


ಸುಂಟಿಕೊಪ್ಪ ಸೆ.15 NEWS DESK : ಐಗೂರು ಕೃಷಿ ಪತ್ತಿನ ಸಹಕಾರ ಸಂಘವು 1,12,07,041 ರೂಗಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಬಿ.ಶಿವಕುಮಾರ್ ತಿಳಿಸಿದರು. ಸಂಘದ ಸಭಾಂಗಣದಲ್ಲಿ ನಡೆದ 49ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. 2024-25ನೇ ಸಾಲಿನಲ್ಲಿ ಸೋಮವಾರಪೇಟೆ ತಾಲ್ಲೂಕಿನ ಪ್ರಾ.ಕೃ.ಪ.ಸ.ಸಂಘಗಳ ಪೈಕಿ ಉತ್ತಮ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಿ ಕೆಡಿಸಿಸಿ ಬ್ಯಾಂಕಿನ ಸದಸ್ಯ ಸಹಕಾರ ಸಂಘಗಳಿಗೆ ನೀಡುವ ಬಹುಮಾನ ಮತ್ತು ಪ್ರಶಸ್ತಿಗೆ ಆಯ್ಕೆಯಾಗಿ, ಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ಪ್ರಥಮ ಬಹುಮಾನ ಮತ್ತು ಪ್ರಶಸ್ತಿ ದೊರಕಿದೆ. ಅಪೆಕ್ಸ್ ಬ್ಯಾಂಕಿನಿಂದಲೂ ಉತ್ತಮ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಿದಕ್ಕಾಗಿ ಬಹುಮಾನ ದೊರೆತ್ತಿದೆ ಎಂದು ಅವರು ಹೇಳಿದರು. ಸಂಘವು ಉತ್ತಮ ಸೇವೆ ನೀಡುವುದರೊಂದಿಗೆ ರೂ. 200 ಕೋಟಿಗಳಷ್ಟು ವ್ಯವಹಾರ ನಡೆಸಿ ರೂ. 1 ಕೋಟಿ 12 ಲಕ್ಷÀ್ಷ ನಿವ್ವಳ ಲಾಭಗಳಿಸಿದ್ದು ವರ್ಷದಿಂದ ವರ್ಷಕ್ಕೆ ಸಂಘ ಲಾಭದತ್ತ ದಾಪುಗಾಲು ಇಡುತ್ತಿದ್ದು, ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ. ಬರುವ ವರ್ಷ ಸುವರ್ಣ ಮಹೋತ್ಸವ ಆಚರಿಸಲಿದ್ದು, ಆ ನಿಟ್ಟಿನಲ್ಲಿ ಸುವರ್ಣಭವನ ನಿರ್ಮಿಸಲಾಗುವುದು ಇದಕ್ಕೆ ಸದಸ್ಯರುಗಳ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು. ಸಂಘದಲ್ಲಿ ಮಾರ್ಚ್ 2025ಕ್ಕೆ ಒಟ್ಟು 1875 ಜನರ ಪೂರ್ಣ ಪಾಲು ಹೊಂದಿದ ಸದಸ್ಯರುಗಳಿದ್ದು, ರೂ. 45 ಕೋಟಿ 62 ಲಕ್ಷ ದುಡಿಯುವ ಬಂಡವಾಳವಿರುತ್ತದೆ. ರೂ. 2 ಕೋಟಿ 35 ಲಕ್ಷ ಪಾಲು ಬಂಡವಾಳವಿರುತ್ತದೆ. ಒಟ್ಟು ರೂ. 37 ಕೋಟಿ 76 ಲಕ್ಷಗಳನ್ನು ವಿವಿಧ ರೀತಿಯ ಸಾಲಗಳಾಗಿ ನೀಡಿದ್ದು ಈ ಪೈಕಿ ನಮ್ಮ ಸಂಘದ ಸ್ವಂತ ಬಂಡವಾಳದಿಂದ ರೂ. 17 ಕೋಟಿ 38 ಲಕ್ಷಗಳನ್ನು ವಿತರಿಸಲಾಗಿದೆ. ಸ್ವಸಹಾಯ ಗುಂಪು ಸಾಲವನ್ನು ಮತ್ತು ಕೆ.ಸಿ.ಸಿ ಸಾಲವನ್ನು ಶೇ. 100 ರಷ್ಟು ವಸೂಲಾತಿ ಮಾಡಲಾಗಿದೆ. ಸಂಘದಲ್ಲಿ ಎಲ್ಲಾ ವಿಧದ ಠೇವಣಿಗಳು ಸೇರಿ ಒಟ್ಟು ರೂ. 