ಮಡಿಕೇರಿ NEWS DESK ಜು.25 : ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ಘೋಷಿಸಿರುವ 10 ಸಾವಿರ ರೂ. ಗೌರವ ಧನವನ್ನು ನೀಡದಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉಪಾಧ್ಯಕ್ಷೆ ಎಂ.ಉಮಾದೇವಿ ಹಾಗೂ ಕೊಡಗು ಜಿಲ್ಲಾಧ್ಯಕ್ಷೆ ತೆಕ್ಕಡೆ ಬಿ.ಪೂರ್ಣಿಮಾ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಜಿಲ್ಲಾ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸಂಘದ ಉಪಾಧ್ಯಕ್ಷೆ ಉಮಾದೇವಿ ಎಂ.ಅವರು ಮಾತನಾಡಿ, ಕಳೆದ ಜನವರಿಯಲ್ಲಿ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಸೇರಿಸಿ ಕನಿಷ್ಟ 10 ಸಾವಿರ ಗೌರವ ಧನವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಇನ್ಸೆಂಟಿವ್‍ನ್ನು ಶೀಘ್ರ ನಿಡಲಾಗುವುದೆಂದು ತಿಳಿಸಿದ್ದರು. ಈ ಭರವಸೆ ಇಲ್ಲಿಯವರೆಗೆ ಅನುಷ್ಠಾನಗೊಂಡಿಲ್ಲ. ತೀವ್ರ ಸಂಕಷ್ಟದಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಭರವಸೆಯಂತೆ ಗೌರವ ಧನವನ್ನು ನೀಡಬೇಕೆಂದು ಆಗ್ರಹಿಸಿದರು. ಬೇಡಿಕೆಗಳ ಈಡೇರಿಕೆಗಾಗಿ ಸಚಿವರುಗಳನ್ನು ಹಲವಾರು ಬಾರಿ ಭೇಟಿ ಮಾಡಿದ್ದರು ಸೂಕ್ತ ಸ್ಪಂದನ ಇಲ್ಲಿಯವರೆ ದೊರಕಿಲ್ಲ. ಈ ಹಿನ್ನೆಲೆ ಆಗಸ್ಟ್ 4 ರಿಂದ 6ರವರೆಗೆ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಉಮಾದೇವಿ ತಿಳಿಸಿದರು. ರಾಜ್ಯವ್ಯಾಪಿ ಪ್ರಸ್ತುತ 42 ಸಾವಿರಕ್ಕೂ ಹೆಚ್ಚು ಹಾಗೂ ಕೊಡಗು ಜಿಲ್ಲೆಯಲ್ಲಿ 485 ಆಶಾಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರ ಪರವೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆಶಾ ಕಾರ್ಯಕರ್ತೆಯರ ಸಂಕಷ್ಟವನ್ನು ಅರಿತು ತಾವು ನೀಡಿದ ಭರವಸೆಯನ್ನು ಈಡೇರಿಸಲಿ ಎಂದು ಒತ್ತಾಯಿಸಿದರು. ಪ್ರಸ್ತುತ ಆಶಾ ಕಾರ್ಯಕರ್ತೆಯರು ಗೌರವ ಧನವಾಗಿ 6 ರಿಂದ 7 ಸಾವಿರ ರೂ.ಗಳನ್ನು ಮಾತ್ರ ಪಡೆಯುತ್ತಿದ್ದಾರೆ. ಇವರಿಗೆ ನೀಡುವ ಗೌರವ ಧನಕ್ಕೂ ಡಾಟಾ ಎಂಟ್ರಿಯಲ್ಲಿನ ಲೋಪಗಳಿಂದ ತೊಂದರೆಯಾಗುತ್ತ್ತಿದೆ. ಈ ಎಲ್ಲಾ ಸಂಕಷ್ಟಗಳ ನಡುವೆಯೂ ಆಶಾ ಕಾರ್ಯಕತೆರ್ಯರ ಪ್ರಾಮಾಣಿಕ ಮತ್ತು ನಿಷ್ಠೆಯ ಸೇವೆಯಿಂದ ಪ್ರಸ್ತುತ ಗರ್ಭಿಣಿ ಮಹಿಳೆಯರ ಮರಣ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಉಮಾದೇವಿ ಹೇಳಿದರು. ಸಂಘದ ಜಿಲ್ಲಾಧ್ಯಕ್ಷರಾದ ತೆಕ್ಕಡೆ ಬಿ.ಪೂರ್ಣಿಮ ಮಾತನಾಡಿ, ಆಶಾ ಕಾರ್ಯಕರ್ತೆರು ಪ್ರಮುಖವಾಗಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಣೆಗೆ ಇರುವವರು. ಹೀಗಿದ್ದೂ ಇವರನ್ನು ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಆರೋಗ್ಯ ಇಲಾಖೆ ಹೊರತು ಪಡಿಸಿ ಇತರೆ ಇಲಾಖೆಗಳ ಕೆಲಸ ಕಾರ್ಯಗಳನ್ನು ಆಶಾ ಕಾರ್ಯಕರ್ತೆಯರಿಗೆ ನೀಡಬಾರದು ಎಂದು ಒತ್ತಾಯಿಸಿದರು. ಒಂದು ಸಾವಿರ ಮಂದಿಗೆ ಇಬ್ಬರು ಆಶಾ ಕಾರ್ಯಕರ್ತೆಯರು ಎನ್ನುವ ನಿಯಮವನ್ನು ಜಾರಿಗೆ ತರಲಾಗಿದೆ. ಕಡಿಮೆ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಒಬ್ಬ ಆಶಾಕಾರ್ಯಕರ್ತೆ ಹೆಚ್ಚುವರಿ ಪ್ರದೇಶದ ಕಾರ್ಯಗಳನ್ನು ನೋಡಿಕೊಳ್ಳಬೇಕೆನ್ನುವ ಆದೇಶಕ್ಕೆ ನಮ್ಮ ವಿರೋಧವಿದೆ ಎಂದು ತಿಳಿಸಿದರು.
*ಬೇಡಿಕೆಗಳು*
ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ ಗೌರವ ಧನವನ್ನು ಹೆಚ್ಚಿಸಬೇಕು, ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚುವೆಚ್ಚಗಳನನ್ನು ಪರಿಗಣಿಸಿ ಕನಿಷ್ಟ 2 ಸಾವಿರ ರೂ. ಗೌರವ ಧನವನ್ನು ಹೆಚ್ಚಿಸಬೇಕು, 60 ವರ್ಷಕ್ಕೆ ನಿವೃತ್ತರಾಗುವ ಆಶಾ ಕಾರ್ಯಕರ್ತರಿಗೆ 5 ಲಕ್ಷ ಇಡುಗಂಟು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಿದರು. ಸೋಮವಾರಪೇಟೆ ತಾಲ್ಲೂಕು ಸಂಘದ ಅಧ್ಯಕ್ಷೆ ಶಾಂತಿ ಐ.ಜಿ. ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










