ ಕೇರಳದ ಕಝಕೊಟ್ಟಂ ಸೈನಿಕ ಶಾಲೆ, ತಮಿಳುನಾಡಿನ ಅಮರಾವತಿ ಸೈನಿಕ ಶಾಲೆ, ಆಂಧ್ರಪ್ರದೇಶದ ಕಲಿಕಿರಿ ಸೈನಿಕ ಶಾಲೆ ಹಾಗೂ ಅತಿಥೇಯ ಕೊಡಗು ಸೈನಿಕ ಶಾಲೆಗಳು ಭಾಗವಹಿಸಿದ್ದವು. ಬಾಲಕರ ಜೂನಿಯರ್, ಬಾಲಕರ ಸಬ್ ಜೂನಿಯರ್ ಹಾಗೂ ಬಾಲಕಿಯರ ಜೂನಿಯರ್ ಎಂಬ ಮೂರು ವಿಭಾಗಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಅತಿಥೇಯ ಸೈನಿಕ ಶಾಲೆ ಕೊಡಗು ತಂಡ ಎಲ್ಲಾ ಮೂರು ವಿಭಾಗಗಳಲ್ಲಿಯೂ ಪ್ರಥಮ ಸ್ಥಾನವನ್ನುಗಳಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಬಾಲಕರ ಜೂನಿಯರ್ ವಿಭಾಗದಲ್ಲಿ ಸೈನಿಕ ಶಾಲೆ ಕಝಕೊಟಂ, ಬಾಲಕರ ಸಬ್ ಜೂನಿಯರ್ ವಿಭಾಗದಲ್ಲಿ ಸೈನಿಕ ಶಾಲೆ ಕಲಿಕಿರಿ ಹಾಗೂ ಬಾಲಕಿಯರ ಜೂನಿಯರ್ ವಿಭಾಗದಲ್ಲಿ ಕಲಿಕಿರಿ ತಂಡವು ರನ್ನರ್ ಅಪ್ ತಂಡವಾಗಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
ವೈಯಕ್ತಿಕ ಬಹುಮಾನ :: ವೈಯಕ್ತಿಕ ವಿಭಾಗದಲ್ಲಿ ಅತ್ತುತ್ತಮ ಆಟಗಾರ ಪ್ರಶಸ್ತಿಯನ್ನು ಜೂನಿಯರ್ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗಿನ ಕೆಡೆಟ್ ರೋಹಿತ್ ರಾಜ್, ಸಬ್ ಜೂನಿಯರ್ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗಿನ ಕೆಡೆಟ್ ಶಿವೇಂದ್ರ, ಹಾಗೂ ಬಾಲಕಿಯರ ಜೂನಿಯರ್ ವಿಭಾಗದಲ್ಲಿ ಸೈನಿಕ ಶಾಲೆ ಕಲಿಕಿರಿಯ ಕೆಡೆಟ್ ಗೊಲ್ಲ ಮೋಕ್ಷಶ್ರೀ ಪಡೆದರು. ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಬಾಲಕರ ಜೂನಿಯರ್ ವಿಭಾಗದಿಂದ ಸೈನಿಕ ಶಾಲೆ ಕೊಡಗಿನ ಕೆಡೆಟ್ ಆರ್ಯ ಚಿರಾಗ್, ಬಾಲಕರ ಸಬ್ ಜೂನಿಯರ್ ವಿಭಾಗದಲ್ಲಿ ಸೈನಿಕ ಶಾಲೆ ಕೊಡಗಿನ ಕೆಡೆಟ್ ಶಮಂತ್ ಹಾಗೂ ಬಾಲಕಿಯ ಜೂನಿಯರ್ ವಿಭಾದಲ್ಲಿ ಸೈನಿಕ ಶಾಲೆ ಕಝೊಟ್ಟಂನ ಕೆಡೆಟ್ ಹರಿನಂದ ವಿ.ಎಸ್ ಪಡೆದರು. ಹಾಗೆಯೇ ಕ್ರೀಡಾಕೂಟದಲ್ಲಿ ಅಸಾಧಾರಣ ಸಾಧನೆಗೈದು ಕ್ರೀಡಾಕೂಟದ ಪಂದ್ಯಪುರುಷ ಪ್ರಶಸ್ತಿಯನ್ನು ಸೈನಿಕ ಶಾಲೆ ಕೊಡಗಿನ ಕೆಡೆಟ್ ಯಶ್ ಪ್ರತಾಪ್ ಪಡೆದರು.
