ಮಡಿಕೇರಿ ಜೂ.18 NEWS DESK : ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯನ್ನು ಪಡೆಯುವುದು ಕೊಡವರ ಸಾಂವಿಧಾನಿಕ ಹಕ್ಕಾಗಿದ್ದು, ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಹೋರಾಟಕ್ಕೆ ಎಲ್ಲರು ಕೈಜೋಡಿಸಬೇಕೆಂದು ಖ್ಯಾತ ಸುಪ್ರೀಂಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಕರೆ ನೀಡಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಮಡಿಕೇರಿಯ ಹೊರವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕೊಡವರ ಹಕ್ಕುಗಳ ಕುರಿತು ವಿಚಾರ ಮಂಡಿಸಿದರು. 1834ರಲ್ಲಿ ಕೊಡಗು ಎಂಬ ಸ್ವತಂತ್ರ ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಂಡು, 1874ರ ಶೆಡ್ಯೂಲ್ಡ್ ಡಿಸ್ಟ್ರಿಕ್ಟ್ಸ್ ಕಾಯ್ದೆಯಡಿ ತರಲಾಯಿತು. ಬಳಿಕ 1919ರ ಭಾರತ ಸರ್ಕಾರ ಕಾಯ್ದೆಯಡಿಯಲ್ಲಿ ಕೊಡಗನ್ನು ಚೀಫ್ ಕಮಿಷನರ್ ಪ್ರಾಂತ್ಯವನ್ನಾಗಿ ಮಾಡಲಾಯಿತು. 1923ರಲ್ಲಿ ಕೊಡಗು ತನ್ನದೇ ಆದ ಶಾಸನ ಮಂಡಳಿಯನ್ನು ಪಡೆಯಿತು. ಆದರೆ 1956ರಲ್ಲಿ ರಾಜ್ಯ ಪುನರ್ ರಚನೆಯ ಕಾಯ್ದೆಯಡಿ ಕೊಡಗನ್ನು ಮೈಸೂರಿನೊಂದಿಗೆ ವಿಲೀನಗೊಳಿಸಿದ ನಂತರ ಕೊಡವ ಸಮುದಾಯದ ಅನನ್ಯ ಬೇಡಿಕೆಗಳಿಗೆ ಅಗತ್ಯ ಸ್ಪಂದನ ದೊರೆಯಲಿಲ್ಲ ಎಂದು ವಿಕ್ರಮ್ ಹೆಗ್ಡೆ ಗಮನ ಸೆಳೆದರು. ಕೊಡವ ಸಂಸ್ಕೃತಿ ಅತ್ಯಂತ ವಿಭಿನ್ನವಾಗಿದೆ, ಕೊಡವರು ಅನನ್ಯ ಆ್ಯನಿಮಿಸ್ಟಿಕ್ ಧಾರ್ಮಿಕ ಪಂಥದವರು. ಅವರ ದೇವತೆಗಳು, ಪೂಜಾ ವಿಧಾನಗಳು, ಪೂರ್ವಜ ಪೂಜೆ (ಗುರು ಕಾರಣ), ಪ್ರಕೃತಿ ಆರಾಧನೆ (ದೇವರಕಾಡು) ಭೂದೇವಿ, ಜಲದೇವಿ, ಸ್ವರ್ಗೀಯ ಆತ್ಮಗಳ ಆರಾಧನೆ ಇವುಗಳು ಪ್ರತ್ಯೇಕ ಮತ್ತು ವಿಶಿಷ್ಟವಾದವು. ಕೊಡಗಿಗೆ ಮಾತ್ರ ಸೀಮಿತವಾದ ಕೊಡವರ ವಿಶಿಷ್ಟ ಹಬ್ಬಗಳಿವೆ. ಕೊಡವ ಭಾಷೆ ಕೇವಲ ಒಂದು ಭಾಷೆ ಮಾತ್ರವಲ್ಲ. ಅದು ಕೊಡವರ ಆತ್ಮಸ್ಫೂರ್ತಿ, ಇದಕ್ಕೆ ಯುಗ ಯುಗಗಳ ದೀರ್ಘ ಹಿನ್ನೆಲೆ ಇದೆ. 