ಮಡಿಕೇರಿ ಜೂ.6 NEWS DESK : ಪರಿಸರ ದಿನವು ನಮ್ಮ ಪರಿಸರ ಕಾಳಜಿಗಳನ್ನು ಮರು ವಿಮರ್ಶೆಗೆ ಒಡ್ಡಿಕೊಳ್ಳುವ ದಿನ. ಎಲ್ಲೆಲ್ಲೂ ಗಿಡ ನೆಟ್ಟು ಬೆಳೆಸುವ ಹಸಿರು ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನವು ಗಿಡ ನೆಡುವುದು, ಗಿಡ ವಿತರಣೆ, ಪರಿಸರ ಜಾಥಾ, ವಿವಿಧ ಸ್ಪರ್ಧೆಗಳು, ಘೋಷವಾಕ್ಯ ಬರವಣಿಗೆ ಮತ್ತು ಸಭಾ ಕಾರ್ಯಕ್ರಮಗಳಿಗೆ ಸೀಮಿತವಾಗಿರಬಾರದು. ಪರಿಸರ ಕಾರ್ಯಕ್ರಮ ವಿಶ್ವ ಪರಿಸರ ದಿನದ ಈ ವರ್ಷದ ಘೋಷವಾಕ್ಯ(ಥೀಮ್)ವು ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ ‘ (ಬೀಟ್ ದಿ ಪ್ಲಾಸ್ಟಿಕ್ ) ಅದನ್ನು ಕೊನೆಗಾಣಿಸುವತ್ತ ಗಮನಹರಿಸುತ್ತದೆ. ಈ ಬಾರಿ ಕೋರಿಯಾ ಗಣರಾಜ್ಯವು ವಿಶ್ವ ಪರಿಸರ ದಿನದ ಜಾಗತಿಕ ಆಚರಣೆಯ ಆತಿಥ್ಯವನ್ನು ವಹಿಸಿಕೊಂಡಿದೆ. ಈ ವರ್ಷವಿಡೀ ಪ್ಲಾಸ್ಟಿಕ್ ಮಾಲಿನ್ಯದಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಹೆಚ್ಚು ಬೆಳಕು ಚೆಲ್ಲುವ ಮೂಲಕ ನಾವು ಪಾಸ್ಟಿಕ್ ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳ ಬಗ್ಗೆ ಹೆಚ್ಚಿನ ಗಮನಹರಿಸುವ ಕೆಲ¸ವಾಗಬೇಕಿದೆ. ಪರಿಸರ ದಿನವು ನಮ್ಮ ಪರಿಸರ ಕಾಳಜಿಗಳನ್ನು ಮರು ವಿಮರ್ಶೆಗೆ ಒಡ್ಡಿಕೊಳ್ಳುವ ದಿನ. ಎಲ್ಲೆಲ್ಲೂ ಗಿಡ ನೆಟ್ಟು ಬೆಳೆಸುವ ಹಸಿರು ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನವು ಗಿಡ ನೆಡುವುದು, ಗಿಡ ವಿತರಣೆ, ಪರಿಸರ ಜಾಥಾ, ವಿವಿಧ ಸ್ಪರ್ಧೆಗಳು, ಘೋಷವಾಕ್ಯ ಬರವಣಿಗೆ ಮತ್ತು ಸಭಾ ಕಾರ್ಯಕ್ರಮಗಳಿಗೆ ಸೀಮಿತವಾಗಿರಬಾರದು. ಪರಿಸರ ಕಾರ್ಯಕ್ರಮ ಈ ದಿನವು ಪರಿಸರ ಸಂರಕ್ಷಣೆಯ ಜಾಗತಿಕ ಜಾಗೃತಿ ದಿನವಾಗಿದೆ. ಪ್ರತಿವರ್ಷ ಜೂನ್ 5 ರಂದು ವಿಶ್ವಸಂಸ್ಥೆ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಕಾರ್ಯಕ್ರಮದ ಮುಖಾಂತರ ಜಗತ್ತಿನಾದ್ಯಂತ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಲು ಸಾಂಕೇತಿಕವಾಗಿ ಜೂನ್ 5 ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಪ್ರತಿವರ್ಷ ವಿಶ್ವದಾದ್ಯಂತ ವಿಶ್ವ ಪರಿಸರ ದಿನಾಚರಣೆ ಸೇರಿದಂತೆ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಹಾಗೂ ಅಪಾಯದ ಅಂಚಿನಲ್ಲಿರುವ ಪರಿಸರಾತ್ಮಕ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನ ಸೇರಿದಂತೆ ಎಲ್ಲಾ ಪರಿಸರ ಸಂಬಂಧಿ ದಿನಾಚರಣೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ನೆಲ-ಜಲ, ಮಣ್ಣು, ಅರಣ್ಯ-ವನ್ಯಜೀವಿ ಸಂರಕ್ಷಣೆ, ಅಂತರ್ಜಲ ಹಾಗೂ ಜೀವಿ -ವೈವಿಧ್ಯ ಸಂರಕ್ಷಣೆ – ಹೀಗೆ ಎಲ್ಲಾ ಜೈವಿಕ ಹಾಗೂ ಅಜೈವಿಕ ಸಂಪನ್ಮೂಲಗಳು ಉಳಿಯುವಂತಾಗಲು ನಾವು ಜಾಗ್ರತರಾಗಬೇಕಿದೆ. ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರ. ಸಮ್ಮ ಸುತ್ತಲಿನ ಗಾಳಿ, ನೀರು, ಮರಗಿಡಗಳು, ಪ್ರಾಣಿಗಳು, ಮನುಷ್ಯ , ಜೀವ ವೈವಿಧ್ಯತೆ ಇವುಗಳೆಲ್ಲ ಪರಿಸರದ ಅಂಶಗಳು. ಪರಿಸರ ಇಲ್ಲದೆ ಯಾವುದೇ ಜೀವಿಗಳು ಬದುಕಲಾರವು. ಪರಿಸರ – ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಾನವ ಪರಿಸರದ ಶಿಶು. ಪ್ರಕೃತಿಯಲ್ಲಿ ಎಲ್ಲಾ ಜೀವಿಗಳಂತೆ ಮಾನವ ಕೂಡ ಒಂದು ಜೀವಿಯಷ್ಟೆ. ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯಲ್ಲಿ ಬೆಲೆಯಿರುವುದಿಲ್ಲ. ಆದರೆ, ಮನುಷ್ಯ ಜೀವಿಯಿಲ್ಲದ್ದರೂ ಪರಿಸರದ ಕೊಂಡಿಯೇನು ಕಳಚಿ ಹೋಗುವುದಿಲ್ಲ.ಆದ್ದರಿಂದ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಎರಡೂ ಇದೆ. ನಾವು ನಮ್ಮ ಪರಿಸರ ಮಹತ್ವದ ಬಗ್ಗೆ ತಿಳಿಯುವ ಹಾಗೂ ಇಂದು ಪರಿಸರಕ್ಕೆ ನಿರಂತರವಾಗಿ ಆಗುತ್ತಿರುವ ಹಾನಿಯನ್ನು ಅರಿತು ಅದರ ಸಂರಕ್ಷಣೆ ಕುರಿತು ಆಳವಾಗಿ ಅಧ್ಯಯನ ಮಾಡಿ ಆಲೋಚಿಸಬೇಕಾದ ಮಹತ್ತರ ದಿನ ಇದಾಗಿದೆ. 1972 ರಲ್ಲಿ ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನಾಚರಣೆ ಆಚರಿಸುವ ಕುರಿತು ಘೋಷಿಸಿದ ನಂತರ 1973 ರ ಜೂನ್ 5 ರಿಂದ ವಿಶ್ವದಾದ್ಯಂತ ಪ್ರತಿವರ್ಷ ಈ ದಿನವನ್ನು ವಿಶ್ವ ಪರಿಸರ ದಿನಾಚರಣೆವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಜಾಗತಿಕ ಮಟ್ಟದಲ್ಲಿ ಸುಮಾರು ನೂರಕ್ಕಿಂತ ಹೆಚ್ಚಿನ ರಾಷ್ಟ್ರಗಳು ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸುತ್ತಿರುವುದರಿಂದಲೇ ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆ ಎನಿಸಿಕೊಂಡಿದೆ. ಈ ದಿನದ ವಿಶೇಷವೇನೆಂದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರದ ಸ್ಥಿತಿಗತಿ ತಿಳಿಯುವುದು, ಜಾಗತಿಕ ಮಟ್ಟದಲ್ಲಿ ಸ್ವಚ್ಛ ಪರಿಸರದ ಅಗತ್ಯತೆಯನ್ನು ಅರಿಯುವುದು ಹಾಗೂ ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವಂತಹ ಧ್ಯೇಯೋದ್ದೇಶಗಳು ಪರಿಸರ ಆಚರಣೆಯಲ್ಲಿ ಸೇರಿವೆ.ಎಲ್ಲರಿಗೂ ಪರಿಸರ ಸಂಬಂಧಿತ ವಿಷಯಗಳು ಪ್ರತಿಯೊಬ್ಬರಿಗೂ ತಿಳಿಯಬೇಕೆಂಬುದೇ ಆಗಿದೆ. ನಾವು ಈ ‘ಪರಿಸರ ದಿನ ’ವನ್ನು ಹಿಂದೆಂದಿಗಿಂತಲೂ ವ್ಯಾಪಕವಾಗಿ ಮತ್ತು ಶ್ರದ್ಧೆಯಿಂದ ಆಚರಿಸಬೇಕಾದ ದಿನಗಳು ಬಂದಿವೆ. ಏಕೆಂದರೆ ಭೂಮಿಯ ನೈಸರ್ಗಿಕ ಪರಿಸರ ಒಟ್ಟಾರೆ ಸ್ಥಿತಿಗತಿ ನಿಜಕ್ಕೂ ದಿನದಿನಕ್ಕೆ ಆತಂಕಕಾರಿ ಆಗುತ್ತಿದೆ. ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ನೆಲ ಮಾಲಿನ್ಯ ಎಲ್ಲವೂ ಹೆಚ್ಚುತ್ತಿವೆ. ದಿನೇ ದಿನೇ ಭೂಮಿ ಬಿಸಿಯಾಗುತ್ತಿದೆ. ಅದರಿಂದಾಗಿ ಹವಾಮಾನ ಸಮತೋಲ ಬಿಗಡಾಯಿಸುತ್ತಿದೆ. ಭೀಕರ ಮಳೆಗಾಲ, ಪ್ರಕೃತಿ ವಿಕೋಪ ಇಲ್ಲವೆ ಭೀಕರ ಬರಗಾಲಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ.
