


ವಿರಾಜಪೇಟೆ ಸೆ.15 NEWS DESK : ದಂತ ವೈದ್ಯಕೀಯ ಕ್ಷೇತ್ರ ಹೊಸ ಆವಿಷ್ಕಾರಗಳನ್ನು ಹುಟ್ಟು ಹಾಕುತ್ತಿದೆ. ಈ ನಿಟ್ಟಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ತಂತ್ರಜ್ಞಾನದೊಂದಿಗೆ ಪ್ರಯೋಗಗಳನ್ನು ಮಾಡುವುದರತ್ತ ಗಮನ ಹರಿಸಬೇಕು ಎಂದು ಮೈಸೂರು ಕೊಡಗು ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಹೇಳಿದರು. ವಿರಾಜಪೇಟೆಯ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಕಾಲೇಜು ಸಭಾಂಗಣದಲ್ಲಿ ನಡೆದ 2025ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಉದ್ಘಾಟಿಸಿ, ವೈದ್ಯಕೀಯ ಅಧ್ಯಯನ ಮುಗಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಪದವಿ ಮುಗಿಸಿದ ವಿದ್ಯಾರ್ಥಿಗಳು ಇನ್ಮುಂದೆ ವೈದ್ಯರಾಗಿ ಕಾರ್ಯನಿರ್ವಹಿಸಲಿದ್ದು, ಆತ್ಮ ವಿಶ್ವಾಸ ಮತ್ತು ಆತ್ಮಸ್ಥೈರ್ಯದ ಮೂಲಕ ಉದ್ಯೋಗ ಮಾಡಬೇಕಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಒತ್ತು ನೀಡಿ ಬಡ ಜನತೆಗೆ ಅನುಕೂಲ ಆಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ಕರೆ ನೀಡಿದರು. ಕಳೆದ 25 ವರ್ಷಗಳಲ್ಲಿ ಸಂಸ್ಥೆಯ ಅದ್ಭುತ ಪ್ರಗತಿಯನ್ನು ಶ್ಲಾಘಿಸಿದ ಅದರು ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಎನ್ನುವ ಹೆಗ್ಗಳಿಕೆ ಸಂಸ್ಥೆಗಿದೆ. ಉತ್ತಮ ಬೋಧಕ ವರ್ಗವನ್ನು ಹೊಂದಿರುವ ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಸಂಸ್ಥೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಮುಂದೆ ವೈದ್ಯರಾದ ಬಳಿಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ದಂತ ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಬೇಕು. ಈ ಪದವಿ ಪಡೆಯುವುದು ನಿಮ್ಮ ಬದುಕಿನಲ್ಲಿ ಒಂದು ಮೈಲಿಗಲ್ಲಾಗಿದೆ. ದಂತ ವೈದ್ಯಕೀಯ ಪದವಿ ಮುಗಿಸಿಕೊಂಡು ಕೇವಲ ವೈದ್ಯರಷ್ಟೇ ಆಗದೆ, ವೈದ್ಯಕೀಯ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸುವ ವಿಶ್ವಾಸ ಹೊಂದಬೇಕು. ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡುವತ್ತ ಗಮನ ಹರಿಸಿ, ಪ್ರಸ್ತುತ ಕೃತಕ ಬುದ್ಧಿಮತ್ತೆ, ಡಿಜಿಟಲ್ ಡೆಂಟಲ್ ಪರಿಣತಿ ಹೊಂದಲು ಪ್ರಯತ್ನ ಪಡಬೇಕು. ಹೊಸ ಪ್ರಯೋಗ, ಆವಿಷ್ಕಾರಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು. ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯ ಡೀನ್ ಡಾ.