2017ರಲ್ಲಿ ಸಂಸದ ಬಿ.ಕೆ.ಹರಿಪ್ರಸಾದ್ ಅವರು ಕೊಡವ ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸುವ ವಿಚಾರವನ್ನು ಸಂಸತ್ತಿನಲ್ಲಿ ಎತ್ತಿದರು. ಆದರೆ ಈ ಕುರಿತು ಮುಂದೆ ಯಾವುದೇ ಕ್ರಮ ನಡೆಯಿಲ್ಲ. ಕೊಡವ ಭಾಷೆಗೆ ಅಧಿಕೃತ ಸ್ಥಾನಮಾನ ನೀಡಬೇಕು, ಆಡಳಿತ ಮತ್ತು ಶಿಕ್ಷಣದ ಮಾಧ್ಯಮವಾಗಿ ಬಳಸಬೇಕು. ಕೊಡವ ಸಂಸ್ಥೆಗಳಿಗೆ ಸರಿಯಾದ ಪ್ರತಿನಿಧಿ ಸಿಗಬೇಕು. ಕಳೆದ ಕೆಲವು ವರ್ಷಗಳಲ್ಲಿ ಮೂಪಾಜೆ ನಿಘಂಟುಗಳ ಪ್ರಕಟಣೆಗಳು ಆಗಿವೆ. ಆದರೆ ಭಾಷಾ ಪರಂಪರೆಯ ಸಂಗ್ರಹ ಮತ್ತು ಸಂರಕ್ಷಣೆಯ ಕೆಲಸ ಇನ್ನೂ ನಡೆಯಬೇಕು. ಮೂಲಭೂತ ಜೀವನ ಶೈಲಿ, ವಿಶಿಷ್ಟ ಸಂಸ್ಕೃತಿ, ಭೌಗೋಳಿಕ ಪ್ರತ್ಯೇಕತೆ, ಬೇರೆಯ ಸಮುದಾಯದೊಂದಿಗೆ ಸಂಬಂಧ ರಹಿತತೆ ಮತ್ತು ಹಿಂದುಳಿತ ಸ್ಥಿತಿಯ ಕುರಿತು ಲೋಕೂರ್ ಸಮಿತಿಯು ಪಂಚ ಮಾನದಂಡಗಳನ್ನು ಹೇಳಿದೆ. ಈ ಎಲ್ಲಾ ಮಾನದಂಡಗಳನ್ನು ಒಂದೇ ರೀತಿಯಲ್ಲಿ ಲಾಗು ಮಾಡಲಾಗದಿರುವುದರಿಂದ, ಸಮಗ್ರ ವಿಶ್ಲೇಷಣೆಯ ಅಗತ್ಯವಿದೆ. ದಾವಿಂದರ್ ಸಿಂಗ್ ಮತ್ತು ಇವಿ. ಚಿನ್ನಯ್ಯ ಪ್ರಕರಣಗಳು ಈ ಕುರಿತು ಮಾರ್ಗದರ್ಶನ ನೀಡುತ್ತವೆ. ನಾಗಮೋಹನ ದಾಸ್ ಸಮಿತಿಗೆ ಕೋರಿ ಮನವಿಯನ್ನು ಸಲ್ಲಿಸಬೇಕು. ಆಕ್ರಮಣಕ್ಕೆ ವಿಶ್ವರಾಷ್ಟ್ರ ಸಂಸ್ಥೆಯ ಯುಎನ್‍ಡಿಆರ್‍ಐಪಿ ಆದಿಮಸಂಜಾತ ಮಾನ್ಯತೆಯನ್ನು ಕೊಡವರಿಗೆ ನೀಡಬೇಕು. Indigenous Peoples ಎಂಬ ಯುಎನ್‍ನ ಮಾನ್ಯತೆಗಾಗಿ ಕೊಡವ ಸಮುದಾಯ ಅರ್ಹವಾಗಿರುತ್ತದೆ. ಯುಎನ್‍ಡಿಆರ್‍ಐಪಿ ಅನೇಕ ಜಾಗತಿಕ ಹಕ್ಕುಗಳನ್ನು ನೀಡುತ್ತದೆ. ಇವುಗಳು ಕೊಡವರ ಭೂಮಿ, ಆದ್ಯಾತ್ಮಿಕ ಪರಂಪರೆ, ಜ್ಞಾನ, ಸಂಸ್ಕೃತಿ, ಧರ್ಮ, ಆರ್ಥಿಕ ಅಭಿವೃದ್ಧಿ ಹಾಗೂ ಸ್ವಾಯತ್ತತೆಗೆ ಸಂಬಂಧಿಸಿದ ಹಕ್ಕುಗಳಾಗಿವೆ. ತಮ್ಮ ಪರಂಪರೆಯ ಉತ್ಥಾನ ಮತ್ತು ಸಂರಕ್ಷಣೆಗೆ ಹಕ್ಕು. ತಮ್ಮ ಭೂಮಿ ಮತ್ತು ಸಂಪತ್ತುಗಳ ಮೇಲಿನ ನಿಯಂತ್ರಣ ಮತ್ತು ಸ್ವಾಯತ್ತತೆಗೆ ಹಕ್ಕುಗಳ ಮಂಡನೆಯಾಗಬೇಕು. ದೇವರಕಾಡುಗಳು ವಾಣಿಜ್ಯ ಲಾಭಕ್ಕಾಗಿ ಬಳಸದಂತೆ ಉಳಿಸಬೇಕು. ಕೊಡವ ಪರಂಪರೆಯ ಭೂಮಿ ವಹಿವಾಟಿನಲ್ಲಿ ಸಮುದಾಯದ ನಿಯಂತ್ರಣ ಇರಬೇಕು. 1963ರ 6 ಜುಲೈರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ, Arms Act 1959ರ ಸೆಕ್ಷನ್ 41 ಅಡಿಯಲ್ಲಿ ಕೊಡವರಿಗೆ ಶಸ್ತ್ರಾಸ್ತ್ರ ಧರಿಸುವಂತೆ ವಿಶೇಷ ವಿನಾಯಿತಿ ಇದೆ. ಇದು 2029ರ ವರೆಗೆ ವಿಸ್ತರಿಸಲಾಗಿದೆ. ಆದರೆ ಇದು ಮೂಲಭೂತ ಪವಿತ್ರ ಹಕ್ಕಾಗಿ ಮಾನ್ಯತೆ ಪಡೆಯದಿದ್ದರೆ ಭವಿಷ್ಯದಲ್ಲಿ ಇದು ಅಧಿಕಾರ ಶಾಹಿಯ ಅಸ್ತಕ್ಷೇಪದಿಂದ ಆಪತ್ತಿಗೆ ಸಿಲುಕುವ ಅಪಾಯವಿದೆ. ಸ್ವಾತಂತ್ರ್ಯದ ಬಳಿಕ ಕೊಡಗಿನಿಂದ ಕೇವಲ ಒಬ್ಬ ಕೊಡವ ಮಾತ್ರ ಸಂಸತ್ತಿಗೆ ಆಯ್ಕೆಯಾಗಿದ್ದಾರೆ 1967ರಲ್ಲಿ ಸಿಎಂ ಪೂಣಚ್ಚ ಆಯ್ಕೆಯಾಗಿದ್ದು ಬಿಟ್ಟರೇ, ಒಂದೋ ಮೈಸೂರು ಅಥವಾ ಮಂಗಳೂರು ಮತ ಕ್ಷೇತ್ರಕ್ಕೆ ತಗಲಿ ಹಾಕಿಕೊಂಡಿದೆ. ಲಕ್ಷದ್ವೀಪದಲ್ಲಿ 64,000 ಜನರಿಗೆ ಪ್ರತ್ಯೇಕ ಸೀಟು ಇದೆ. ಕೊಡಗಿಗೂ ಪ್ರಾದೇಶಿಕ ಲೋಕಸಭಾ ಕ್ಷೇತ್ರಕ್ಕಿಂತ ಕೊಡವರಿಗಾಗಿಯೇ ಒಂದು ಮತಕ್ಷೇತ್ರ ಬೇಕಾಗಿದೆ. ಮಣಿಪುರ ಮತ್ತು ಸಿಕ್ಕಿಂನ ಮಾದರಿ ಕೊಡವರಿಗೆ ವಿಶಿಷ್ಟ ಪ್ರತಿನಿಧಿ ಬೇಕು. ಕೊಡವರು ವಿಭಜನೆಯ ಬೇಡಿಕೆಯನ್ನು ಮಾಡುತ್ತಿಲ್ಲ. ಅವರು ಗೌರವದಿಂದ ಜೀವನ ನಡೆಸುವ ಹಕ್ಕು ಕೇಳುತ್ತಿದ್ದಾರೆ. ಈ ದೇಶದ ಸೇನಾಪಡೆ, ಆಡಳಿತಾಂಗ ಮತ್ತು ಕ್ರೀಡೆಯಲ್ಲಿ ಸಾಧಿಸಿದ ಯಶಸ್ಸು ಮತ್ತು ಕೀರ್ತಿಗಾಗಿ ಭಾರತದೆಲ್ಲೆಡೆ ಕೊಡವರಿಗೆ ಗೌರವವಿದೆ. ಈ ಕಾರಣಕ್ಕಾಗಿ 5ನೇ ಅನುಸೂಚಿ, 6ನೇ ಅನುಸೂಚಿ ಅಥವಾ ಪ್ರತ್ಯೇಕ 371ನೇ ಅನುಚ್ಛೇದದಂತೆ ವ್ಯವಸ್ಥೆ ಕಲ್ಪಿಸಬಹುದೆಂಬ ವಿಚಾರವು ಅರ್ಥಪೂರ್ಣವಾಗಿದೆ. ಕೊಡವ ಜನರ ಭೂಮಿ, ಭಾಷೆ, ಸಂಸ್ಕೃತಿ ಮತ್ತು ಭವಿಷ್ಯಕ್ಕಾಗಿ ನಾವೆಲ್ಲರೂ ಒಂದುಗೂಡಬೇಕಿದೆ ಎಂದು ವಿಕ್ರಮ್ ಹೆಗ್ಡೆ ತಿಳಿಸಿದರು. ಕೊಡಗು ಎಂದರೆ ಗೌರವ. ಇಂದಿನಿಂದ ಕೊಡವ ಜನರ ಹಕ್ಕುಗಳಿಗಾಗಿ ನಿಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶೂನ್ಯದಿಂದ ಆರಂಭಿಸಿ ಬೃಹತ್ ಮಟ್ಟದ ವರೆಗೆ ಕಳೆದ 35 ವರ್ಷಗಳಿಂದ ಸಿಎನ್‍ಸಿ ಕೊಡವಲ್ಯಾಂಡ್ ಹಕ್ಕೊತ್ತಾಯದ ಮೂಲಕ ಕೊಡವರ ಅಸ್ಮಿತೆ ಮತ್ತು ನೀತಿ ತತ್ವವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದವರೆಗೆ ಅನಾವರಣಗೊಳಿಸಿ ಶಾಂತಿಯುತವಾಗಿ ಕೊಂಡೊಯ್ಯುವ ಮೂಲಕ ಅಧಿಕಾರ ಸ್ತಂಭ ಎಚ್ಚರಗೊಳ್ಳುವಂತೆ ಮಾಡಿದ್ದು ಶ್ಲಾಘನೀಯ ಸಾಧನೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಈ ದೇಶದ ಭೂ ರಾಜಕೀಯ ವ್ಯವಸ್ಥೆ ಐದು ಶ್ರೇಣಿಯ ಕ್ರಮಾನುಗತ ವಿಧಾನದಲ್ಲಿ ಚಾಚಿಕೊಂಡಿದೆ. 1.ರಾಷ್ಟ್ರ 2.ಉಪರಾಷ್ಟ್ರ ಅಂದರೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಮಧ್ಯ (ಕೇಂದ್ರ), 3. ಪ್ರಾದೇಶಿಕ ವಿಭಾಗ, 4.