ನಿತ್ಯವೂ ಪರಿಸರ ದಿನ : ವರ್ಷದಲ್ಲಿ ಕೇವಲ ಜೂನ್ 5 ರಂದು ಒಂದು ದಿನ ಮಾತ್ರ ಪರಿಸರ ದಿನದ ರಕ್ಷಣೆಯೊಂದಿಗೆ ಸೀಮಿತವಾಗಬಾರದು. ನಿತ್ಯವೂ ಪರಿಸರ ದಿನವಾಗಿ ಆಚರಿಸುವಂತಾಗಬೇಕಾದರೆ ಈ ಮೂಲಕ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಬೇಕು. ಅಂದರೆ, ವರ್ಷದ ಪ್ರತಿದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯನ್ನು ಹೆಜ್ಜೆ ಇಡೋಣ. ಪರಿಸರಕ್ಕೆ ಧಕ್ಕೆ : ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ಜಾಗತೀಕರಣ, ನಗರೀಕರಣ, ಕೈಗಾರೀಕರಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮುಂತಾದ ಹತ್ತು ಹಲವು ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗುತ್ತಿದೆ.ಈ ದಿಸೆಯಲ್ಲಿ ಪ್ರತಿಯೊಬ್ಬರೂ ಪರಿಸರವನ್ನು ರಕ್ಷಿಸುವ ಹಾಗೂ ಸಂರಕ್ಷಿಸುವ ನಮ್ಮ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಮಹತ್ತರ ಉದ್ದೇಶ ಕೂಡಾ ಪರಿಸರ ದಿನಾಚರಣೆಯಲ್ಲಿ ಅಡಗಿದೆ. ಪರಿಸರ ಮಾಲಿನ್ಯ : ಇಂದು ಪರಿಸರ ಮಾಲಿನ್ಯದ ಗೂಡಾಗಿದ್ದು, ನಮ್ಮ ಇರುವಿಕೆಗೆ ಅರ್ಥ ನೀಡಿದ ಭೂ ಮಾತೆಯನ್ನು ನಾವು ನಮ್ಮ ಅನೇಕ ಕಾರ್ಯಚಟುವಟಿಕೆಗಳಿಗೆ ಕಲುಷಿತಗೊಳಿಸಿ, ಅದರ ದುಷ್ಪರಿಣಾಮಗಳನ್ನು ನಾವು ಈಗಾಗಲೇ ಎದುರಿಸುತ್ತಿದ್ದೇವೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಭೂ ಮಾಲಿನ್ಯ, ಜಾಗತಿಕ ತಾಪಮಾನ, ಅಧಿಕ ಉಷ್ಣಾಂಶ, ಮಣ್ಣಿನ ಮಾಲಿನ್ಯ, ಅರಣ್ಯ ನಾಶ, ನೈಸರ್ಗಿಕ ಸಂಪನ್ಮೂಲಗಳ ನಾಶ- ಹೀಗೆ ಒಂದೇ , ಎರಡೇ ಪರಿಸರಕ್ಕೆ ಇಂದು ಉಂಟಾಗಿರುವ ಏರುಪೇರುಗಳು ಇಡೀ ಪರಿಸರ ವ್ಯವಸ್ಥೆಯನ್ನು ಹಾಳುಗೆಡವಿದೆ. ಪರಿಸರದ ಈ ಏರುಪೇರುಗಳಿಗೆ ಕಾರಣವೇನೆಂದರೆ, ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರದ ಮೇಲೆ ನಿರಂತರವಾಗಿ ಮಾಡಿರುವ/ಮಾಡುತ್ತಿರುವ ದೌರ್ಜನ್ಯದ ಫಲವಾಗಿದೆ. ಇದರ ಪರಿಣಾಮವಾಗಿ ನಾವು ಹೃದಯ ಸಂಬಂಧಿ, ಉಸಿರಾಟ ಸಂಬಂಧಿ ಹಾಗೂ ಅಪೌಷ್ಠಿಕತೆಯಂತಹ ಅನೇಕ ದುಷ್ಪರಿಣಾಮಗಳನ್ನು ನಾವು ಇಂದು ಎದುರಿಸುತ್ತಿದ್ದೇವೆ. ಈ ಎಲ್ಲದಕ್ಕೂ ಕಾರಣ, ನಾವು ಪರಿಸರದ ಬಗ್ಗೆ, ಅದರ ಪ್ರಾಮುಖ್ಯತೆ ಬಗ್ಗೆ ನಮಗೆ ಸರಿಯಾದ ಅರಿವು ಇಲ್ಲದಿರುವುದೇ ಆಗಿದೆ. ಆದ್ದರಿಂದಲೇ, ನಮ್ಮೆಲ್ಲರಿಗೂ ಜಾಗೃತಿ ಮೂಡಿಸಲು ಪರಿಸರದ ಪರ ನಮ್ಮ ಕರ್ತವ್ಯ ಪಾಲಿಸಲು ಹಾಗೂ ನಮ್ಮ ಉತ್ತಮ ಭವಿಷ್ಯಕ್ಕಾಗಿ, ನಮ್ಮ ಮುಂದಿನ ಪೀಳಿಗೆಯ ಉಜ್ವಲವಾದ ನಾಳೆಗಳಿಗಾಗಿ ನಾವು ಇಂದು ಇಂದಿನ ಮಕ್ಕಳಿಗೆ, ಯುವಜನರಿಗೆ ಪರಿಸರದ ಕಾಳಜಿ ಮೂಡಿಸಲು ವಿಶ್ವ ಪರಿಸರ ದಿನವು ವಿಶೇಷ ಮಹತ್ವ ಪಡೆದಿದೆ. ವೈಯಕ್ತಿಕ ಮಟ್ಟದಲ್ಲಿ ನಮ್ಮ ನಡವಳಿಕೆಗಳು ಬದಲಾಗಬೇಕಿದೆ. ಪರಿಸರ ರಕ್ಷಣೆಯ ಕಾನೂನುಗಳಿಗೆ ನಾವೆಲ್ಲ ಬದ್ಧರಾಗಬೇಕಾಗಿದೆ. ಸಾಮೂಹಿಕ ಸ್ತರದಲ್ಲಿ ಇಡೀ ಸಮಾಜವೇ ಒಂದಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕಾಗಿದೆ. ನಮ್ಮ ಅಜ್ಞಾನದಿಂದಾಗಿ ಅಥವಾ ನಿರ್ಲಕ್ಷ್ಯದಿಂದಾಗಿ ಭೂಮಿಗೆ ಮತ್ತು ಇತರ ಭೂವಾಸಿಗಳಿಗೆ ಏನೇನು ಅನ್ಯಾಯ, ಅಪಚಾರವಾಗುತ್ತಿದೆ ಎಂಬುದನ್ನು ನಾವು ಮನಗಾಣಬೇಕಿದೆ. ಆದ್ದರಿಂದ ನಿಜವಾದ ಪರಿಸರ ದಿನಾಚರಣೆ ನಮ್ಮ ನಮ್ಮ ಮನೆಗಳಲ್ಲಿ,ಸಮುದಾಯದಲ್ಲಿ ಮುಂಜಾನೆಯಿಂದಲೇ ಆರಂಭವಾಗಬೇಕು. ನಾವು ನಮ್ಮ ಆಸ್ತಿ- ಪಾಸ್ತಿ, ವೈಯಕ್ತಿಕ ಸ್ವಚ್ಛತೆ ಮತ್ತು ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಹಾಗೂ ನಮ್ಮ ಮನೆಯ ಬಗ್ಗೆ ಕಾಳಜಿ ವಹಿಸಿದಂತೆಯೇ ನಮ್ಮನ್ನು ರಕ್ಷಿಸುತ್ತಿರುವ ಭೂಮಿಯ ಸಂರಕ್ಷಣೆ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕಿದೆ. ಹಾಗಾದರೆ , ಬನ್ನಿ ! ಇರುವುದೊಂದೇ ಭೂಮಿ ; ಇದನ್ನು ಸಂರಕ್ಷಿಸಿ, ಸಂಪೋಷಿಸಿ ಮುಂದಿನ ಪೀಳಿಗೆಗೆ ವಸುಂಧರೆಯನ್ನು ಪುನಃಶ್ಚೇತಗೊಳಿಸೋಣ. ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸಲು ಪಣ ತೊಡೋಣ.
ಲೇಖನ : ಟಿ.ಜಿ.ಪ್ರೇಮಕುಮಾರ್, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು, ಕೊಡಗು ಜಿಲ್ಲೆ : ಮೊ: 94485 88352












