ಸೋಮವಾರಪೇಟೆ ಜೂ.6 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಆರ್.ಎಂ.ಸಿ ಆವರಣ, ಪಟ್ಟಣ ಪಂಚಾಯಿತಿ, ಹನಪಿ ಜಾಮೀಯ ಮಸೀದಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು, ಸಂತಜೋಸೆಫರ ವಿದ್ಯಾಸಂಸ್ಥೆ, ಸಾಂದೀಪನಿ, ಎಸ್‍ಜೆಎಂ ಹಾಗೂ ಜಿಎಂಪಿ ಶಾಲೆಯ ವಿದ್ಯಾರ್ಥಿಗಳು ಗಿಡನೆಟ್ಟರು. ನಂತರ ಚನ್ನಬಸಪ್ಪ ಸಭಾಂಗಣದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪರಿಸರ ರಕ್ಷಣೆಯ ಕುರಿತು ಚಿತ್ರಕಲೆ ಮತ್ತು ಪ್ರೌಢಶಾಲಾ ಪ್ರಬಂಧ ಸ್ಪರ್ಧೆ ನಡೆಯಿತು. ಚಿತ್ರಕಲೆ ಸ್ಪರ್ಧೆಯಲ್ಲಿ ಸಾಂದೀಪನಿ ಶಾಲೆಯ ಪುರಸ್ಕೃತ ಜಿ.ಶೆಟ್ಟಿ ಪ್ರಥಮ, ಎಸ್‍ಜೆಎಂ ಶಾಲೆಯ ಹೆಚ್.ಆರ್.ಮೋಕ್ಷಿತ ದ್ವಿತೀಯ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ರಿಹಾನ ಪಾತೀಮ ತೃತೀಯ ಸ್ಥಾನ ಗಳಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ಸಂತ ಜೋಸೆಫರ ಶಾಲೆಯ ಮಹಮ್ಮದ್ ಫಾಝ್ ಪ್ರಥಮ, ಸಾಂದೀಪನಿ ಶಾಲೆಯ ಕೆ.ಎಸ್.ಹರ್ಷಿಣಿ ದ್ವಿತೀಯ, ಜ್ಞಾನವಿಕಾಸ ಶಾಲೆಯ ಎನ್. ಶ್ರಾವ್ಯ ತೃತೀಯ ಸ್ಥಾನ ಪಡೆದರು. ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಎಸಿಎಫ್ ಗೋಪಾಲ್ ಉದ್ಘಾಟಿಸಿ ಮಾತನಾಡಿ, ಪರಿಸರವನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರ ನಾಶವಾಗಲು ಬಿಟ್ಟರೆ ಭೂಮಿಯ ಮೇಲೆ ಜೀವರಾಶಿಗಳಿಗೆ ಆಪತ್ತು ಸಂಭವಿಸಬಹುದು ಎಂದು ಹೇಳಿದರು. ಪರಿಸರ ರಕ್ಷಣೆಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರ ಪಾತ್ರ ಹೆಚ್ಚಿದೆ. ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ನಾವೆಲ್ಲರೂ ತೆಗೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಸ್.ಡಿ.ವಿಜೇತ್, ಕಾರ್ಯದರ್ಶಿ ಜ್ಯೋತಿ ಅರುಣ್, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ, ಆರ್‍ಎಫ್‍ಒ ಶೈಲೇಂದ್ರ ಕುಮಾರ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಡಿ.ಎನ್. ಯಶೋಧ, ಸಂಸ್ಥೆಯ ಪದಾಧಿಕಾರಿಗಳಾದ ಎಸ್.ಎಂ.ಡಿಸಿಲ್ವಾ, ಎ.ಪಿ.ವೀರರಾಜು, ಜೆ.ಸಿ.ಶೇಖರ್, ಬಿ.ಎ.ಭಾಸ್ಕರ್, ಜೋಕಿಂ ವಾಸ್, ವಸಂತ ಕುಮಾರಿ, ಅಂತೋಣಿ ಡಿಸೋಜ, ಗಿರೀಶ್ ಕಾಟ್ನಮನೆ, ಚಂದ್ರಕಲಾ, ಸಿ.ಎಸ್.ನಾಗರಾಜ್, ಟಿ.ಜೆ.ಶುಭ, ಜಮೀರ್ ಇದ್ದರು.