ಸುನೀಲ್ ಮುದ್ದಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, 25 ವರ್ಷಗಳ ಸಂಸ್ಥೆಯ ಗಮನಾರ್ಹ ಪ್ರಯಾಣವನ್ನು ಪ್ರತಿಬಿಂಬಿಸಿದರು. ಸಮಗ್ರ ಶಿಕ್ಷಣದ ಬದ್ಧತೆಯನ್ನು ಎತ್ತಿ ತೋರಿಸಿದರಲ್ಲದೆ ವಿದ್ಯಾರ್ಥಿಗಳನ್ನು ಅತ್ಯುತ್ತಮ ದಂತ ವೃತ್ತಿಪರರು ಮಾತ್ರವಲ್ಲದೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಸಹಾನುಭೂತಿ ಹೊಂದಿರುವ ನಾಯಕರಾಗಿಯೂ ಬೆಳೆಸುತ್ತದೆ ಎಂದರು. ಸಂಸ್ಥೆಯ ಬೆಳವಣಿಗೆ, ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಮಾನ್ಯತೆ, ರಾಷ್ಟ್ರೀಯ ಅಂತರಾಷ್ಟ್ರೀಯ ಅನುದಾನಗಳ ಬೆಂಬಲದೊಂದಿಗೆ ನಡೆಯುತ್ತಿರುವ ಸಂಶೋಧನ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದರು. ಕಳೆದ 25 ವರ್ಷಗಳಲ್ಲಿ ಕೊಡಗಿನ ದೂರದ ಮೂಲೆಗಳಲ್ಲಿ ಮೌಕಿಕ ಆರೋಗ್ಯ ವಿತರಣೆಯನ್ನು ಸಕ್ರಿಯಗೊಳಿಸಿದ್ದು 2025 ರಲ್ಲಿ 30,000ಕ್ಕೂ ಹೆಚ್ಚು ಜನರಿಗೆ ಪ್ರಯೋಜನವಾಗಿದೆ. ಇದರಲ್ಲಿ ಮುಖದ ಪುನರ್ವಸತಿ ಕಾರ್ಯವಿಧಾನಗಳು, 3000 ಕ್ಯಾನ್ಸರ್ ಸ್ಕ್ರೀನಿಂಗ್ಗಳು ಮತ್ತು ವಿಶೇಷ ಅಗತ್ಯವಿರುವ 800ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ಮಾಡಲಾಗಿದೆ. ತರಬೇತಿ ಮತ್ತು ರೋಗಿಗಳ ಆರೈಕೆಯಲ್ಲಿ ಕೃತಕ ಬುದ್ಧಿಮತ್ತೆ, ವರ್ದಿತ ರಿಯಾಲಿಟಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿದರು. ಬದಲಾಗುತ್ತಿರುವ ಜಗತ್ತಿನ ದಂತ ವೈದ್ಯಕ್ಷೀಯ ಕ್ಷೇತ್ರದಲ್ಲಿ ಭಾರತ ಸಹ ಮುಂಚೂಣಿಯಲ್ಲಿದೆ. ವಿದ್ಯಾಭ್ಯಾಸದ ಜೊತೆಯಲ್ಲಿ ಸಂಶೋಧನೆ ಹೊಸ ವಿದ್ಯಾರ್ಥಿಗಳಿಗೆ ಅಗತ್ಯವಿದ್ದು ಇದರಿಂದ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭ ಸಂಸದ ಯದುವೀರ್ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಕೆ.ಸಿ.ಪೆÇನ್ನಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಉಪಪ್ರಾಂಶುಪಾಲ ಡಾ. ಜಿತೇಶ್ ಜೈನ್ ಮತ್ತು ವಿವಿಧ ವಿಭಾಗಗಳ ಉಪನ್ಯಾಸಕರು ವೇದಿಕೆಯಲ್ಲಿದ್ದರು. 30 ಮಂದಿಗೆ ಸ್ನಾತಕೋತ್ತರ ಪದವಿ ಪ್ರದಾನ ಮತ್ತು 40 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಲ್ಲಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಡಾ. ಗಾಯತ್ರಿ ಎಸ್ ಚಂದ್ರನ್ ಅವರಿಗೆ ಕಂಜಿತಂಡ ಎಂ. ಕುಶಾಲಪ್ಪ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಕೆ.ಪೆÇನ್ನಮ್ಮ ಕುಶಾಲಪ್ಪ ಚಿನ್ನದ ಪದಕವನ್ನು ಶೈಕ್ಷಣಿಕ ಸಾಧನೆಗಾಗಿ ಡಾ.ರಜಿನಿ ಅವರು ಪಡೆದುಕೊಂಡರು. ಪದವಿ ಪ್ರತಿನಿಧಿ ಡಾ. ಅಲ್ಫಿನಾ ಹಾಗೂ ಸ್ನಾತಕೋತ್ತರ ಪ್ರತಿನಿಧಿ ಡಾ. ಸಮಂತಾ ಗಣಪತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪೆÇೀಷಕರನ್ನು ಪ್ರತಿನಿಧಿಸಿದ ಡಾ. ದೊಡ್ಡಯ್ಯ ಸಂಸ್ಥೆಯ ವೈಯಕ್ತಿಕ ತರಬೇತಿ ಮತ್ತು ಮಾರ್ಗದರ್ಶನಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ದಂತ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರು, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ಪಡೆದ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು. ವಿದ್ಯಾರ್ಥಿಗಳಿಂದ ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರಕಾರಗಳ ಪ್ರದರ್ಶನಗಳು ಮೂಡಿಬಂದವು.
ವರದಿ: ಈಶಾನ್ವಿ









