ಮಡಿಕೇರಿ ಮೇ 20 NEWS DESK : ಕಾರ್ಪೋರೇಟ್ ಸಂಸ್ಥೆಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕಾರ್ಮಿಕ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಿ.ಆರ್.ಭರತ್ ಮಾತನಾಡಿ, ಕೆಲಸದ ದೇಶದಲ್ಲಿ ಸುಮಾರು 50 ಕೋಟಿಯಷ್ಟು ದುಡಿಯುವ ವರ್ಗವಿದೆ. ಕಾರ್ಮಿಕರ ಹೋರಾಟದ ಫಲವಾಗಿ ಕೆಲಸದ ಸಮಯ 8 ಗಂಟೆ ಎಂದು ನಿಗದಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು 12 ಗಂಟೆ ದುಡಿಯಬೇಕು ಎಂದು ಹೇಳುತ್ತಿದೆ. ಇದು ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುವ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳ ಲಾಭಕ್ಕಾಗಿ ವೇತನ ಸಂಹಿತೆಯಲ್ಲಿ 4 ಕಾನೂನು, ಕೈಗಾರಿಕಾ ಬಾಂಧವ್ಯ ಸಂಹಿತೆಯಲ್ಲಿ 3 ಕಾನೂನು, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯಲ್ಲಿ 13 ಕಾನೂನು ಮತ್ತು ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ 9 ಕಾನೂನು ಸೇರಿದಂತೆ ಒಟ್ಟು 29 ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪಿಸಲಾಗಿದೆ. ಇವುಗಳು ಕಾರ್ಮಿಕ ವಿರೋಧಿ ನಿಯಮಗಳಾಗಿವೆ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಕುಟ್ಟಪ್ಪ, ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು, ಆಸ್ಪತ್ರೆ ನೌಕರರ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.
ಮನವಿ ಸಲ್ಲಿಕೆ- ಪ್ರತಿಭಟನೆಯ ಬಳಿಕ ಜಿಲ್ಲಾಡಳಿತಕ್ಕೆ ಮನವಿಯನನ್ನು ಸಲ್ಲಿಸಲಾಯಿತು, ಇದರಲ್ಲಿ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದು ಪಡಿಸಬೇಕು, ಪ್ರಸ್ತುತ ಸ್ಥಿತಿಗೆ ಅನುಗುಣವಾಗಿ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು ಮತ್ತು ಸ್ಕೀಂ ನೌಕರರಿಗೆ ರಾಷ್ಟ್ರವ್ಯಾಪಿ ಅನ್ವಯವಾಗುವಂತೆ 26 ಸಾವಿರ ರೂ. ಹಾಗೂ ರಾಜ್ಯವ್ಯಾಪಿ 36 ಸಾವಿರ ರೂ. ಕನಿಷ್ಟ ವೇತನ ನಿಗದಿಪಡಿಸಬೇಕು. ಕೃಷಿ, ತೋಟ ಸೇರಿದಂತೆ ಎಲ್ಲಾ ವಿಭಾಗದ ಕಾರ್ಮಿಕರಿಗೆ ಕನಿಷ್ಟ ಮಾಸಿಕ 9 ಸಾವಿರ ರೂ. ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸಬೇಕು, ಎನ್‍ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನೆ ಮರು ಸ್ಥಾಪಿಸಬೇಕು, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಆಹಾರ, ಔಷಧಿಗಳು, ಕೃಷಿ ಸಾಮಗ್ರಿ ಮುಂತಾದ ಅಗತ್ಯ ವಸ್ತುಗಳ ಮೇಲಿನ ಜಿಎಸ್‍ಟಿ ತೆಗೆಯಬೇಕು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಇಳಿಸಬೇಕು, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ ಆಹಾರ ಭದ್ರತೆಯನ್ನು ಖಾತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗಿದೆ.