16 ಕೋಟಿ ಠೇವಣಿಗಳು ಇರುತ್ತದೆ. 472 ಕುಟುಂಬದ 1644 ಸದಸ್ಯರುಗಳನ್ನು ಯಶಸ್ವಿನಿ ಯೋಜನೆಯಲ್ಲಿ ನೊಂದಾಯಿಸಿದ್ದು ರೂ. 2 ಲಕ್ಷಗಳನ್ನು ಈ ಯೋಜನೆಗೆ ಜಮೆ ಮಾಡಲಾಗಿದ್ದು ಹಲವಾರು ಸದಸ್ಯರು ಇದರ ಪ್ರಯೋಜನವನ್ನು ಪಡೆದಿರುತ್ತಾರೆ. ಸಂಘದಲ್ಲಿ ವಷಾಂತ್ಯಕ್ಕೆ ಒಟ್ಟು ರೂ. 22 ಲಕ್ಷದ 25 ಸಾವಿರ ಮರಣ ನಿಧಿ ಜಮೆಯಾಗಿರುತ್ತದೆ. ನಿಧನರಾದ ಸದಸ್ಯರ ನಾಮಿನಿಯವರಿಗೆ 2 ಲಕ್ಷಗಳನ್ನು ಮರಣ ನಿಧಿಯಾಗಿ ಪಾವತಿಸಲಾಗಿದೆ. ಐಗೂರು ಹಾಗೂ ಯಡವಾರೆ ನ್ಯಾಯಬೆಲೆ ಅಂಗಡಿಯಲ್ಲಿ ನಿಯಂತ್ರಿತ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆ. ಗೊಬ್ಬರ ವ್ಯಾಪಾರವನ್ನು ಹಾಗೂ ಕೋವಿ ತೋಟಾಗಳನ್ನು ಮಾರಾಟ ಮಾಡಲಾಗುತ್ತಿದೆ. ಇದೇ ಸಂದರ್ಭ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಹಾಗೂ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಹಾಗೂ ಸಂಘದ ವ್ಯಾಪ್ತಿಯ ಸರ್ಕಾರಿ ಶಾಲೆಯ 7ನೇ ತರಗತಿ, ಎಸ್‍ಎಸ್‍ಎಲ್‍ಸಿ, ಮತ್ತು ದ್ವಿತೀಯ ಪಿಯುಸಿ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಹಾಗೂ ಸಂಘದ ವ್ಯಾಪ್ತಿಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಮುಂದೆಯು ಸದಸ್ಯರು ನಮ್ಮ ಸಂಘದೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡು, ಉತ್ತಮ ವ್ಯಹಾರವನ್ನು ಮಾಡುತ್ತಾ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದಲ್ಲಿ ಇನ್ನೂ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ಹೇಳಿದರು. ವೇದಿಕೆಯಲ್ಲಿ ಅಧ್ಯಕ್ಷರಾದ ಹೆಚ್.ಬಿ.ಶಿವಕುಮಾರ್, ಉಪಾಧ್ಯಕ್ಷರಾದ ಡಿ.ಎಸ್.ಚಂಗಪ್ಪ, ನಿರ್ದೇಶಕರುಗಳಾದ ಡಿ. ಹೆಚ್.ವಿಶ್ವನಾಥ ರಾಜೇಅರಸ್, ಕೆ.ಪಿ.ರೋಷನ್, ಎಲ್.ಎಂ.ರಾಜೇಶ್, ಸುನುಕಿಶೋರ್, ಬಿ.ಕೆ.ದಾಕ್ಷಾಯಿಣಿ, ಕೆ.ಈ.ಕುಟ್ಟಪ್ಪ, ಎಸ್.ಬಿ.ಸಂತೋಷ್, ಎಸ್.ಪಿ.ಕೀರ್ತೀಪ್ರಸಾದ್, ಕೆ.ಎಲ್.ಹೊನ್ನಪ್ಪ, ಹೆಚ್.ಜೆ.ಬಸಪ್ಪ, ಎಸ್.ಕೆ.ಲಕ್ಷ್ಮಣ, ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಎ.ಎ.ಡಿಕ್ಕಿರಾಜು ಹಾಗೂ ಮೇಲ್ವಿಚಾರಕರಾದ ಕೆ.ಎಂ.ಶ್ರೀಜು ಉಪಸ್ಥಿತರಿದ್ದರು.









