

ಮಡಿಕೇರಿ ಜೂ.25 NEWS DESK : ಹಿಂದುಳಿದ ವರ್ಗಗಳ ಕಲ್ಯಾಣ, ಪೊಲೀಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಅಂತರ ರಾಷ್ಟ್ರೀಯ ದಿನ ಕುರಿತು ಜಾಗೃತಿ ಅಭಿಯಾನ ನಡೆಯಿತು. ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡೈರಿ ಫಾರಂನಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶ್ರೀನಾಥ್, ಹಿಂದೆ ಹಲವು ರೀತಿಯ ವೈರಸ್ ಮತ್ತು ಬ್ಯಾಕ್ಟೀರಿಯಾ ರೋಗಗಳಿಗೆ ತುತ್ತಾಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಾನಸಿಕ ಸ್ಥಿತಿ, ಒತ್ತಡ ಹಾಗೂ ಉದಾಸೀನತೆಯಿಂದ ಹಲವು ರೋಗಗಳನ್ನು ಕಾಣುತ್ತೇವೆ. ಆದ್ದರಿಂದ ಬದುಕಿನ ಜೀವನ ಶೈಲಿಯನ್ನು ಬದಲಿಸಿಕೊಂಡು, ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು. ಹಿಂದೆ ಮನುಷ್ಯನ ಆಯಸ್ಸು 80 ರಿಂದ 100 ವರ್ಷಗಳ ಕಾಲ ಬದುಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಆಯಸ್ಸು ಕಡಿಮೆಯಾಗುತ್ತಿದೆ. ಆದ್ದರಿಂದ ಯಾವುದೇ ರೀತಿಯ ಮದ್ಯ ಹಾಗೂ ಮಾದಕ ವಸ್ತುಗಳ ಚಟಕ್ಕೆ ತುತ್ತಾಗಬಾರದು ಎಂದು ಹೇಳಿದರು. ಪರಿಸರ ಶುಚಿತ್ವಕ್ಕೆ ಗಮನಹರಿಸಬೇಕು. ಡೆಂಗ್ಯೂ ಬಗ್ಗೆ ಯಾರೂ ಸಹ ಉದಾಸೀನ ಮಾಡಬಾರದು ಎಂದು ಶ್ರೀನಾಥ್ ಸಲಹೆ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಬೇಕು. ಆಟ ಪಾಠವು ಸಹ ಇರಬೇಕು. ಆದರೆ ಯಾವುದೇ ರೀತಿಯ ಚಟಕ್ಕೆ ಬಲಿಯಾಗಬಾರದು ಎಂದರು. ‘ಇತ್ತೀಚೆಗೆ ಐಪಿಎಲ್ ಪಂದ್ಯದಲ್ಲಿ ಗೆದ್ದ ಆರ್‍ಸಿಬಿ ತಂಡ ವಿಜಯೋತ್ಸವ ಸಂದರ್ಭ ಸ್ಮರಿಸಿಕೊಂಡರೆ ಯಾವ ರೀತಿಯ ಚಟಕ್ಕೆ ಬಲಿಯಾಗುತ್ತಾರೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯ, ಆದ್ದರಿಂದ ಯಾವುದೇ ಒಂದು ಚಟಕ್ಕೆ ದಾಸರಾಗಬಾರದು. ಅವರವರ ಬದುಕು ಅವರಿಗೆ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಮೋಹನ್ ಕುಮಾರ್ ಅವರು ಒತ್ತಿ ಹೇಳಿದರು.’ ಪೊಲೀಸ್ ಇಲಾಖೆಯ ಸಿದ್ದಲಿಂಗಪ್ಪ ಅವರು ಮಾತನಾಡಿ ಮಾದಕ ವಸ್ತುಗಳಿಗೆ ತುತ್ತಾಗಬಾರದು. ಆ ನಿಟ್ಟಿನಲ್ಲಿ ಎಚ್ಚರವಹಿಸಬೇಕು. ಮಾದಕ ವಸ್ತುಗಳಿಗೆ ತುತ್ತಾದಲ್ಲಿ ಜೀವನ ಕಳೆದುಕೊಳ್ಳಬೇಕಿದೆ. ಸುಸ್ಥಿರ ಬದುಕು ನಡೆಸುವತ್ತ ಗಮನಹರಿಸಬೇಕು ಎಂದರು. ಎಎಸ್‍ಐ ಶಿವಾನಂದ, ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ನಿಲಯ ಮೇಲ್ವಿಚಾರಕರಾದ ಆನಂದ್, ಇತರರು ಇದ್ದರು.