ಸಮಾರೋಪ ಸಮಾರಂಭ :: ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ, ಕ್ರೀಡಾಕೂಟಗಳು ಕೇವಲ ಸ್ಪರ್ಧೆಯ ವೇದಿಕೆಗಳು ಮಾತ್ರವಲ್ಲ, ಪ್ರತಿಯೊಬ್ಬ ಸ್ಪರ್ಧಾಳುವಿನ ಪ್ರತಿಭೆಯ ಅನಾವರಣ, ಕಲಿಕೆ, ಬಾಂಧವ್ಯ ಹಾಗೂ ವಿಚಾರಗಳ ವಿನಿಮಯಗಳ ಸಮಾಗಮಕ್ಕೆ ಅವಕಾಶ ನೀಡುತ್ತವೆ. ಈ ಅಂಶಗಳು ಕ್ರೀಡಾಂಗಣದಿಂದಾಚೆಯೂ ಸಹ ಮುಂದುವರೆಯುವ ಬಾಂಧವ್ಯಗಳಾಗಿರುತ್ತವೆ. ಭಾಗವಹಿಸಿದ ಕ್ರೀಡಾಪಟುಗಳು ಇಲ್ಲಿ ಕಲಿತ ಅನುಭವ ಮತ್ತು ಮೌಲ್ಯಗಳನ್ನು ತಮ್ಮ ಭವಿಷ್ಯದ ಜೀವನ ಯಾತ್ರೆಯಲ್ಲಿ ಅನ್ವಯಿಸಿಕೊಂಡು, ಉಜ್ವಲ ಬದುಕಿಗೆ ಸಾಕಾರವಾಗಲಿ ಎಂದು ಹಾರೈಸಿದರು. ಇತಿಹಾಸದಲ್ಲಿ ಮೊದಲ ಬಾರಿಗೆ ಕೊಡಗಿನ ಸೈನಿಕ ಶಾಲೆಯು ನಿಗದಿಪಡಿಸಿದ್ದ ಎಲ್ಲಾ ಮೂರು ವಿಭಾಗಗಳಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವುದು ಪ್ರಶಂಸನೀಯ ಎಂದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಪ್ರಥಮ ಮಹಿಳೆ ದಿವ್ಯಾ ಸಿಂಗ್, ಶಾಲಾ ವೈದ್ಯಾಧಿಕಾರಿ ಡಾ.ಚಿನ್ಮಯಿ ಹಾಗೂ ಹಿರಿಯ ಶಿಕ್ಷಕರಾದ ವಿಬಿನ್ ಕುಮಾರ್, ವಿವಿಧ ತಂಡಗಳ ಮೇಲ್ವಿಚಾರಕರು, ಶಾಲೆಯ ಬೋಧಕ-ಬೋಧಕೇತರ ವರ್ಗದವರು, ದೈಹಿಕ ಶಿಕ್ಷಕರು, ಎನ್ ಸಿ ಸಿ ಸಿಬ್ಬಂದಿವರ್ಗ ಹಾಗೂ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು. ಸ್ಪರ್ಧಾಳುಗಳು ಸಮಾರೋಪ ಸಮಾರಂಭದ ಪಥಸಂಚಲನವನ್ನು ನಡೆಸಿಕೊಟ್ಟರು. ನಂತರ ಶಾಲಾ ವಿದ್ಯಾರ್ಥಿ ನಾಯಕ ಕೆಡೆಟ್ ಹೃದಯ್ ಶಾಲೆಯ ಪ್ರಾಂಶುಪಾಲರಿಗೆ ಸೈನಿಕ ಶಾಲಾ ಸೊಸೈಟಿಯ ಧ್ವಜವನ್ನು ಹಸ್ತಾಂತರಿಸುವುದರ ಮೂಲಕ ಕ್ರೀಡಾಕೂಟವು ಸಂಪನ್ನಗೊಂಡಿತು.