ಉಪ ಪ್ರಾದೇಶಿಕ ವಿಭಾಗ ಮತ್ತು ಎಥ್ನೊ-ಸೆಂಟ್ರಿಕ್ ಜನಾಂಗೀಯ ಕೇಂದ್ರೀಕೃತ ಹೆಗ್ಗುರತನ್ನು ಹೊಂದಿದೆ. ಇದೇ ತತ್ವದ ಅಡಿಯಲ್ಲಿ ರಾಷ್ಟ್ರವೆಂಬ ಪರಮೋಚ್ಚ, ಭೂ ರಾಜಕೀಯ ಸರಹದ್ಧಿನ ಸಾರ್ವಬೌಮತ್ವವನ್ನು ಗೌರವಿಸುವುದರೊಂದಿಗೆ ಕೊಡವ ಜನಾಂಗೀಯ ಕೇಂದ್ರೀಕೃತ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯನ್ನು ಗಳಿಸುವತ್ತ ಸಿಎನ್‍ಸಿ ಭಾರತದ ಸಂವಿಧಾನದ ಅಡಿಯಲ್ಲಿ ಹಕ್ಕೊತ್ತಾಯ ಮಂಡಿಸುತ್ತಿದೆ. ಕೊಡವರ ಜನಾಂಗೀಯ ಹೆಗ್ಗುರುತಿನ ರಕ್ಷಣೆಯೊಂದಿಗೆ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ವರ್ಗಿಕರಿಸುವುದರೊಂದಿಗೆ “ಸೋಶಿಯಲ್ ಇಂಜಿನಿಯರಿಂಗ್” ಮೂಲಕ ಸಬಲೀಕರಣಗೊಳ್ಳುವ ಹಂಬಲ ಒಂದೆಡೆಯಾದರೆ ಕೊಡವರ ರಾಜಕೀಯ ಅಶೋತ್ತರಗಳನ್ನು ಈಡೇರಿಸಲು ವಿಶೇಷ ಪೊಲಿಟಿಕಲ್ ಡಿಸೈನ್‍ಗಾಗಿ ಸಿಎನ್‍ಸಿ ಆಹೋರಾತ್ರಿ ಅವಿಶ್ರಾಂತವಾಗಿ ಶ್ರಮಿಸುತ್ತಿದೆ. ಇದಕೋಸ್ಕರ ರಾಜಕೀಯಾತ್ಮಕ, ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ನಡಿಗೆಯ ಮೂಲಕ ತಾರ್ಕಿಕ ಗುರಿ ಸಾಧನೆಯತ್ತ ನಡೆಯುತ್ತಿದೆ ಎಂದು ವಿಶ್ಲೇಷಿಸಿದರು. ಕರ್ನಾಟಕ ಹೈ ಕೋರ್ಟ್‍ನ ಹಿರಿಯ ವಕೀಲ ಎಂ.ಟಿ.ನಾಣಯ್ಯ ಅವರು ಮಾತನಾಡಿ, ಕೊಡವರ ಸಂವಿಧಾನಿಕ ಹಕ್ಕುಗಳಿಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಿಎನ್‍ಸಿ ಸಂಘಟನೆಗೆ ಎಲ್ಲಾ ರೀತಿಯ ಬೆಂಬಲ ನೀಡಬೇಕೆಂದು ಕರೆ ನೀಡಿದರು. ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಸಿಎನ್‍ಸಿ ಕೊಡವರ ಸಾಕ್ಷಿ ಪ್ರಜ್ಞೆಯಾಗಿ ಕಳೆದ 35 ವರ್ಷಗಳಿಂದ ಶಾಂತಿಯುತವಾಗಿ ಹಕ್ಕೊತ್ತಾಯ ಮಂಡಿಸುತ್ತಿದೆ. ಈ ರೀತಿಯ ಉತ್ಸಾಹದ ಚಿಲುಮೆಯಾಗಿ ಹೋರಾಟವನ್ನ ಇಲ್ಲಿಯವರೆಗೆ ತಲುಪಿಸಿದ ಎನ್.ಯು.