

ಮಡಿಕೇರಿ ನ.19 NEWS DESK : ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯ ಮಟ್ಟದ ‘ಸಹಕಾರ ರತ್ನ’ ಪ್ರಶಸ್ತಿಗೆ ಕೊಡಗು ಜಿಲ್ಲೆಯ ವಿರಾಜಪೇಟೆಯ ನಿವಾಸಿ ಹಾಗೂ ಹಿರಿಯ ಸಹಕಾರಿಗಳಾದ ಬಲ್ಲಡಿಚಂಡ ಬಿ. ನಾಣಯ್ಯ ಅವರು ಭಾಜನರಾಗಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ವಾಸವಿರುವ ಇವರು 86 ವಸಂತಗಳನ್ನು ಕಂಡಿದ್ದು, ವೃತ್ತಿಯಲ್ಲಿ ವಕೀಲರಾಗಿರುತ್ತಾರೆ. ಶ್ರೀಯುತರು ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಈ ಸಂಸ್ಥೆಗೆ 1967 ರಲ್ಲಿ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು ಇದೇ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರದಲ್ಲಿ ವಿರಾಜಪೇಟೆ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನಲ್ಲಿ 1970 ರಿಂದ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸುಮಾರು 10 ವರ್ಷಗಳ ಕಾಲ, ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳದಲ್ಲಿ 3 ವರ್ಷ ನಿರ್ದೇಶಕರಾಗಿ, ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘ, ಮಡಿಕೇರಿಯಲ್ಲಿ 15 ವರ್ಷ ನಿರ್ದೇಶಕರಾಗಿ ಹಾಗೂ 4 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಇಷ್ಟೇ ಅಲ್ಲದೆ ರಾಜ್ಯಮಟ್ಟದ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಈ ಸಂಸ್ಥೆಯಲ್ಲಿ 1975-76 ರಿಂದ ನಿರ್ದೇಶಕರಾಗಿ ಸುಮಾರು 6 ವರ್ಷಗಳ ಕಾಲ, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಬೆಂಗಳೂರು ಈ ಸಂಸ್ಥೆಯಲ್ಲಿ 1980 ರಿಂದ ಸತತವಾಗಿ 11 ವರ್ಷಗಳ ಕಾಲ ನಿರ್ದೇಶಕರಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ, ಬೆಂಗಳೂರು ಈ ಸಂಸ್ಥೆಯಲ್ಲಿ 3 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳಿಂದ ಉತ್ತಮ ಸಹಕಾರಿ ಪ್ರಶಸ್ತಿಯನ್ನು ಹಾಗೂ 2017 ರಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಸಹಕಾರ ಸಪ್ತ್ತಾಹ ಆಚರಣೆ ಸಂದರ್ಭದಲ್ಲಿ ಇವರ ಸೇವೆಯನ್ನು ಗುರುತಿಸಿ ಕೊಡಗು ಸಹಕಾರ ರತ್ನ ಎಂಬ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಗಿರುತ್ತದೆ. ಪ್ರಸ್ತುತ ಶ್ರೀಯುತರನ್ನು ಕರ್ನಾಟಕ ಸರ್ಕಾರದಿಂದ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿರುತ್ತದೆ.











