ಮಡಿಕೇರಿ ಮೇ 30 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ ವತಿಯಿಂದ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಬೇಸಿಗೆ ಶಿಬಿರದ ಶಿಬಿರಾರ್ಥಿಗಳ ಏಕಾಗ್ರತೆ ಉತ್ತಮವಾಗಿದ್ದು, ತಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಇದನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. ಪದ್ಮಶ್ರೀ ಪುರಸ್ಕøತರಾದ ರಾಣಿ ಮಾಚಯ್ಯ ಮಾತನಾಡಿ, ಮಕ್ಕಳು ವೇದಿಕೆಯನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಆಸಕ್ತಿಯನ್ನು ಅನುಪಾಲನೆ ಮಾಡುವಂತೆ ಸಲಹೆ ನೀಡಿದರು. ನಗರ ಪ್ರಾಧಿಕಾರ ಯೋಜನೆಯ ಸದಸ್ಯರಾದ ಮಿನಾಜ್ ಪ್ರವೀಣ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭಾ ಪ್ರದರ್ಶನಕ್ಕೆ ಬೇಸಿಗೆ ಶಿಬಿರ ಉತ್ತಮ ವೇದಿಕೆಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿದೇಶಕ ತಿಪ್ಪಣ್ಣ ಸಿರಸಗಿ, ಬೇಸಿಗೆ ಶಿಬಿರದಲ್ಲಿ ಮಕ್ಕಳು ಉತ್ತಮವಾಗಿ ಭಾಗವಹಿಸಿ ಶಿಬಿರದಲ್ಲಿ ಹೇಳಿಕೊಟ್ಟಂತಹ ಎಲ್ಲಾ ಚಟುವಟಿಕೆಗಳಲ್ಲಿ ಉತ್ಸುಕರಾಗಿ ಪಾಲ್ಗೊಂಡು ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು. ಜಿಲ್ಲಾ ಬಾಲಭವನದ ವತಿಯಿಂದ ಹಮ್ಮಿಕೊಂಡ ಶಿಬಿರದಲ್ಲಿ ಬಾಲಕರ ಬಾಲಮಂದಿರ, ಬಾಲಕಿಯರ ಬಾಲಮಂದಿರ, ಬಾಲಭವನ ಮತ್ತು ಇತರೆ ಮಡಿಕೇರಿ ನಗರದ ಮಕ್ಕಳು ಪಾಲ್ಗೊಂಡು ಉತ್ತಮವಾಗಿ ತರಬೇತಿ ಪಡೆದಿರುತ್ತಾರೆ. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳ ಮತ್ತು ಬಾಲಭವನದ ಸಿಬ್ಬಂದಿಗಳ ಪರಿಶ್ರಮದ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು. ಶಿಬಿರದಲ್ಲಿ ಮಕ್ಕಳು 15 ದಿನದಲ್ಲಿ ಕಲಿತ ಎಲ್ಲಾ ಚಟುವಟಿಕೆಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಯೋಗ ಶಿಕ್ಷಕರಾದ ಆಲಿಮ ಮತ್ತು ಸುಗಮ ಸಂಗೀತಕ್ಕೆ ಅರ್ಪಿತ ಅವರು ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಕಾರ್ಯಕ್ರಮ ಸಂಯೋಜಕರಾದ ಹರೀಶ್, ನೀತು, ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾ ಬಾಲಭವನ ಸಹಾಯಕರಾದ ಪೂಜಾ ಅವರು ಸ್ವಾಗತಿಸಿ, ನಿರೂಪಿಸಿದರು.











