




ಮಡಿಕೇರಿ ಮೇ 30 NEWS DESK : ವನ್ಯಜೀವಿಗಳ ಉಪಟಳ ತಡೆಗೆಂದು ಸರ್ಕಾರ ಬಿಡುಗಡೆ ಮಾಡುತ್ತಿರುವ ಕೋಟ್ಯಾಂತರ ರೂ. ಅನುದಾನವನ್ನು ಅಧಿಕಾರಿಗಳು ಸಮರ್ಪಕವಾಗಿ ಬಳಸದೆ ಇರುವುದೇ ಸಮಸ್ಯೆ ಉಲ್ಬಣಿಸಲು ಕಾರಣವೆಂದು ಕೊಡಗು ಜಿಲ್ಲಾ ಭೂ ಮಾಲೀಕರು ಹಾಗೂ ಮರ ವ್ಯಾಪಾರಿಗಳ ಸಂಘ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಅವರು ಅರಣ್ಯ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ ಎಂದು ಆರೋಪಿಸಿದರು. ಕಳೆದೊಂದು ದಶಕದ ಅವಧಿಯಲ್ಲಿ ಆನೆ ಕಂದಕ, ಸೋಲಾರ್ ತಂತಿ ಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ, ಕೆರೆ ನಿರ್ಮಾಣ, ಕೆರೆ ಹೂಳೆತ್ತುವುದು, ಸಸ್ಯ ಕ್ಷೇತ್ರಗಳ ನಿರ್ಮಾಣ ಮತ್ತು ಸಸಿ ನೆಡುವ ವಿವಿಧ ಯೋಜನೆಗಳಿಗೆ ಕೋಟ್ಯಾಂತರ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ, ಆದರೆ ಇದು ಸಮರ್ಪಕವಾಗಿ ಬಳಕೆಯಾಗಿಲ್ಲ. ಯಾವುದೇ ಹಣ್ಣು ಹಂಪಲಿನ ಗಿಡ ಮರಗಳನ್ನು ಬೆಳೆಸುವ ಪ್ರಯತ್ನ ಮಾಡಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸ್ವಂತ ಜಾಗದಲ್ಲಿ ಬೆಳೆದಿರುವ ಮರಗಳಲ್ಲಿ ಕೆಲವನ್ನು ಸ್ವಂತ ಬಳಕೆಗೆ(ಬೋನಫೈಡ್) ಕಡಿಯಲು ಅನುಮತಿ ಕೋರಿ ಬೆಳೆಗಾರರು ಅರಣ್ಯ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇಂತಹ ಹಲವಷ್ಟು ಅರ್ಜಿಗಳು ಕಳೆದ 3 ವರ್ಷಗಳಿಂದ ವಿಲೇವಾರಿಯಾಗದೆ ಇಲಾಖೆಯಲ್ಲಿ ಕೊಳೆಯುತ್ತಿರುವುದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ಸಾರ್ವಜನಿಕರ ಭೇಟಿಗಾಗಿ ಮಧ್ಯಾಹ್ನ 3 ಗಂಟೆಯ ಬಳಿಕ ಸಮಯವನ್ನು ನೀಡಲಾಗುತ್ತಿದೆ. ಆದರೆ, ಜಿಲ್ಲೆಯ ವಿವಿಧೆಡೆಗಳಿಂದ ತಮ್ಮ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗಾಗಿ ಆಗಮಿಸುವವರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇಲಾಖಾ ಕೆಲಸ ಕಾರ್ಯಗಳಿಗೆ ಬೆಳಗ್ಗಿನಿಂದ ಸಂಜೆಯವರೆಗೆ ಅವಕಾಶವನ್ನು ಕಲ್ಪಿಸಬೇಕು. ಅರಣ್ಯ ಕಚೇರಿಗಳಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂದು ಅರವಿಂದ್ ಕುಟ್ಟಪ್ಪ ಆಗ್ರಹಿಸಿದರು. ಮುಂಗಾರಿನ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕ ತೂಕದ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ. ಆದರೆ, ರಾತ್ರಿ 12 ಗಂಟೆಯ ಬಳಿಕ ಜಿಲ್ಲೆಯ ಚೆಕ್ ಪೋಸ್ಟ್ಗಳ ಮೂಲಕ ಅಧಿಕ ತೂಕದ ಲಾರಿಗಳ ಸಂಚಾರ ನಿರಾತಂಕವಾಗಿ ಮುಂದುವರೆದಿದೆ ಎಂದು ಗಮನ ಸೆಳೆದರು. ಬೆಳೆಗಾರರು ನೀಡುವ ಮರಗಳ ಸಾಗಾಟಕ್ಕೆ 365 ದಿವಸಗಳ ಕಾಲ ಜಿಲ್ಲೆಯಲ್ಲಿ ಅವಕಾಶ ಒದಗಿಸಬೇಕೆಂದು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಕೆ.ಎ.ಆದಂ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸಿಸಿಎಫ್ ಹುದ್ದೆ ಖಾಲಿ ಇದೆ. ಇಲ್ಲಿಗೆ ನಿಯುಕ್ತಿಗೊಳಿಸುವ ಹೊರ ಜಿಲ್ಲೆಯ ಅಧಿಕಾರಿ ತಿಂಗಳಿಗೊಮ್ಮೆ ಮಾತ್ರ ಬಂದು ತೆರಳುತ್ತಾರೆ. ಇದರಿಂದ ಅರಣ್ಯ ಇಲಾಖಾ ಡಿಪೋಗಳಿಗೆ ಮರಗಳನ್ನು ಹಾಕಿರುವ ಬೆಳೆಗಾರರಿಗೆ ಮರ ಹರಾಜಾದರು ಎನ್ಒಸಿ ದೊರೆಯದೆ, ಹಣಪಾವತಿಯಾಗದೆ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎ.ಮನೋರಂಜನ್, ಕಾನೂನು ವಿಭಾಗದ ವಕ್ತಾರ ಸಿ.ಬಿ.ಪೂವಣ್ಣ, ಸಾಮಾಜಿಕ ಜಾಲತಾಣದ ವಕ್ತಾರ ಕೆ.ಕೆ.ಹಂಸ ಹಾಗೂ ಸದಸ್ಯ ಸಿ.ಎಂ.ಯಾಹ್ಯಾ ಉಪಸ್ಥಿತರಿದ್ದರು.









