
ನಾಪೋಕ್ಲು ಜೂ.18 NEWS DESK : ಗಾಳಿ ಸಹಿತ ಮಳೆಯಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಅಲ್ಲಲ್ಲಿ ಮರಗಳು ಮುರಿದು ಬಿದ್ದ ಪರಿಣಾಮ ಮನೆಗಳಿಗೆ ಹಾನಿ ಸಂಭವಿಸಿದಲ್ಲದೆ, ಹಲವೆಡೆ ವಿದ್ಯುತ್ ಕಡಿತಗೊಂಡಿದೆ. ಎಮ್ಮೆಮಾಡು ಗ್ರಾಮದ ನಬೀಶ ಅವರ ವಾಸದ ಮನೆಗೆ ರಾತ್ರಿ ಬಾರೀ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಮನೆಯ ಚಾವಣಿಗೆ ಅಳವಡಿಸಿದ 5 ಸಿಮೆಂಟ್ ಶೀಟ್ ಹುಡಿಯಾಗಿರುವುದಲ್ಲದೆ ಗೋಡೆ ಬಿರುಕು ಬಿಟ್ಟು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಕ್ಕಬೆ -ಕುಂಜಿಲ ಗ್ರಾಮದ ನಿವಾಸಿ ಕೆ.ಎಂ.ಮರಿಯಮ್ಮ ಅವರ ವಾಸದ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ. ಹೊದ್ದೂರು ಗ್ರಾಮ ಪಂಚಾಯತಿಯ ಕುಂಬಳಗಾಳು ಗ್ರಾಮದ ನಿವಾಸಿ ಕಲ್ಲೆಂಗಡ ಗಿರೀಶ್ ಎಂಬುವರ ತೋಟದ ಲೈನ್ ಮನೆಯ ಮೇಲೆ ಬಾರಿ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಮನೆ ಸಮೀಪದ ತೋಟದಲ್ಲಿದ್ದ ಬಾರಿ ಗಾತ್ರದ ಕಾಡು ಬೇವು ಮರ ಗಾಳಿ ಮಳೆಗೆ ಮುರಿದು ಬಿದ್ದು ಛಾವಣಿ ಹಾಗೂ ಮನೆಯೊಳಗಡೆಯಿಂದ ಪರಿಕರಗಳು ಬಾರಿ ನಷ್ಟ ಸಂಭವಿಸಿದೆ. ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಯಾವುದೇ ಪ್ರಾಣ ಪಾಯಸ ಸಂಭವಿಸಿಲ್ಲ. ಸ್ಥಳಕ್ಕೆ ಗ್ರಾಮ ಲೆಕ್ಕಿಗೆ ಶರ್ಮಿಳಾ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ನಾಪೋಕ್ಲು – ಕಲ್ಲು ಮೊಟ್ಟೆ ಸಂಪರ್ಕ ರಸ್ತೆಯ ಮೇಲೆ ಕಾವೇರಿ ನೀರು ಹರಿದು ಸಂಪರ್ಕ ಕಡಿತಗೊಂಡಿದೆ. ನಾಲಡಿಯಲ್ಲಿ 24 ಗಂಟೆಯಲ್ಲಿ 192.4 ಮಿಲಿ ಮೀಟರ್ ದಾಖಲೆ ಮಳೆಯಾಗಿದೆ. ನಾಲಡಿ ಗ್ರಾಮದಲ್ಲಿ ಇದುವರೆಗೆ ಒಟ್ಟು 68.81 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 19.48 ಇಂಚು ಮಳೆಯಾಗಿತ್ತು. ಸಮೀಪದ ನಲಜಿ ಗ್ರಾಮದಲ್ಲಿ ಒಂದೇ ದಿನ 3.20 ಇಂಚು ಮಳೆಯಾಗಿದೆ.ಗ್ರಾಮದಲ್ಲಿ ವರ್ಷದ ಆರಂಭದಿಂದ ಇದುವರೆಗೆ 63.55 ಇಂಚು ಮಳೆ ಸುರಿದಿದೆ. ದೊಡ್ಡಪುಲಿಕೋಟು ಗ್ರಾಮದಲ್ಲಿ 5.50 ಇಂಚು ಮಳೆಯಾಗಿದ್ದರೆ ವಿ ಬಾಡಗ ಗ್ರಾಮದಲ್ಲಿ 4.88 ಇಂಚು ಮಳೆಯಾಗಿದೆ. ವಿ ಬಾಡಗ ಗ್ರಾಮದಲ್ಲಿ ಇದುವರೆಗೆ64.08 ಇಂಚು ಮಳೆಯಾಗಿದೆ. ಭಾಗಮಂಡಲಕ್ಕೆ ಇದುವರೆಗೆ 83 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 27 ಇಂಚು ಮಳೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 56 ಇಂಚು ಹೆಚ್ಚು ಮಳೆಯಾಗಿದೆ. ತಲಕಾವೇರಿಯಲ್ಲಿ ಒಂದು ದಿನದಲ್ಲಿ ಎಂಟು ಇಂಚು ದಾಖಲೆ ಮಳೆ ಸುರಿದಿದೆ.ಭಾಗಮಂಡಲ ಸೇರಿದಂತೆ ವಿವಿದೆಡೆ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಮಳೆ ಬಿರುಸು ಹೆಚ್ಚಿದರೆ ವಿವಿದೆಡೆ ರಸ್ತೆ ಸಂಚಾರ ಕಡಿತಗೊಳ್ಳುವ ಆತಂಕ ಎದುರಾಗಿದೆ. .-
ವರದಿ : ದುಗ್ಗಳ ಸದಾನಂದ.










