ಮಡಿಕೇರಿ ಜೂ.6 NEWS DESK : ಆರ್‌ಸಿಬಿ ವಿಜಯೋತ್ಸವದ ಸಂದರ್ಭ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಭೀಕರ ದುರಂತದ ಹೊಣೆ ಹೊತ್ತು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು, ಕರ್ನಾಟಕದ ಜನತೆ ಕನ್ನಡ ಭಾಷೆ, ಕನ್ನಡಿಗರ ಸಾಧನೆಗಳತ್ತ ಯಾವತ್ತೂ ಅಭಿಮಾನವನ್ನು ತೋರುತ್ತಲೆ ಬಂದಿದ್ದಾರೆ. ಅದೇ ರೀತಿ ಆರ್‍ಸಿಬಿ ಗೆಲುವಿನ ಸಂಭ್ರಮವನ್ನು ಬೆಂಗಳೂರಿನಲ್ಲಿ ಆಚರಿಸಲು ಉತ್ಸುಕರಾಗಿದ್ದರು. ಈ ಬಗ್ಗೆ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಇರುವುದೇ ದುರಂತಕ್ಕೆ ಕಾರಣವೆಂದು ಆರೋಪಿಸಿದರು. ಐಪಿಎಲ್‍ನಲ್ಲಿ ಗೆಲುವು ಸಾಧಿಸಿದ ಆರ್‍ಸಿಬಿಯನ್ನು ಅಭಿನಂದಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ, ಇಂತಹ ಅಭಿನಂದನಾ ಕಾರ್ಯಕ್ರಮಗಳು ಅತ್ಯಂತ ವ್ಯವಸ್ಥಿತವಾಗಿರಬೇಕು. ಇಲ್ಲಿ ಕಾರ್ಯಕ್ರಮವನ್ನು ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ ಹುಡುಗಾಡಿಕೆಯಂತೆ ನಡೆಸಿ ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡಿರುವುದು ನಿಜಕ್ಕೂ ದುರದೃಷ್ಟಕರವೆಂದು ಬೇಸರ ವ್ಯಕ್ತಪಡಿಸಿದರು. ನೊಂದವರ ಪರ ಬೆಜೆಪಿ ಮಾತನಾಡಿದರೆ ಕಾಂಗ್ರೆಸ್ ಮಂದಿ, ‘ಬಿಜೆಪಿ ಹೆಣದ ಮೇಲೆ ರಾಜಕೀಯ’ ಮಾಡುತ್ತದೆ ಎಂದು ಟೀಕಿಸುತ್ತಾರೆ. ಪೂರ್ವತಯಾರಿ ಇಲ್ಲದೆ ಆಯೋಜಿಸಿದ ಕಾರ್ಯಕ್ರಮದಿಂದ ಅಮಾಯಕರ ಪ್ರಾಣ ಹೋಗಿದೆ ಎಂಬ ದು:ಖ ಕಾಂಗ್ರೆಸ್ಸಿಗರಿಗೆ ಇಲ್ಲವೇ ಎಂದು ಪ್ರಶ್ನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರ ಗಡೀಪಾರಿನ ನಿರ್ಣಯ ಕೈಗೊಳ್ಳುತ್ತದೆ. ಇದೇ ನಿರ್ಣಯವನ್ನು ಸುಭಾಷ್ ಶೆಟ್ಟಿ ಹತ್ಯೆಯ ಸಂದರ್ಭ ಯಾಕೆ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ನಾಪಂಡ ರವಿ ಕಾಳಪ್ಪ, ಒಂದು ಕೋಮನ್ನು ಮೆಚ್ಚಿಸುವ ಕಾರ್ಯದಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿಂದು ಅರಾಜಕತೆ ನಡೆಯುತ್ತಿದೆ ಎಂದು ಟೀಕಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಅಗತ್ಯ ಪೂರ್ವ ಸಿದ್ಧತೆಗಳಿಲ್ಲದೆ ಕಾರ್ಯಕ್ರಮ ನಡೆಸುವುದು ಬೇಡವೆಂದು ಪೊಲೀಸ್ ಇಲಾಖೆ ತಿಳಿಸಿದ್ದರು ಅಭಿನಂದನಾ ಕಾರ್ಯಕ್ರಮಕ್ಕೆ ಮುಂದಾಗಿರುವುದು ಕೇವಲ ರಾಜಕೀಯ ಲಾಭ ಪಡೆಯುವ ಪ್ರಯತ್ನವಾಗಿದೆಯಷ್ಟೆ ಎಂದು ಆರೋಪಿಸಿದರು. ದುರ್ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಡಿಸಿಎಂ ಹಾಗೂ ಗೃಹ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಜಿಲ್ಲಾ ವಕ್ತಾರರಾದ ತಳೂರು ಕಿಶೋರ್ ಕುಮಾರ್, ಬಿ.ಕೆ.ಅರುಣ್ ಕುಮಾರ್ ಹಾಗೂ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.











