
ಮಡಿಕೇರಿ NEWS DESK ನ.6 : ಚಲನಚಿತ್ರ ರಂಗದಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಕೊಡಗಿನ ಮೊದಲ ಮಹಿಳಾ ನಿರ್ದೇಶಕಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ‘ಗೃಹಶೋಭಾ ಇನ್ ಇನ್ ಸ್ಪೈರ್ ಪ್ರಶಸ್ತಿ’ ಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಇಂಟರ್ ನ್ಯಾಷನಲ್ ಸೆಂಟರ್ ಸಭಾಂಗಣದಲ್ಲಿ ನಡೆದ ‘ಗೃಹಶೋಭಾ ಇನ್ ಇನ್ ಸ್ಪೈರ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಯಶೋಧ ಪ್ರಕಾಶ್ ಅವರಿಗೆ ಮನೋರಂಜನೆಯ ಮೂಲಕ ಮಹಿಳಾ ಸಬಲೀಕರಣ ಮತ್ತು ಸಿನಿಮಾ ರಂಗದ ತಾಂತ್ರಿಕ ವಿಭಾಗದ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡೆಲ್ಲಿ ಪ್ರೆಸ್ ನ ಪ್ರಧಾನ ಸಂಪಾದಕ ಪರೇಶ್ನಾಥ್ ಮಾತನಾಡಿ ಮಹಿಳಾ ಸಾಧಕರನ್ನು ಪ್ರೋತ್ಸಾಹಿಸಲು ಮತ್ತು ಮುಂದಿನ ಸಾಧನೆಗೆ ಸ್ಫೂರ್ತಿ ತುಂಬಲು ಪ್ರತಿ ವರ್ಷ ‘ಗೃಹಶೋಭಾ ಇನ್ ಇನ್ ಸ್ಪೈರ್ ಪ್ರಶಸ್ತಿ’ ಯನ್ನು ನೀಡಲಾಗುತ್ತಿದೆ ಎಂದರು. ಡೆಲ್ಲಿ ಪ್ರೆಸ್ ನ ಪ್ರಕಾಶಕ ಅನಂತ್ ನಾಥ್ ಮಾತನಾಡಿ ಮಹಿಳಾ ಪ್ರಧಾನವಾಗಿರುವ ಗೃಹಶೋಭಾ ಪುಸ್ತಕ 8 ಭಾಷೆಗಳಲ್ಲಿ ಪ್ರಕಟಗೊಳ್ಳುತ್ತಿದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪ್ರಶಸ್ತಿ ವಿಜೇತ ನೃತ್ಯ ಕಲಾವಿದೆ ಮಧು ನಟರಾಜ್ ಅವರು ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ‘ಕಂದೀಲು’ ಕನ್ನಡ ಚಿತ್ರದ ಮೂಲಕ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಗೃಹಶೋಭಾ ಇನ್ ಇನ್ ಸ್ಪೈರ್ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ಈ ಪ್ರಶಸ್ತಿ ಅನಿರೀಕ್ಷಿತವಾಗಿದೆ, ನನ್ನ ಸಾಧನೆಯ ಬಗ್ಗೆ ನನ್ನಿಂದ ಯಾವುದೇ ಮಾಹಿತಿಯನ್ನು ಪಡೆದಿಲ್ಲ. ಆದರೆ ಎಲ್ಲಿಂದಲೋ ಮಾಹಿತಿ ಸಂಗ್ರಹಿಸಿ ನನಗೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಈ ಪ್ರಶಸ್ತಿ ನನ್ನ ಸಿನಿ ಸೇವೆಗೆ ಮತ್ತಷ್ಟು ಉತ್ತೇಜನ ನೀಡಿದೆ. ಇದು ಅತ್ಯಂತ ಸಂತಸದ ಕ್ಷಣ ಎಂದು ಹರ್ಷ ವ್ಯಕ್ತಪಡಿಸಿದರು. ನನ್ನ ನಿರ್ದೇಶನದ ‘ಕಂದೀಲು’ ಕನ್ನಡ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರೆತ್ತಿದೆ, ಇದೀಗ ‘ಕೌಮುದಿ’ ಎಂಬ ಚಿತ್ರವನ್ನು ಪೂರ್ಣಗೊಳಿಸಿದ್ದು, ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರ ಮೂಢನಂಬಿಕೆಗಳ ವಿರುದ್ಧ ಬೆಳಕು ಚೆಲ್ಲಿದೆ ಎಂದರು.
*ಮೊದಲ ನಿರ್ದೇಶಕಿ*
ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ರಾಷ್ಟç ಪ್ರಶಸ್ತಿ ಪಡೆದ ಕೊಡಗಿನ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದ “ಕಂದೀಲು” ಚಲನಚಿತ್ರ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾದ ಸ್ಪರ್ಧಾತ್ಮಕ ವಿಭಾಗದಲ್ಲಿ “2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ” ಯನ್ನು ತನ್ನದಾಗಿಸಿಕೊಂಡಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಈ ಚಿತ್ರ ವಿಶ್ವ ವಿಖ್ಯಾತ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಇನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆದುಕೊಂಡಿತ್ತು. ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಯಶೋಧ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ‘ಕಂದೀಲು’ ಚಿತ್ರ ಮೂಡಿ ಬಂದಿದೆ. ಇವರ ಪತಿ ಕೊಟ್ಟುಕತೀರ ಪ್ರಕಾಶ್ ಕಾರ್ಯಪ್ಪ ಅವರು ಕೂಡ ನಿರ್ಮಾಪಕ, ನಿರ್ದೇಶಕ ಹಾಗೂ ನಟರಾಗಿ ಖ್ಯಾತಿ ಗಳಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.