ನಾಚಪ್ಪ ಅವರು ನಮ್ಮೆಲ್ಲರ ಕಣ್ಮಣಿಯಾಗಿದ್ದಾರೆ. ಪ್ರತಿಯೊಬ್ಬ ಮಗುವು ತನ್ನ ಭವಿಷ್ಯತ್ತಿನ ಬೆಳಕಾಗಿರುವ ಸಿಎನ್‍ಸಿಯೊಂದಿಗೆ ಗುರುತಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಬಾಳೆದಿಂಡು ಕಡಿಯುವ ಗೌರವದ ಮೂಲಕ ವಿಕ್ರಮ್ ಹೆಗ್ಡೆ ಅವರನ್ನು ಸಭೆಗೆ ಕರೆ ತರಲಾಯಿತು. ಮೂರು ಗುಂಡುಗಳನ್ನು ಬಾನೆತ್ತರಕ್ಕೆ ಹಾರಿಸಿ ಬಂದೂಕು ಹಕ್ಕಿನ ವ್ಯಾಜ್ಯ ನಡೆಸುತ್ತಿರುವ ವಿಕ್ರಮ್ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು.
*ಹಕ್ಕೊತ್ತಾಯ ಮಂಡನೆ* :: ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವರನ್ನು ಬುಡಕಟ್ಟು ಜನಾಂಗವೆಂದು ಗುರುತಿಸಬೇಕು. ಅಂತರರಾಷ್ಟ್ರೀಯ ಸಂಪ್ರದಾಯಗಳ ಅಡಿಯಲ್ಲಿ ಆನಿಮಿಸ್ಟಿಕ್ ಏಕ-ಜನಾಂಗೀಯ ಕೊಡವರ ಮಾನ್ಯತೆ ನೀಡಬೇಕು. ತೆರಿಗೆ ಪಾವತಿಸದ ಕಾರಣಕ್ಕಾಗಿ ಹೊರಗಿನ ಕೆಳದಿ ರಾಜರು, ಬ್ರಿಟಿಷರು, ಹೊರಗಿನ ವ್ಯಾಪಾರ ಉದ್ಯಮಿಗಳು ಹಾಗೂ ಲೇವಾದೇವಿಗಾರರು ವಶಪಡಿಸಿಕೊಂಡ, ಮುಟ್ಟುಗೋಲು ಹಾಕಿಕೊಂಡ, ಹರಾಜು ಹಾಕಿದ, ಅಡಮಾನ ಇಟ್ಟ ಮತ್ತು ಮಾರಾಟ ಮಾಡಿದ ಕೊಡವರ ಆನುವಂಶಿಕ ಭೂ ಹಕ್ಕುಗಳ ಮರುಪಾವತಿಯಾಗಬೇಕು. ಸಂವಿಧಾನದ 8ನೇ ಶೆಡ್ಯೂಲ್ ಪಟ್ಟಿಯಲ್ಲಿ ಕೊಡವ ಭಾಷೆಯನ್ನು ಸೇರಿಸಬೇಕು. ಕೊಡವ ಸಾಂಪ್ರದಾಯಿಕ ಹಕ್ಕುಗಳು, ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ತಾಣಗಳ ರಕ್ಷಣೆಯಾಗಬೇಕು. ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ಸಿಖ್ಖರಿಗೆ ಕಿರ್ಪಾನ್ ವಿನಾಯಿತಿಯಂತೆಯೇ, ಧಾರ್ಮಿಕ ಸಂಸ್ಕಾರವಾಗಿ ಕೊಡವರಿಗಾಗಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಾಯಿತಿಗಳ ಮುಂದುವರಿಯಬೇಕು. ಸಿಕ್ಕಿಂನಲ್ಲಿರುವ ಬೌದ್ಧ ಸನ್ಯಾಸಿ ಸಮುದಾಯಕ್ಕೆ ‘ಸಂಘ’ ಅಮೂರ್ತ ಕ್ಷೇತ್ರದಂತೆಯೇ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಕೊಡವರಿಗೆ ಮೀಸಲಾತಿ ನೀಡಬೇಕು. ಕೊಡವ ಭೂಮಿ, ಜೀವನದಿ ಕಾವೇರಿಯ ದೀರ್ಘಕಾಲಿಕ ಜಲ ಸಂಪನ್ಮೂಲಗಳು, ಸಸ್ಯ ಮತ್ತು ಪ್ರಾಣಿ, ಭಾಷೆ, ಜಾನಪದ ಸಾಂಸ್ಕೃತಿಕ ಪರಂಪರೆ, ಸಾಂಪ್ರದಾಯಿಕ ಕಾನೂನುಗಳು ಮತ್ತು ಈ ಮಣ್ಣಿನಲ್ಲಿ ಕೊಡವರ ಐತಿಹಾಸಿಕ ನಿರಂತರತೆಗೆ ಶಾಸನಬದ್ಧ, ಕಾನೂನು ಬದ್ಧ ಸ್ಥಿರೀಕರಣದ ರಕ್ಷಣೆಯಾಗಬೇಕು ಎಂದು ಸಭೆ ಹಕ್ಕೊತ್ತಾಯ ಮಂಡಿಸಿತು. ಕಲಿಯಂಡ ಪ್ರಕಾಶ್ ಸ್ವಾಗತಿಸಿದರು. ಬಾಚರಣಿಯಂಡ ಚಿಪ್ಪಣ್ಣ ನಿರೂಪಿಸಿದರು. ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು. ಸೂರ್ಯ-ಚಂದ್ರ, ಗುರು-ಕಾರೋಣ, ಜಲದೇವತೆ ಕಾವೇರಿ, ಪರ್ವತ ದೇವಿ, ವನ ದೇವಿ, ಭೂ ದೇವಿ ಮತ್ತು ಭಾರದ ಸಂವಿಧಾನದ ಹೆಸರಿನಲ್ಲಿ ಸಿಎನ್‍ಸಿ ಪರವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಅಂತಿಮವಾಗಿ ರಾಷ್ಟ್ರ ಗೀತೆ ಜನ-ಗಣ-ಮನ ಪಠಣದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು. ವಕೀಲ ವಿಕ್ರಮ್ ಹೆಗ್ಡೆ ಹಾಗೂ ಅವರ ಪತ್ನಿ ಪ್ರಖ್ಯಾತ ಕಾನೂನು ತಜ್ಞೆ, ವಕೀಲೆ ಹಿಮಾ ಲಾರೆನ್ಸ್ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಗಮನ ಸೆಳೆದರು. ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ನಂದೇಟಿರ ಕವಿತಾ, ನಂದಿನೆರವಂಡ ರೇಖಾ ನಾಚಪ್ಪ, ಅಪ್ಪಚ್ಚಿರ ರೀನಾ, ಚೋಳಪಂಡ ಜ್ಯೋತಿ, ಪಟ್ಟಮಾಡ ಲಲಿತಾ, ಬಿದ್ದಂಡ ರಾಧ, ಐಚಂಡ ರಶ್ಮಿ, ಅಜ್ಜಿನಿಕಂಡ ಇನಿತಾ, ನಡಿಕೇರಿಯಂಡ ಉಷಾ, ಅಪ್ಪಾರಂಡ ವಿನ್ಸಿ, ಮಾಳೇಟಿರ ಮಲ್ಕ, ಪುತ್ತರಿರ ಮಧು, ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶಾ, ಚಿರಿಯಪಂಡ ಸುರೇಶ್, ಅರೆಯಡ ಗಿರೀಶ್, ಡಾ.