ಮಡಿಕೇರಿ ಜು.1 NEWS DESK : ಜೂ.30ಕೊಡಗು ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಯ್ದೆಯಡಿ ಸುಮಾರು 12,629 ಮಂದಿ(9971 ಪುರುಷ ಮತ್ತು 2,658 ಮಹಿಳೆಯರು) ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಟಿ.ಕಾವೇರಿ ತಿಳಿಸಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ 3069(2424 ಪುರುಷ ಮತ್ತು 645 ಮಹಿಳೆ), ಸೋಮವಾರಪೇಟೆ ತಾಲ್ಲೂಕಿನಲ್ಲಿ 4146 ಮಂದಿ ಹೆಸರು ನೋಂದಾಯಿಸಿದ್ದು(3759 ಪುರುಷ ಮತ್ತು 387 ಮಹಿಳೆಯರು), ವಿರಾಜಪೇಟೆ ತಾಲ್ಲೂಕಿನಲ್ಲಿ 5414 ಮಂದಿ (3788 ಪುರುಷ ಮತ್ತು 1626 ಮಹಿಳೆಯರು) ಹೆಸರು ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಲು ಸಹಾಯವಾಣಿ 155214 ಕರೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಪಿಂಚಣಿ ಸೌಲಭ್ಯದಡಿ ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಪಲಾನುಭವಿಗೆ ಮಾಸಿಕ ಪಿಂಚಣಿ ಸೌಲಭ್ಯ ದೊರೆಯಲಿದೆ. ಕುಟುಂಬ ಪಿಂಚಣಿ ಸೌಲಭ್ಯದಡಿ ಮೃತ ಪಿಂಚಣಿದಾರರ ಪತಿ/ ಪತ್ನಿಗೆ ಮಾಸಿಕ ಪಿಂಚಣಿ ನೀಡಲಾಗುತ್ತದೆ ಎಂದು ಟಿ.ಕಾವೇರಿ ಹೇಳಿದ್ದಾರೆ. ದುರ್ಬಲತೆ ಪಿಂಚಣಿ ಯೋಜನೆಯಡಿ ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ /ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ಪಿಂಚಣಿ ಸೌಲಭ್ಯ ಹಾಗೂ ಶೇಕಡಾವಾರು ದುರ್ಬಲತೆಯನ್ನಾಧರಿಸಿ ಅನುಗ್ರಹ ರಾಶಿ ಸಹಾಯಧನ ನೀಡಲಾಗುತ್ತದೆ. ಟೂಲ್‍ಕಿಟ್ ಸೌಲಭ್ಯದಡಿ ನೋಂದಾಯಿತ ಫಲಾನುಭವಿಗೆ ವೃತ್ತಿಯಾಧಾರಿತ ಟೂಲ್‍ಕಿಟ್ ಸೌಲಭ್ಯ ಕಲ್ಪಿಸಲಾಗುತ್ತದೆ. ಹೆರಿಗೆ ಸೌಲಭ್ಯದಡಿ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಸಹಾಯಧನ ನೀಡಲಾಗುತ್ತದೆ. ಹಾಗೆಯೇ ಅಂತ್ಯಕ್ರಿಯೆ ವೆಚ್ಚದಡಿ ನೋಂದಾಯಿತ ಫಲಾನುಭವಿಯು ಮರಣ ಹೊಂದಿದ್ದಲ್ಲಿ ಅಂತ್ಯಕ್ರಿಯೆ ವೆಚ್ಚ ಹಾಗೂ ಅನುಗ್ರಹ ರಾಶಿ ಸಹಾಯಧನ ನೀಡುವ ಯೋಜನೆ ಇದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅವರು ವಿವರಿಸಿದ್ದಾರೆ. ಶೈಕ್ಷಣಿಕ ಸಹಾಯಧನದಡಿ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮೊದಲ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನರ್ಸರಿಯಿಂದ ಸ್ನಾತಕೋತ್ತರ ಪದವಿಯವರೆಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಇದೆ. ಹಾಗೆಯೇ ವೈದ್ಯಕೀಯ ಸಹಾಯಧನ ದೊರೆಯಲಿದೆ. ಅಪಘಾತ ಪರಿಹಾರದಡಿ ನೋಂದಾಯಿತ ಫಲಾನುಭವಿಯು ಅಪಘಾತದಿಂದ ಮರಣ ಹೊಂದಿದ್ದಲ್ಲಿ, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ಅಥವಾ ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ಸಹಾಯಧನ ನೀಡಲಾಗುತ್ತದೆ. ಪ್ರಮುಖ ವೈದ್ಯಕೀಯ ಸಹಾಯಧನದಡಿ ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾಶ್ರ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇಎನ್‍ಟಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ, ಡಿಸ್‍ಲೊಕೇಶನ್ ಚಿಕಿತ್ಸೆ, ಇತರೆ ಔದ್ಯೋಗಿಕ ಖಾಯಿಲೆಗಳಿಗೆ ನೋಂದಾಯಿತ ಫಲಾನುಭವಿ ಅಥವಾ ಅವರ ಅವಲಂಬಿತರು ಒಳಗಾದಲ್ಲಿ ವೈದ್ಯಕೀಯ ಚಿಕಿತ್ಸೆಗಳಿಗೆ ಸಹಾಯಧನ ನೀಡುವ ಯೋಜನೆ ಇದೆ ಎಂದು ಕಾವೇರಿ ಅವರು ವಿವರಿಸಿದ್ದಾರೆ. ಮದುವೆ ಸಹಾಯಧನದಡಿ ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ಸಹಾಯಧನ ನೀಡಲಾಗುತ್ತದೆ. ಹಾಗೆಯೇ ತಾಯಿ ಮಗು ಸಹಾಯಹಸ್ತದಡಿ ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ಸಹಾಯಧನ ನೀಡುವ ಯೋಜನೆ ಇದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅವರು ಮಾಹಿತಿ ನೀಡಿದ್ದಾರೆ.











