ನಾಪೋಕ್ಲು ಮೇ 27 NEWS DESK : ನಾಪೋಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯ ಆರ್ಭಟ ಕಳೆದ ಮೂರು ದಿನಗಳಿಂದ ಮುಂದುವರೆದಿದ್ದು, ಅಲ್ಲಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿ ಒಂದು ಕಡೆಯಾದರೆ ಕೆಲವು ಕಡೆ ಮನೆ ಹಾಗೂ ತಡೆ ಗೋಡೆಗಳಿಗೆ ಹಾನಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲ್ಲು ಮೊಟ್ಟೆಯಲ್ಲಿ ಮಳೆ ಗಾಳಿಯಿಂದಾಗಿ ಮನೆಯ ತಡೆಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಕಲ್ಲು ಮೊಟ್ಟೆನಿವಾಸಿ ಕೆ.ಕೆ.ಪುಷ್ಪ ಎಂಬವರ ನೂತನ ಮನೆಯ ತಡೆಗೋಡೆ ಅಧಿಕ ಮಳೆ ಗಾಳಿಯಿಂದ ಸಂಪೂರ್ಣ ದಾರಶಾಹಿಯಾಗಿದೆ. ಎಮ್ಮೆಮಾಡು ಕೂರುಳಿ ಗ್ರಾಮಕ್ಕೆ ತೆರಳುವ ಸುಭಾಷ್ ನಗರ ಪೈಸಾರಿ ಬಳಿಯ ರಸ್ತೆಗೆ ಮರ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ತೊಡಕುಂಟಾಗಿತ್ತು. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ನಾಪೋಕ್ಲುವಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಬೇತು ರಸ್ತೆಯಲ್ಲಿರುವ ಹಂಸ ಎಂಬವರ ಹಳೇ ಕಟ್ಟಡದ ಮೇಲ್ಚಾವಣಿ ಕುಸಿತವಾಗಿದೆ. ನಾಪೋಕ್ಲು-ಕೈಕಾಡು-ಪಾರಾಣೆ ಮಾರ್ಗವಾಗಿ ವಿರಾಜಪೇಟೆಗೆ ತೆರಳುವ ಮುಖ್ಯ ರಸ್ತೆಗೆ ಮರ ಬುಡ ಸಮೇತ ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಪಾರಾಣೆಯಿಂದ ಬೆಳ್ಳುಮಾಡು ತೆರಳುವ ಮುಖ್ಯ ರಸ್ತೆಯ ವಲ್ಲಂಡ ಕೊಟ್ಟ್ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾಗಿತ್ತು. ಬಳಿಕ ಸಾರ್ವಜನಿಕರು ಹಾಗೂ ಜೆಸಿಪಿ ಯಂತ್ರದ ಮೂಲಕ ತೆರವುಗೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಕರಡ ಗ್ರಾಮದ ನಿವಾಸಿಯಾಗಿರುವ ಸುಮಿತ್ರಾ ಅವರ ವಾಸದ ಮನೆಯ ಚಾವನಿಗೆ ಅಳವಡಿಸಲಾಗಿದ್ದ ಸಿಮೆಂಟ್ ಶೀಟ್ ಗಾಳಿ ಮಳೆಗೆ ಹಾರಿ ಹೋಗಿದ್ದು, ನಷ್ಟ ಸಂಭವಿಸಿದೆ. ಇದೇ ಗ್ರಾಮದ ದೇವಯ್ಯ ಎಂಬವರ ವಾಸದ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು, ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಕೊಳಕೇರಿ ಗ್ರಾಮದ ಬೀರಾನ್ ಎಂಬುವವರ ಮನೆ ಮೇಲೆ ಬಾರೀ ಗಾತ್ರದ ಮರ ಬಿದ್ದು ಮನೆಯ ಆರ್‍ಸಿಸಿ ಹಾನಿಯಾಗಿ ನಷ್ಟವಾಗಿದೆ. ಈ ವರ್ಷ ಬೇಗನೆ ಪ್ರಾರಂಭಗೊಂಡ ಮುಂಗಾರು ಬಿರುಸಿನ ಮಳೆ ಗಾಳಿ ಯಿಂದಾಗಿ ಜನರು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣದಿಂದಾಗಿ ವಿದ್ಯುತ್ ಪೂರೈಕೆ ಇಲ್ಲದೆ ಹಲವು ಕಡೆ ಕತ್ತಲಲ್ಲಿ ದಿನ ಕಳೆಯುವಂತಾಗಿದೆ. ಸರಿಪಡಿಸುವಲ್ಲಿ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ವರದಿ : ದುಗ್ಗಳ ಸದಾನಂದ.