ಮಾತಂಡ ಅಯ್ಯಪ್ಪ, ಎಂ.ಟಿ.ನಾಣಯ್ಯ, ಮುಂಡಂಡ ನಾಣಯ್ಯ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಬೇಪಡಿಯಂಡ ದಿನು, ಬೊಟ್ಟಂಗಡ ಗಿರೀಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಿರಿಯಮಾಡ ಶರೀನ್, ಕಾಂಡೇರ ಸುರೇಶ್, ಪುಳ್ಳಂಗಡ ನಟೇಶ್, ಮಂದಪಂಡ ಮನೋಜ್, ಕಾಟುಮಣಿಯಂಡ ಉಮೇಶ್, ಚೆಂಗಂಡ ಸೂರಜ್, ಬಡುವಂಡ ವಿಜಯ, ನಂದೇಟಿರ ಜೀವನ್, ಮಣವಟ್ಟಿರ ನಂದ, ಚೆಂಬಂಡ ಜನತ್, ಮಣವಟ್ಟಿರ ಚಿಣ್ಣಪ್ಪ, ಡಾ.ಚೌರೀರ ಜಗತ್, ಕುಕ್ಕೇರ ಜಯ ಚಿಣ್ಣಪ್ಪ, ಬೇಪಡಿಯಂಡ ಬಿದ್ದಪ್ಪ, ಪೊರಿಮಂಡ ದೀನಮಣಿ, ಕೂಪದಿರ ಸಾಬು, ನಂದೇಟಿರ ಜೀವನ್, ನೆರ್ಪಂಡ ಜಿಮ್ಮಿ, ನಂದೇಟಿರ ರವಿ, ಪಂದ್ಯಂಡ ವಾಸು, ಅವರೆಮಾಡಂಡ ಚಂಗಪ್ಪ, ಪುದಿಯೊಕ್ಕಡ ಕಾಶಿ, ಪುಲ್ಲೇರ ಕಾಳಪ್ಪ, ಉದಿಯಂಡ ಚಂಗಪ್ಪ, ಬಿದ್ದಂಡ ಮಾದಯ್ಯ, ಅಪ್ಪಾರಂಡ ಪ್ರಸಾದ್, ಪುದಿಯೊಕ್ಕಡ ಬೋಪಣ್ಣ, ನಂದಿನೆರವಂಡ ಅಪ್ಪಯ್ಯ, ಪುದಿಯೊಕ್ಕಡ ಪೃಥ್ವಿ, ಚಂಗಂಡ ಚಾಮಿ, ಅಪ್ಪಾರಂಡ ತಿಮ್ಮಯ್ಯ, ಮುಂಜಾಂದಿರ ಅಪ್ಪಯ್ಯ, ಚೋಳಪಂಡ ನಾಣಯ್ಯ, ಪೆಮ್ಮಡಿಯಂಡ ವೇಣು, ಮಂಡೇಟಿರ ಸುನಿಲ್, ಕೈಬುಲಿರ ಬಿಪಿನ್, ಅಲ್ಮಚಂಡ ಸುರೇಶ್, ಬಲ್ಲಾರಂಡ ಅಚ್ಚಯ್ಯ, ಚೋಳಪಂಡ ವಿಜಯ, ನಂದಿನೆರವಂಡ ಅಯ್ಯಣ್ಣ, ಮೂಕೊಂಡ ದಿಲೀಪ್, ಮಂದಪಂಡ ಸೂರಜ್, ಪುಟ್ಟಿಚಂಡ ದೇವಯ್ಯ, ಅಪ್ಪೆಯಂಗಡ ಮಾಲೆ, ಮಣವಟ್ಟಿರ ನಂದಾ, ನೆಲ್ಲಿರ ಮಧು, ಕಂಜಿತಂಡ ಪ್ರದೀಪ್, ನಾಗವಂಡ ಕೃಪಾ, ಪಾಂಡಂಡ ಸುಬ್ರಮಣಿ, ಪಾಂಡಂಡ ಕಿಟ್ಟು, ಪಾಂಡಂಡ ಸುಧೀರ್, ಪಾಂಡಂಡ ಅಯ್ಯಣ್ಣ, ಮಾಳೆಯಂಡ ಬಿಜು, ಕೊಚ್ಚೆರ ಲೋಹಿತ್ ಭಾಗವಹಿಸಿದ್ದರು.











