ನಾಪೋಕ್ಲು ಜೂ.28 NEWS DESK : ಅತಿವೃಷ್ಟಿಯಿಂದ ಜಲಾವೃತವಾಗುವ ಪ್ರದೇಶಗಳಲ್ಲಿ ವಾಸಿಸುವ ಮಂದಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ, ಕೊಡಗು ಉಸ್ತುವಾರಿ ಸಚಿವ ಬೋಸರಾಜ್ ಹೇಳಿದರು.
ನಾಪೋಕ್ಲು ಪ್ರವಾಹ ಪೀಡಿತ ಪ್ರದೇಶ ಚೇರಿಯಪರಂಬುವಿನಗೆ ಭೇಟಿ ನೀಡಿ ಪ್ರವಾಹದಲ್ಲಿ ಮುಳುಗಡೆಯಾಗುವ ನಾಪೋಕ್ಲು-ಕಲ್ಲುಮೊಟ್ಟೆ ರಸ್ತೆ ಸಂಪರ್ಕಕ್ಕೆ ನೂತನವಾಗಿ 1.89 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ ಸೇತುವೆ ಸ್ಥಳವನ್ನು ಪರಿಶೀಲನೆ ನಡೆಸಿ ಮಾತನಾಡಿದರು. ಶಾಸಕರಾದ ಎ.ಎಸ್. ಪೊನ್ನಣ್ಣ ಬಂದ ಮೇಲೆ ಇದನ್ನು ಮನಗಂಡು ಅವರ ಪ್ರಯತ್ನದ ಫಲವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲ ಮುಗಿದ ನಂತರ ರಸ್ತೆ ಎತ್ತರಿಸುವ ಕಾಮಗಾರಿ ಮುಂದುವರಿಸಲಾಗುವುದು. ಮುಂದಿನ ವರ್ಷ ರಸ್ತೆ ಸಂಪರ್ಕಕ್ಕೆ ಯಾವುದೇ ಸಮಸ್ಯೆ ಉದ್ಭವಿಸದು. ಕಳಪೆ ಕಾಮಗಾರಿ ಬಗ್ಗೆ ದೂರುಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ತಜ್ಞರ ಮಾರ್ಗದರ್ಶನದಲ್ಲಿ ಇಂಜಿನಿಯರ್‍ಗಳು ಪರಿಶೀಲನೆ ನಡೆಸಿ ಉತ್ತಮ ಗುಣಮಟ್ಟದ ರಸ್ತೆ, ಸೇತುವೆ ನಿರ್ಮಿಸಲಾಗುತ್ತಿದೆ. ಕಳೆದ ಬಾರಿ ಕುಸಿತವಾಗಿದ ಕುಟ್ಟ ಮತ್ತು ಕೆದಮುಳ್ಳೂರು ಭಾಗದ ರಸ್ತೆಗಳನ್ನು ಪುನರ್ ನಿರ್ಮಿಸಲಾಗಿದೆ. ಉತ್ತಮಗುಣಮಟ್ಟದ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್‍ರಾಜ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಮಾಜಿ ಉಪಾಧ್ಯಕ್ಷೆ ಕುಲ್ಲೇಟ್ಟಿರ ಹೇಮಾ ಅರುಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕಾರ್ಮಿಕ ಘಟಕದ ಉಪಾಧ್ಯಕ್ಷ ಪರವಂಡ ಮಿರ್ಷದ್, ಯೂತ್ ಕಾಂಗ್ರೆಸ್ ಮುಖಂಡ ಡಾ. ಚೆರುಮಂದಂಡ ಸೋಮಣ್ಣ, ಬ್ಲಾಕ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ವಲಯಧ್ಯಕ್ಷ ಮಾಚೇಟಿರ ಕುಸು ಕುಶಲಪ್ಪ, ಕಂದಾಯ ಪರಿವೀಕ್ಷಕ ರವಿ ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಚೊಂದಕ್ಕಿ, ಕಾಂಗ್ರೆಸ್ ಕಾರ್ಯಕರ್ತ ಪಿ.ಯು.ರಜಾಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.











