
ಮಡಿಕೇರಿ NEWS DESK ಅ.19 : ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಕೊಡವ ಸಮಾಜ ಸರಕಾರದ ಅನುದಾನ ರೂ.6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕಾಮಗಾರಿಯ ಪ್ರಗತಿ ಪರಿಶೀಲಿಸಿದರು. ಕೊಡವ ಸಮಾಜದ ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸರಕಾರದ ಅನುದಾನ ಸದ್ಬಳಕೆಯಾಗುವಂತೆ ಕಾಳಜಿ ತೋರಬೇಕೆಂದು ಸಲಹೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಬಾಳುಗೋಡು ಕೊಡವ ಸಮಾಜದ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಪರಿಣಾಮ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆ ಮೂಲಕ ಅನುದಾನ ಬಿಡುಗಡೆಗೊಂಡಿದೆ ಎಂದರು. ರೂ.6 ಕೋಟಿ ವೆಚ್ಚದಲ್ಲಿ ಕೊಡವ ಸಮಾಜದ ವಿವಿಧ ಅಭಿವೃದ್ಧಿ ಕಾರ್ಯ, ಮೈದಾನದ ಅಭಿವೃದ್ಧಿ, ಪ್ರೇಕ್ಷಕರ ಗ್ಯಾಲರಿ, ತಡೆಗೋಡೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ಗುಣಮಟ್ಟ ತೃಪ್ತಿ ತಂದಿದ್ದು, ಅಭಿವೃಧ್ಧಿ ಕಾರ್ಯ ಶೀಘ್ರ ಪೂರ್ಣಗೊಳ್ಳುವ ವಿಶ್ವಾಶವಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆತರುವ ಪ್ರಯತ್ನ ಮಾಡುವುದಾಗಿ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು. ಬಾಳುಗೋಡುವಿನ ಹಾಕಿ ಮೈದಾನ ಅತ್ಯಂತ ಗುಣಮಟ್ಟದಿಂದ ಕೂಡಿದ್ದು, ಕೊಡಗಿನ ಕ್ರೀಡಾಪಟುಗಳ ಭವಿಷ್ಯಕ್ಕೆ ಉತ್ತಮ ಕೊಡುಗೆಯಾಗಲಿದೆ ಎಂದು ಹೇಳಿದರು. ಕೊಡವ ಸಮಾಜದ ಅಧ್ಯಕ್ಷ ವಿಷ್ಣು ಕಾರ್ಯಪ್ಪ ಅವರು ಮಾತನಾಡಿ ರಾಜ್ಯ ಸರಕಾರ ಶಾಸಕ ಪೊನ್ನಣ್ಣ ಅವರ ಕೋರಿಕೆಯಂತೆ ರೂ.10 ಕೋಟಿ ಅನುದಾನ ಒದಗಿಸಿದೆ. ರೂ.6 ಕೋಟಿಯಲ್ಲಿ ಬಾಳಗೋಡು ಕೊಡುವ ಸಮಾಜದ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ರೂ.3 ಕೋಟಿಯನ್ನು 30 ಕೊಡವ ಸಮಾಜಗಳಿಗೆ ತಲಾ ರೂ.10 ಲಕ್ಷದಂತೆ ನೀಡಲಾಗಿದೆ. ರೂ.1 ಕೋಟಿಯನ್ನು ಭಾಗಮಂಡಲ ಕೊಡವ ಸಮಾಜದ ಅಭಿವೃದ್ಧಿಗಾಗಿ ಮೀಸಲಿರಿಸಲಾಗಿದೆ ಎಂದರು. ಇದೇ ನ.6 ರಿಂದ 9 ರವರೆಗೆ ಕೊಡವ ಹಾಕಿ ನಮ್ಮೆ ಬಾಳುಗೋಡು ಮೈದಾನದಲ್ಲಿ ನಡೆಯಲಿದ್ದು, ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು. ಕೊಡವ ಸಮಾಜದ ಪ್ರಮುಖರಾದ ಅಜ್ಜಿಕುಟ್ಟಿರ ಗಿರೀಶ್, ಮನು, ಸೋಮಣ್ಣ, ಕುಂಡಚ್ಚಿರ ಮಂಜು ದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.











