ಮಡಿಕೇರಿ ಜೂ.6 NEWS DESK : ಸ್ನಾತಕೋತ್ತರ ಎಂಬಿಎ, ಎಂಸಿಎ ಪ್ರವೇಶ ಪರೀಕ್ಷೆಗಳಿಗೆ ಪೂರ್ವಭಾವಿಯಾಗಿ, ಆಸಕ್ತ ವಿದ್ಯಾರ್ಥಿಗಳಿಗಾಗಿ ಮೈಸೂರಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ(ಎಂಐಟಿ)ದ ಕ್ಯಾಂಪಸ್‍ನಲ್ಲಿ ಮೂರು ದಿನಗಳ ತರಬೇತಿ ಮತ್ತು ಮಾಕ್ ಟೆಸ್ಟ್ ಆಯೋಜಿಸಲಾಗಿದೆಯೆಂದು ಎಂಐಟಿಯ ಎಂಸಿಯ ವಿಭಾಗದ ಹೆಚ್‍ಒಡಿ ಪ್ರೊ.ಮಂಜುನಾಥ್ ಬಿ. ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜೂ.9 ರಿಂದ 11 ರ ವರೆಗೆ ಎಂಸಿಎ ವಿದ್ಯಾರ್ಥಿಗಳಿಗೆ ಹಾಗೂ ಜೂ.16 ಮತ್ತು 17 ರಂದು ಎಂಬಿಎ ವಿದ್ಯಾರ್ಥಿಗಳಿಗೆ ಮೈಸೂರಿನ ಎಂಐಟಿ ಕ್ಯಾಂಪಸ್ಸಿನಲ್ಲಿ ಉಚಿತ ಪಿಜಿ ಪ್ರವೇಶ ಪರೀಕ್ಷೆ ತರಬೇತಿ ಮತ್ತು ಮಾಕ್ ಟೆಸ್ಟ್ ನಡೆಸಲಾಗುತ್ತದೆಂದು ವಿವರಗಳನ್ನಿತ್ತರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಇದೇ ಜೂ.22 ರಂದು ಎಂಬಿಎ ಮತ್ತು ಎಂಸಿಗೆ ಪ್ರವೇಶ ಪರೀಕ್ಷೆಗಳು ನಡೆಯಲಿದೆ. ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸುವ ಬಿಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯೆಂದರು. ಮೂರು ದಿನಗಳ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ವಾಸ್ತವ್ಯ, ಊಟೋಪಚಾರಗಳ ವ್ಯವಸ್ಥೆಯನ್ನು ಸಂಸ್ಥೆ ಮಾಡಿಕೊಡಲಿದೆ. ಈ ಬಾರಿ 100 ರಿಂದ 150 ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ತಿಳಿಸಿದರು. ಆನ್‍ಲೈನ್ ಮಾಕ್ ಟೆಸ್ಟ್- ಕೊಡಗಿನ ಫೀ.ಮಾ.ಕಾರ್ಯಪ್ಪ ಕಾಲೇಜು ಮತ್ತು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಪರೀಕ್ಷೆಗಳು ಎದುರಾಗುತ್ತಿದೆ. ಇದರಿಂದ ಆ ವಿದ್ಯಾರ್ಥಿಗಳಿಗೆ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದನ್ನು ಮನಗಂಡು, ಆ ಕಾಲೇಜುಗಳ ಆಸಕ್ತ ವಿದ್ಯಾರ್ಥಿಗಳಿಗೆ ಜೂ.21 ರಂದು ಆನ್ ಲೈನ್ ಮೂಲಕ ಮಾಕ್ ಟೆಸ್ಟ್ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆಯೆಂದು ಪ್ರೊ.ಮಂಜುನಾಥ್ ತಿಳಿಸಿದರು. ತರಬೇತಿಯ ಕುರಿತಾದ ಹೆಚ್ಚಿನ ಮಾಹಿತಿಗಳಿಗಾಗಿ ಮೊ.9620228022, 9620228107, 9620228199ನ್ನು ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಎಂಐಟಿ ಮೈಸೂರಿನ ಎಂಸಿಎ ಅಸಿಸ್ಟೆಂಟ್ ಪ್ರೊಫೆಸರ್ ಕಾಂಚನ ಕಾವೇರಿ, ಎಂಬಿಎ ವಿಭಾಗದ ಡಾ.ರಾಜು ಹಾಗೂ ಡಾ.ಇಂಪ ಬೆಳ್ಳಿಯಪ್ಪ ಉಪಸ್ಥಿತರಿದ್ದರು.











